ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ನಲ್ಲಿ ಚಿನ್ನವೇ ಗುರಿಯಾಗಲಿ: ಪೈಲ್ವಾನ್‌ ಕರ್ತಾರ್‌ ಸಿಂಗ್‌

ಪೈಲ್ವಾನ್‌ ಕರ್ತಾರ್‌ ಸಿಂಗ್‌ ಸಂದರ್ಶನ
Last Updated 1 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಧಾರವಾಡದಲ್ಲಿ ಇತ್ತೀಚಿಗೆ ನಡೆದ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದವರು ಭಾರತದ ಮಾಜಿ ಅಂತರರಾಷ್ಟ್ರೀಯ ಕುಸ್ತಿಪಟು ಕರ್ತಾರ್‌ ಸಿಂಗ್‌. 67 ವರ್ಷದ ಕರ್ತಾರ್‌ ಅನೇಕ ಯುವ ಪೈಲ್ವಾನರಲ್ಲಿ ಸ್ಫೂರ್ತಿ ತುಂಬಿದರು. ಹಲವಾರು ಕೌಶಲಗಳನ್ನು ಹೇಳಿಕೊಟ್ಟು ತಾವು ಕುಸ್ತಿ ಆಡುತ್ತಿದ್ದ ದಿನಗಳು ಹೇಗಿದ್ದವು ಎನ್ನುವುದನ್ನು ನೆನಪಿಸಿಕೊಂಡರು. ಇದೇ ವರ್ಷದ ಜುಲೈನಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತೀಯರಿಗೆ ಚಿನ್ನವೇ ಗುರಿಯಾಗಿರಲಿ ಎಂದು ಹಾರೈಸಿದರು. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಕರ್ನಾಟಕ ಕುಸ್ತಿ ಹಬ್ಬದ ಬಗ್ಗೆ ಹೇಳಿ?

ರಾಜ್ಯ ಸರ್ಕಾರ ಕರ್ನಾಟಕ ಕುಸ್ತಿ ಹಬ್ಬ ಶುರುಮಾಡಿದ್ದೇ ದೊಡ್ಡ ಹೆಮ್ಮೆ. ಅನೇಕ ಜನಪ್ರತಿನಿಧಿಗಳು ಮತ್ತು ಸಂಘಟನಾ ಸಮಿತಿ ಸದಸ್ಯರು ಮುತುವರ್ಜಿಯಿಂದ ಹಬ್ಬ ಮಾಡಿದ್ದಾರೆ. ಹೋದ ವರ್ಷ ಬೆಳಗಾವಿಯಲ್ಲಿ ಕುಸ್ತಿ ಹಬ್ಬ ನಡೆದಾಗಲೂ ಬಂದಿದ್ದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಹಬ್ಬಕ್ಕೆ ಹೆಚ್ಚು ಪ್ರಚಾರ ಸಿಕ್ಕಿದೆ. ದೇಶದ ಪ್ರಮುಖ ಪೈಲ್ವಾನರನ್ನು ಸೆಳೆದಿದೆ.

ಟೋಕಿಯೊ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಭಾರತ ಎಷ್ಟು ಪದಕ ಗೆಲ್ಲಬಹುದು?

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಭರವಸೆ ಇರುವುದೇ ಕುಸ್ತಿಯಲ್ಲಿ. 2008ರಲ್ಲಿ ಸುಶೀಲ್‌ ಕುಮಾರ್‌ ಕಂಚು, 2012ರಲ್ಲಿ ಸುಶೀಲ್‌ ಬೆಳ್ಳಿ ಮತ್ತು ಯೋಗೇಶ್ವರ ದತ್‌ ಕಂಚು, 2016ರಲ್ಲಿ ಸಾಕ್ಷಿ ಮಲಿಕ್‌ ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ನಾಲ್ವರು ಕುಸ್ತಿ ಪಟುಗಳು ಅರ್ಹತೆ ಪಡೆದಿದ್ದಾರೆ. ಅರ್ಹತೆ ಗಳಿಸಿಕೊಳ್ಳಲು ಇನ್ನೂ ಎರಡು ಮಹತ್ವದ ಟೂರ್ನಿಗಳಿದ್ದು ಇನ್ನಷ್ಟು ಪೈಲ್ವಾನರು ಅವಕಾಶ ಪಡೆಯುವ ವಿಶ್ವಾಸವಿದೆ. ಹಿಂದಿನ ಮೂರೂ ಒಲಿಂಪಿಕ್ಸ್‌ನಲ್ಲಿ ಭಾರತ ಕುಸ್ತಿಯಲ್ಲಿ ಪದಕಗಳನ್ನು ಜಯಿಸುತ್ತಲೇ ಬಂದಿದೆ. ಆದರೆ, ಯಾರೂ ಚಿನ್ನ ಜಯಿಸಿಲ್ಲ. ಇಷ್ಟು ವರ್ಷ ಯಾವುದಾದರೂ ಪದಕಕ್ಕಾಗಿ ನಮ್ಮ ಕುಸ್ತಿಪಟುಗಳು ಹೋರಾಟ ಮಾಡುತ್ತಿದ್ದರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿಯೇ ಹೋರಾಡಬೇಕು.

ಗ್ರಾಮೀಣ ಭಾಗದಲ್ಲಿ ಈಗಲೂ ಮಣ್ಣಿನ ಮೇಲೆ ಕುಸ್ತಿ ಆಡಲಾಗುತ್ತದೆ. ಆದರೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಮ್ಯಾಟ್ ಮೇಲೆ ಆಡಿಸಲಾಗುತ್ತಿದೆಯಲ್ಲ; ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಹೆಗ್ಗುರಿಗೆ ಇದು ತೊಡಕಾಗುವುದಿಲ್ಲವೇ?

ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಾರಣ ಈಗಲೂ ಮಣ್ಣಿನ ಮೇಲೆ ಆಡಲಾಗುತ್ತದೆ. ಮಣ್ಣಿನಲ್ಲಿ ಮತ್ತು ಗರಡಿ ಮನೆಗಳಲ್ಲಿ ಅಭ್ಯಾಸ ಮಾಡಿದವರಿಗೆ ಮ್ಯಾಟ್‌ ಮೇಲೆ ಆಡುವುದು ಕಷ್ಟವಾಗುತ್ತದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲೇಬೇಕು ಎನ್ನುವ ಛಲ ಇರುವವರು ಕಾಲದ ಅನಿವಾರ್ಯತೆಗೆ ತಕ್ಕಂತೆ ಬದಲಾಗಬೇಕು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಿಧಾನವಾಗಿ ಬದಲಾವಣೆಯಾಗುತ್ತಿದೆ. ಪಂಜಾಬ್‌ನ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಈಗಲೂ ಮಣ್ಣಿನ ಮೇಲೆಯೇ ನಿತ್ಯ ಅಭ್ಯಾಸ.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆಯ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಆದರೆ, ಭಾರತೀಯರ ನಿರೀಕ್ಷೆಗೆ ತಕ್ಕಷ್ಟು ಪದಕಗಳು ಬರುತ್ತಿಲ್ಲವಲ್ಲ.

ಭಾರತದಲ್ಲಿ ಕುಸ್ತಿ ಪರಂಪರಾಗತವಾಗಿ ನಡೆದುಕೊಂಡು ಬಂದಿದ್ದರೂ ವೃತ್ತಿಪರವಾಗಿ ಸ್ವೀಕರಿಸಿದವರು ಬಹಳ ಕಡಿಮೆ. 1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟಕ್ಕೂ ಮುನ್ನ ಕುಸ್ತಿ ಅಷ್ಟೊಂದು ಪ್ರಸಿದ್ಧಿಯಾಗಿರಲಿಲ್ಲ. ಆ ಬಳಿಕ ಹಂತ ಹಂತವಾಗಿ ಬೆಳೆಯಿತು. ಇತ್ತೀಚಿಗಂತೂ ಮಾಧ್ಯಮಗಳು ವ್ಯಾಪಕ ಪ್ರಚಾರ ನೀಡುತ್ತಿವೆ. ಕುಸ್ತಿ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎನ್ನುವ ಭರವಸೆ ಪೈಲ್ವಾನರಲ್ಲಿ ಮೂಡಿದೆ. ಆದ್ದರಿಂದ ಗರಡಿ ಮನೆ, ಮಣ್ಣಿನ ಅಖಾಡದ ಅಭ್ಯಾಸಕ್ಕಷ್ಟೇ ಸೀಮಿತವಾಗಿದ್ದವರು ಈಗ ಮ್ಯಾಟ್‌ ಕುಸ್ತಿ ಶೈಲಿಗೆ ಹೊಂದಿಕೊಳ್ಳುತ್ತಿದ್ದಾರೆ. ಮುಂದೆ ಇನ್ನಷ್ಟು ಪದಕಗಳು ಬರಲು ಈಗಿನ ಬೆಳವಣಿಗೆ ಪೂರಕವಾಗಲಿದೆ.

ಈಗಿನ ಕ್ರೀಡಾಪಟುಗಳು ವಿದೇಶಿ ಕೋಚ್‌ಗಳೇ ಬೇಕು ಎನ್ನುತ್ತಾರಲ್ಲ, ಇದು ಸರಿಯೇ?

ನಮ್ಮ ದೇಶದ ಕೋಚ್‌ಗಳು ಆಯಾ ಕ್ರೀಡೆಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಆದರೆ, ಅವರಿಗೆ ಬದ್ಧತೆ ಕಡಿಮೆ. ನಮ್ಮವರೇ ಕೋಚ್‌ಗಳಾದರೆ ಅನಗತ್ಯ ಹಸ್ತಕ್ಷೇಪ ಹೆಚ್ಚಾಗುತ್ತದೆ. ಪಾರದರ್ಶಕತೆ ಕಾಯ್ದುಕೊಳ್ಳಲು, ವೃತ್ತಿಪರತೆ ಬೆಳೆಸಲು ವಿದೇಶಿ ಕೋಚ್‌ಗಳ ನೇಮಕ ಸೂಕ್ತ.

ಪೈಲ್ವಾನ್‌ ಕರ್ತಾರ್‌ ಸಿಂಗ್‌ ಬಗ್ಗೆ

ಪಂಜಾಬ್‌ನ ಕರ್ತಾರ್‌ ಸಿಂಗ್‌ 1978ರ ಕಾಮನ್‌ವೆಲ್ತ್‌ ಕ್ರೀಡಾಕೂಟದ 90 ಕೆ.ಜಿ. ವಿಭಾಗದಲ್ಲಿ ಕಂಚು, 1982ರ ಏಷ್ಯನ್‌ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 1978ರ ಬ್ಯಾಂಕಾಕ್‌ ಮತ್ತು 1896ರ ಸೋಲ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. 1982ರ ದೆಹಲಿ ಏಷ್ಯನ್‌ ಕೂಟದಲ್ಲಿ ಬೆಳ್ಳಿ ಪಡೆದಿದ್ದರು. ಇವರ ಕ್ರೀಡಾ ಸಾಧನೆಯನ್ನು ಮೆಚ್ಚಿ 1982ರಲ್ಲಿ ಅರ್ಜುನ ಪ್ರಶಸ್ತಿ, 1987ರಲ್ಲಿ ಪದ್ಮಶ್ರೀ ಗೌರವ ಸಂದಿದೆ. ವೃತ್ತಿಪರ ಕ್ರೀಡೆಯಿಂದ ನಿವೃತ್ತರಾದ ಬಳಿಕವೂ 1992ರಲ್ಲಿ ಕೊಲಂಬಿಯಾದಲ್ಲಿ ಮತ್ತು 1993ರಲ್ಲಿ ಟೊರೊಂಟೊದಲ್ಲಿ ವೆಟರನ್ಸ್‌ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT