ಭಾನುವಾರ, ಜೂನ್ 7, 2020
28 °C
ಅನುಮತಿ ಪಡೆಯದೇ ತುರ್ತು ಸಭೆಯಲ್ಲಿ ಚುನಾವಣೆ ದಿನಾಂಕ ನಿಗದಿ

ಕಬಡ್ಡಿ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ

ಪ್ರಮೋದ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯು ಕಾಲಮಿತಿಯೊಳಗೆ ಚುನಾವಣೆ ನಡೆಸದ ಕಾರಣಕ್ಕಾಗಿ ಕಬಡ್ಡಿ ಸಂಸ್ಥೆಗೆ ಸಹಕಾರ ಇಲಾಖೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ.

ಕಬಡ್ಡಿ ಸಂಸ್ಥೆಯ ಹಿಂದಿನ ಕಾರ್ಯ ಕಾರಿ ಸಮಿತಿಯ ನಾಲ್ಕು ವರ್ಷಗಳ ಆಡಳಿತಾವಧಿ 2019ರ ಸೆ. 19ರಂದು ಪೂರ್ಣಗೊಂಡಿತ್ತು. ಈ ಅವಧಿಗೂ ಮುನ್ನ ಚುನಾವಣೆ ನಡೆಯಬೇಕಿತ್ತು. ಸಮಿತಿಯು ಚುನಾವಣೆ ನಡೆಸದೇ ಬೈಲಾ ಉಲ್ಲಂಘಿಸಿದ್ದು ಖಚಿತವಾಗಿದೆ. ಇದೇ ವರ್ಷದ ಮಾರ್ಚ್‌ 8ರಂದು ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ಯಾರ ಅನುಮತಿ ಪಡೆಯದೇ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ಮಾ. 31ರಂದು ಚುನಾವಣೆ ನಿಗದಿ ಮಾಡಿದ್ದು ಕರ್ನಾಟಕ ಸಂಘಗಳ ಕಾಯ್ದೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದು ಸಹಕಾರ ಇಲಾಖೆ ಮೇ 19ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದು ಎಂಬುದರ ಬಗ್ಗೆ ಲಿಖಿತ ಉತ್ತರ ಕೊಡುವಂತೆ ಕಬಡ್ಡಿ ಸಂಸ್ಥೆಗೆ ಸೂಚಿಸಲಾಗಿತ್ತು. ಲಾಕ್‌ಡೌನ್‌ ಕಾರಣದಿಂದ 15 ದಿನಗಳ ಕಾಲಾವಕಾಶ ಕೊಡುವಂತೆ ಕೋರಿದ್ದ ಗಡುವು ಕೂಡ ಮುಗಿದು ಹೋಗಿದೆ. ಹಿಂದಿನ ಸಮಿತಿ ಕಾನೂನು ಬಾಹಿರವಾಗಿ ಅಧಿಕಾರದಲ್ಲಿ ಮುಂದುವರೆದಿದೆ. 2018–19 ಮತ್ತು 2019–20ನೇ ಸಾಲಿನಲ್ಲಿ ಕಬಡ್ಡಿ ಸಂಸ್ಥೆ ವಾರ್ಷಿಕ ಮಹಾಸಭೆ ನಡೆಸಿ ಲೆಕ್ಕಪತ್ರಗಳನ್ನು ಸಲ್ಲಿಸದೇ ಇರುವುದು ಕೂಡ ನಿಯಮ ಉಲ್ಲಂಘನೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿ ಸಿದ ರಾಜ್ಯ ಕಬಡ್ಡಿ ಸಂಸ್ಥೆ ಹಿಂದಿನ ಅಧ್ಯಕ್ಷ ಹನುಮಂತೆಗೌಡ ‘ಭಾರತ ಕಬಡ್ಡಿ ಫೆಡರೇಷನ್‌ ಚುನಾವಣೆ ಸಲುವಾಗಿ ಕಾದ ಕಾರಣ ರಾಜ್ಯ ಸಂಸ್ಥೆಗೆ ಸಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಮುಂದೆ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಚುನಾವಣೆ ನಡೆಯಲಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು