ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ರಾಷ್ಟ್ರೀಯ ಶಿಬಿರದಿಂದ ಹೊರಗಿಟ್ಟಿದ್ದಕ್ಕೆ ಕಶ್ಯಪ್‌ ಕಿಡಿ

Last Updated 25 ಆಗಸ್ಟ್ 2020, 15:33 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಬ್ಯಾಡ್ಮಿಂಟನ್‌ ಶಿಬಿರದಿಂದ ತಮ್ಮನ್ನು ಹೊರಗಿಟ್ಟಿರುವುದಕ್ಕೆ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಾಜಿ ಚಾಂಪಿಯನ್‌ ಪರುಪಳ್ಳಿ ಕಶ್ಯಪ‍್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್ ಅರ್ಹತೆ ವಿಶ್ವಾಸ ಮೂಡಿಸಿರುವ ಎಂಟು ಮಂದಿಗೆ ಶಿಬಿರವನ್ನು ಸೀಮಿತಗೊಳಿಸಿರುವುದು ‘ತರ್ಕಬದ್ಧವಲ್ಲ’ ಎಂದು ಅವರು ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆಯುವ ಅವಕಾಶ ನನಗೂ ಇದೆ. ಆದರೆ ತರಬೇತಿ ಶಿಬಿರದಿಂದ ಹೊಗಿಟ್ಟಿರುವುದರಿಂದ ಆ ಗುರಿ ತಲುಪಲು ಬೇರೆ ಮಾರ್ಗ ಕಾಣುತ್ತಿಲ್ಲ ಎಂದು 33 ವರ್ಷದ ಆಟಗಾರ ನುಡಿದರು.

‘ಶಿಬಿರದ ಕುರಿತು ನನಗೆ ಹಲವು ಪ್ರಶ್ನೆಗಳಿವೆ. ಎಂಟು ಮಂದಿಗೆ ಶಿಬಿರಕ್ಕೆ ಅವಕಾಶ ಮಾಡಿಕೊಟ್ಟಿದ್ದು ತರ್ಕಬದ್ಧವಲ್ಲ. ಅಲ್ಲದೆ ಈ ಎಂಟು ಮಂದಿ ಹೇಗೆ ಒಲಿಂಪಿಕ್ಸ್‌ ಟಿಕೆಟ್‌ ಪಡೆಯುವ ಭರವಸೆ ಮೂಡಿಸಿದ್ದಾರೆ? ನನ್ನ ಪ್ರಕಾರ ಮೂವರು ಮಾತ್ರ ತಮ್ಮ ಸ್ಥಾನ ಖಚಿತಪಡಿಸಿದ್ದಾರೆ‘ ಎಂದು ಕಶ್ಯಪ್‌ ಪ್ರತಿಪಾದಿಸಿದ್ದಾರೆ.

‘ಸಾಯಿ ಪ್ರಣೀತ್ (13)‌ ಹಾಗೂ ಕಿದಂಬಿ ಶ್ರೀಕಾಂತ್ (14) ಬಳಿಕ ನಾನು ವಿಶ್ವ ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿದ್ದೇನೆ. ಹಾಗಾದರೆ ನನ್ನನ್ನು ಯಾಕೆ ಪರಿಗಣಿಸಿಲ್ಲ‘ ಎಂದು ಕಶ್ಯಪ್‌ ಪ್ರಶ್ನಿಸಿದರು.

ತೆಲಂಗಾಣ ಸರ್ಕಾರದ ಅನುಮತಿಯ ಬಳಿಕ ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್‌) ಪುಲ್ಲೇಲ ಗೋಪಿಚಂದ್‌ ಅಕಾಡೆಮಿಯಲ್ಲಿ ಆಗಸ್ಟ್‌ 7ರಿಂದ ತರಬೇತಿ ಶಿಬಿರವನ್ನು ಪುನರಾರಂಭಿಸಲು ಅವಕಾಶ ನೀಡಿದೆ.

ಕಶ್ಯಪ್‌ ಹಾಗೂ ಅವರ ಪತ್ನಿ, ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಗೋಪಿಚಂದ್‌ ಅಕಾಡೆಮಿಯ ಸಮೀಪದ ಪ್ರತ್ಯೇಕ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ್ದರು.

ತನ್ನ ವಿಚಾರಗಳನ್ನು ಸಾಯ್‌ ಗಮನಕ್ಕೆ ತಂದಿದ್ದು, ಅವರ ಪ್ರತಿಕ್ರಿಯೆ ತೃಪ್ತಿ ತಂದಿಲ್ಲ ಎಂದು ಕಶ್ಯಪ್‌ ಹೇಳಿದರು.

‘ಒಲಿಂಪಿಕ್ಸ್‌ ಭರವಸೆ ಮೂಡಿಸಿರುವವರ ಪಟ್ಟಿ ಕುರಿತು ಸಾಯ್‌ ಬಳಿ ಚರ್ಚಿಸುವಂತೆ ಗೋಪಿ ಭಯ್ಯಾ (ಪುಲ್ಲೇಲ ಗೋಪಿಚಂದ್‌)ನನಗೆ ಸಲಹೆ ನೀಡಿದರು. ಅದರಂತೆ ನಾನು, ಇನ್ನೂ ಏಳೆಂಟು ಅರ್ಹತಾ ಟೂರ್ನಿಗಳು ಬಾಕಿ ಇರುವಾಗ ಒಲಿಂಪಿಕ್ಸ್‌ಗೆ ಟಿಕೆಟ್‌ ಗಿಟ್ಟಿಸುವ ಅವಕಾಶ ಕಳೆದುಕೊಂಡಿದ್ದಾರೆ ಎಂದು ಹೇಗೆ ನಿರ್ಧರಿಸುತ್ತೀರಿ ಎಂದು ಸಾಯ್‌ನ ಪ್ರಧಾನ ನಿರ್ದೇಶಕರನ್ನು ಪ್ರಶ್ನಿಸಿದೆ‘ ಎಂದು ಕಶ್ಯಪ್‌ ಹೇಳಿದರು.

‘ಒಂದು ದಿನದ ಬಳಿಕ ಸಾಯ್‌ನ ಸಹಾಯಕ ನಿರ್ದೇಶಕರಿಂದ ಉತ್ತರ ಬಂದಿತು. ಇದು ಉನ್ನತ ಅಧಿಕಾರಿಗಳಿಂದ ಬಂದ ನಿರ್ದೇಶನ. ಅವರು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಸಾಯ್‌ ಅಧಿಕಾರಿಗಳ ಜೊತೆ ಮಾತನಾಡಿದ್ದು, ಎಂಟು ಮಂದಿ ಒಲಿಂಪಿಕ್‌ ಟಿಕೆಟ್‌ ಪಡೆಯುವ ನಂಬಿಕೆಯನ್ನು ಹೊಂದಿದ್ದಾರೆ ಎಂಬುದು ಅವರ ಉತ್ತರದಲ್ಲಿತ್ತು. ಇದು ನನಗೆ ವಿಚಿತ್ರ ಎನಿಸಿತು‘ ಎಂದು ಕಶ್ಯಪ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT