ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಯಾಡ್ ಕ್ರೀಡಾ ಜ್ಯೋತಿಗೆ ಸ್ವಾಗತ: ಚೆಸ್ ಕಂಪು ಹರಡಿದ ಜ್ಯೋತಿಯಾತ್ರೆ

Last Updated 19 ಜುಲೈ 2022, 5:44 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯಲಿರುವ 44ನೇ ಚೆಸ್‌ ಒಲಿಂಪಿಯಾಡ್‌ನ ಕ್ರೀಡಾ ಜ್ಯೋತಿ ಯಾತ್ರೆಯು ಉದ್ಯಾನನಗರಿಯಲ್ಲಿ ಸೋಮವಾರ ವೈಭವದಿಂದ ನಡೆಯಿತು.

ಚೆಸ್‌ ಒಲಿಂಪಿಯಾಡ್‌ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್‌ 10ರ ವರೆಗೆ ಆಯೋಜನೆಯಾಗಿದೆ. ದೇಶದ ವಿವಿಧ ನಗರಗಳಲ್ಲಿ ಯಾತ್ರೆ ಮಾಡಿದ ಜ್ಯೋತಿಯನ್ನು ಸೋಮವಾರ ಬೆಳಿಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಾಯಿತು.

ಕರ್ನಾಟಕದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಜಿ.ಎ.ಸ್ಟ್ಯಾನಿ, ಎಂ.ಎಸ್‌.ತೇಜಕುಮಾರ್‌ ಮತ್ತು ಗಿರೀಶ್‌ ಕೌಶಿಕ್‌ ಅವರು ವಿಮಾನ ನಿಲ್ದಾಣದಲ್ಲಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ಆ ಬಳಿಕ ಮೆರವಣಿಗೆ ಮೂಲಕ ರಾಜಭವನಕ್ಕೆ ತರಲಾಯಿತು.

ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಚೆಸ್‌ ಸಂಸ್ಥೆ ಆಶ್ರಯದಲ್ಲಿ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್, ರಾಜ್ಯ ಚೆಸ್‌ ಸಂಸ್ಥೆ ಅಧ್ಯಕ್ಷ ಡಿ.ಪಿ.ಅನಂತ, ಕಾರ್ಯದರ್ಶಿ ಅರವಿಂದ್ ಶಾಸ್ತ್ರಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಚೆಸ್‌ ಸ್ಪರ್ಧಿಗಳು ಪಾಲ್ಗೊಂಡರು.

ಜುಲೈ 19 ರಂದು ಮಂಗಳೂರಿನಲ್ಲಿ ಜ್ಯೋತಿಯಾತ್ರೆ ನಡೆಯಲಿದೆ.

100 ವರ್ಷಗಳ ಇತಿಹಾಸ ಹೊಂದಿರುವ ಚೆಸ್‌ ಒಲಿಂಪಿಯಾಡ್‌ ಭಾರತದಲ್ಲಿ ಆಯೋಜನೆಯಾಗಿರುವುದು ಇದೇ ಮೊದಲು. ಈ ಬಾರಿ ದಾಖಲೆಯ 187 ರಾಷ್ಟ್ರಗಳ ತಂಡಗಳು ಪಾಲ್ಗೊಳ್ಳುತ್ತಿವೆ.

ಅಂತರರಾಷ್ಟ್ರೀಯ ಚೆಸ್‌ ಸಂಸ್ಥೆ (ಫಿಡೆ) ಇದೇ ಮೊದಲ ಬಾರಿಗೆ ಚೆಸ್‌ ಒಲಿಂಪಿಯಾಡ್‌ನಲ್ಲಿ ಒಲಿಂಪಿಕ್‌ ಮಾದರಿಯಲ್ಲಿ ಜ್ಯೋತಿಯಾತ್ರೆ ಪರಿಚಯಿಸಿತ್ತು. ಜ್ಯೋತಿ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಕಳೆದ ತಿಂಗಳು ಚಾಲನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT