ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌ನಲ್ಲಿ ಕನ್ನಡಿಗರ ಕಮಾಲ್‌...

Last Updated 19 ಜನವರಿ 2020, 19:30 IST
ಅಕ್ಷರ ಗಾತ್ರ

ಕರ್ನಾಟಕ ತಂಡಕ್ಕೆ ಎಷ್ಟು ಪದಕ....?

ಈ ಬಾರಿಯ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದಲ್ಲಿ ಸೈಕ್ಲಿಂಗ್‌ ಕ್ರೀಡೆಯನ್ನು ಸೇರ್ಪಡೆ ಮಾಡಲಾಗಿದೆ ಎನ್ನುವ ಸುದ್ದಿ ಹೊರಬಿದ್ದಾಗ ಎದುರಾದ ಮೊದಲ ಪ್ರಶ್ನೆಯೇ ಇದು.

ಏಕೆಂದರೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಸಾಕಷ್ಟು ಪದಕಗಳನ್ನು ಜಯಿಸಿರುವ ಸ್ಪರ್ಧಿಗಳನ್ನು ಒಳಗೊಂಡ ರಾಜ್ಯ ತಂಡದವರು ಖೇಲೊ ಇಂಡಿಯಾದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇತ್ತು. ಇದಕ್ಕೆ ರಾಜ್ಯದ ಸೈಕ್ಲಿಸ್ಟ್‌ಗಳು ದಿಟ್ಟ ಉತ್ತರ ನೀಡಿದ್ದಾರೆ.

ನಾಲ್ಕು ದಿನ ನಡೆದ ಸ್ಪರ್ಧೆಗಳಲ್ಲಿ ಒಂದು ಚಿನ್ನ, ಐದು ಬೆಳ್ಳಿ, ಎಂಟು ಕಂಚಿನ ಪದಕಗಳನ್ನು ಜಯಿಸಿ ಸೈಕ್ಲಿಂಗ್‌ನಲ್ಲಿ ಕಠಿಣ ಸವಾಲೊಡ್ಡಲು ನಾವೂ ಸೈ ಎನ್ನುವುದನ್ನು ರಾಜ್ಯ ತಂಡದವರು ಸಾಬೀತು ಮಾಡಿದ್ದಾರೆ. ಮಹಾರಾಷ್ಟ್ರ, ಮಣಿಪುರ, ದೆಹಲಿ ಮತ್ತು ರಾಜಸ್ಥಾನ ರಾಜ್ಯಗಳ ಸ್ಪರ್ಧಿಗಳ ಸವಾಲನ್ನು ಎದುರಿಸಿ ಪದಕಗಳನ್ನು ಜಯಿಸಿದ್ದಾರೆ. ಮೊದಲ ದಿನದಿಂದಲೂ ರಾಜ್ಯದ ಸೈಕ್ಲಿಸ್ಟ್‌ಗಳು ಚಿನ್ನದ ಪದಕಕ್ಕಾಗಿ ಭಾರಿ ಹೋರಾಟ ನಡೆಸಿದ್ದರು. ಇದಕ್ಕೆ ಫಲ ಲಭಿಸಿದ್ದು ಸೈಕ್ಲಿಂಗ್‌ ಸ್ಪರ್ಧೆಗಳ ಕೊನೆಯ ದಿನ. ಕರ್ನಾಟಕ ಮಹಿಳಾ ತಂಡದವರು ‌21 ವರ್ಷದೊಳಗಿನವರ 4,000 ಮೀಟರ್‌ ಟೀಮ್‌ ಪರ್ಸ್ಯೂಟ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿ ಸ್ವರ್ಣದ ಕೊರಗು ನೀಗಿಸಿದರು. ಖೇಲೊ ಇಂಡಿಯಾ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಜಯಿಸಿದ ಬೆಂಗಳೂರಿನ ಕೀರ್ತಿ ರಂಗಸ್ವಾಮಿ, ಜಮಖಂಡಿಯ ದಾನಮ್ಮ ಚಿಚಖಂಡಿ, ವಿಜಯಪುರದ ಸಹನಾ ಕುಡಿಗಾನೂರ, ಮೇಘಾ ಗೂಗಾಡ, ರಾಜು ಭಾಟಿ, ವೆಂಕಪ್ಪ ಕೆಂಗಲಗುತ್ತಿ, ವಿಜಯಪುರದ ಸಚಿನ್ ರಂಜಣಗಿ, ‌ಅಂಕಿತಾ ರಾಠೋಡ ಹಿಂದೆಯೂ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಜಯಿಸಿದ್ದರು.

17 ವರ್ಷದೊಳಗಿನವರ ವಿಭಾಗದಲ್ಲಿ ರಾಜ್ಯ ತಂಡ ಚಿನ್ನದ ಪದಕ ಜಯಿಸುವಲ್ಲಿ ವಿಫಲವಾದರೂ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು. ಈ ವಿಭಾಗದಲ್ಲಿ ಅಂಡಮಾನ್‌ ಮತ್ತು ನಿಕೋಬಾರ್ ತಂಡ (ಐದು ಚಿನ್ನ ಮತ್ತು ಒಂದು ಕಂಚು) ಅಗ್ರಸ್ಥಾನ ಸಂಪಾದಿಸಿತು. ಮಹಾರಾಷ್ಟ್ರ (ನಾಲ್ಕು ಚಿನ್ನ), ಮಣಿಪುರ (ಎರಡು ಚಿನ್ನ, ಆರು ಬೆಳ್ಳಿ, ಒಂದು ಕಂಚು) ಕ್ರಮವಾಗಿ ನಂತರದ ಎರಡು ಸ್ಥಾನಗಳನ್ನು ಪಡೆದವು. 21 ವರ್ಷದ ಒಳಗಿನವರ ವಿಭಾಗದ ಪದಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ ಲಭಿಸಿತು. ಒಂದು ಕಂಚು, ನಾಲ್ಕು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ಲಭಿಸಿದವು. ಮಹಾರಾಷ್ಟ್ರ (ಐದು ಚಿನ್ನ, ನಾಲ್ಕು ಬೆಳ್ಳಿ) ಅಗ್ರಸ್ಥಾನ ಪಡೆಯಿತು.

ಹೊಸ ಟೂರ್ನಿಗಳೇ ಆಸರೆ

ರಾಜ್ಯದಲ್ಲಿ ಸೈಕ್ಲಿಂಗ್‌ನಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ಪ್ರತಿಭೆಗಳು ಬರುತ್ತಿದ್ದಾರೆ. ಸ್ಪರ್ಧಿಗಳು ಹೆಚ್ಚಾದಂತೆಲ್ಲ ಟೂರ್ನಿಗಳು ಕೂಡ ಹೆಚ್ಚಾಗಬೇಕು. ಆದ್ದರಿಂದ ಖೇಲೊ ಇಂಡಿಯಾದಂಥ ಮಹತ್ವದ ಟೂರ್ನಿಯಲ್ಲಿಯೂ ಅವಕಾಶ ಸಿಕ್ಕಿದ್ದು ಮಹತ್ವದ ಹೆಜ್ಜೆಯಾಗಿದೆ.

‘ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ ರಾಜ್ಯದ ಹಲವಾರು ಸೈಕ್ಲಿಸ್ಟ್‌ಗಳು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಟೂರ್ನಿಗಳ ಸಂಖ್ಯೆಯೂ ಹೆಚ್ಚಾದರೆ ಸಾಕಷ್ಟು ಅವಕಾಶಗಳು ಲಭಿಸುತ್ತವೆ. ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಸೈಕ್ಲಿಂಗ್‌ ಕ್ರೀಡೆಗೂ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಷಯ. ಇದರಿಂದ ದೇಶದ ಸೈಕ್ಲಿಸ್ಟ್‌ಗಳಿಗೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಶೈಲ ಕುರಣಿ ಅಭಿಪ್ರಾಯಪಡುತ್ತಾರೆ.

ಕರ್ನಾಟಕ ತಂಡದಲ್ಲಿದ್ದ ಸೈಕ್ಲಿಸ್ಟ್‌ಗಳು

21 ವರ್ಷದೊಳಗಿನವರು: ವೆಂಕಪ್ಪ ಕೆಂಗಲಗುತ್ತಿ, ಜಿ.ಟಿ. ಗಗನರೆಡ್ಡಿ, ವಿಶ್ವನಾಥ ಗಡಾದ, ಸಚಿನ ರಂಜಣಗಿ, ಗಣೇಶ ಕುಡಿಗಾನೂರ, ರಾಜು ಭಾಟಿ. ಬಾಲಕರ ವಿಭಾಗ, 17 ವರ್ಷದೊಳಗಿನವರು: ಮಧು ಕಾಡಾಪುರ, ಮಲ್ಲಿಕಾರ್ಜುನ ಯಾದವಾಡ, ರಾಘವೇಂದ್ರ ವಂದಾಲ, ಸಂಪತ್ ಪಾಸ್ಮೇಲ, ಪ್ರತಾಪ ಪಡಚಿ.

ಮಹಿಳೆಯರ ವಿಭಾಗ, 21 ವರ್ಷದೊಳಗಿನವರು: ದಾನಮ್ಮ ಚಿಚಖಂಡಿ, ಸಹನಾ ಕುಡಿಗಾನೂರ, ಕೀರ್ತಿ ರಂಗಸ್ವಾಮಿ, ಸೌಮ್ಯಾ ಅಂತಾಪೂರ, ಮೇಘಾ ಗೂಗಾಡ. ಬಾಲಕಿಯರ ವಿಭಾಗ, 17 ವರ್ಷದೊಳಗಿನವರು: ಅಂಕಿತಾ ರಾಠೋಡ, ಅಕ್ಷತಾ ಭೂತನಾಳ, ಭಾವನಾ ಪಾಟೀಲ, ಭಾಗ್ಯಶ್ರೀ ಮಠಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT