ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಲಗ್ಗೆ ಇರಿಸಿದ ಕರ್ನಾಟಕ ಪೊಲೀಸ್

ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌: ಜಲಂಧರ್‌ನ ಐಟಿಬಿಪಿ ಎದುರಾಳಿ
Last Updated 8 ಡಿಸೆಂಬರ್ 2021, 15:23 IST
ಅಕ್ಷರ ಗಾತ್ರ

ಬೆಂಗಳೂರು: ಜಾರ್ಖಂಡ್ ಪೊಲೀಸ್ ತಂಡದ ಪ್ರಬಲ ಪೈಪೋಟಿ ಮೀರಿ ನಿಂತ ಕರ್ನಾಟಕ ಪೊಲೀಸ್ ತಂಡ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿತು.

ಬೆಂಗಳೂರು ಹಾಕಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಂಟರ ಘಟ್ಟದ ಹಣಾಹಣಿಯಲ್ಲಿ ಕರ್ನಾಟಕ ತಂಡ ಜಾರ್ಖಂಡ್ ಪೊಲೀಸ್ ವಿರುದ್ಧ 1–0 ಅಂತರದ ಜಯ ಸಾಧಿಸಿತು. ಕೊನೆಯ ಕ್ವಾರ್ಟರ್‌ನಲ್ಲಿ (54ನೇ ನಿಮಿಷ) ಉಮೇಶ್ ಆರ್‌.ಮುತಗಾರ್ ಗಳಿಸಿದ ಗೋಲು ಕರ್ನಾಟಕದ ಕೈ ಹಿಡಿಯಿತು.

ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ಪೊಲೀಸ್ 2–1ರಲ್ಲಿ ಒಡಿಶಾ ಪೊಲೀಸ್‌ ವಿರುದ್ಧ ಜಯ ಗಳಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ತಲಾ ಒಂದೊಂದು ಗೋಲು ಗಳಿಸಿ ಮುನ್ನಡೆ ಸಾಧಿಸಿದ್ದ ತಮಿಳುನಾಡು ಕೊನೆಯ ಕ್ವಾರ್ಟರ್‌ನಲ್ಲಿ ಒಂದು ಗೋಲು ಬಿಟ್ಟುಕೊಟ್ಟಿತು.

ಕೆ.ಕಳಿರಾಜ್ 14ನೇ ನಿಮಿಷದಲ್ಲೂ ಎಂ.ವಿಜಯ್ 25ನೇ ನಿಮಿಷದಲ್ಲೂ ತಮಿಳುನಾಡು ತಂಡಕ್ಕಾಗಿ ಚೆಂಡನ್ನು ಗುರಿ ಮುಟ್ಟಿಸಿದರು. ಒಡಿಶಾ ಪರವಾಗಿ ಬಿಕಾಶ್ ಲಾಕ್ರ 55ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪಂಜಾಬ್ ‍ಪೊಲೀಸ್ 2–0ಯಿಂದ ದೆಹಲಿಯ ಸಿಐಎಸ್‌ಎಫ್‌ ವಿರುದ್ಧ ಗೆಲುವು ಸಾಧಿಸಿತು. ಹರದೀಪ್ ಸಿಂಗ್ (14ನೇ ನಿಮಿಷ) ಮತ್ತು ದೂಪಿಂದರ್ ದೀಪ್ ಸಿಂಗ್ (36ನೇ ನಿ) ಗೋಲು ಗಳಿಸಿದರು.

ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಜಲಂಧರ್‌ನ ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) 2–1ರಲ್ಲಿ ಸಿಆರ್‌ಪಿಎಫ್‌ ವಿರುದ್ಧ ಜಯ ಗಳಿಸಿತು. ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಐಟಿಬಿಪಿ ಏಳನೇ ನಿಮಿಷದಲ್ಲಿ ಜಸ್ವಿಂದರ್‌ ಸಿಂಗ್ ಅವರ ಗೋಲಿನೊಂದಿಗೆ ಮುನ್ನಡೆ ಸಾಧಿಸಿತು. 12ನೇ ನಿಮಿಷದಲ್ಲಿ ರಾಹುಲ್ ಶರ್ಮಾ ಮೂಲಕ ಸಿಆರ್‌ಪಿಎಫ್ ತಿರುಗೇಟು ನೀಡಿತು. ಆದರೆ 41ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತು. ರವಿ ಕ್ಸೆಸ್ ಚೆಂಡನ್ನು ಗುರಿ ಸೇರಿಸಿದರು.

ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಕರ್ನಾಟಕ ಮತ್ತು ಐಟಿಬಿಪಿ, ತಮಿಳುನಾಡು ಮತ್ತು ಪಂಜಾಬ್ ಪೊಲೀಸ್ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT