ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂರ್ನಿ ನಡೆಸಲು ಕೆಬಿಎ ಬಳಿ ಹಣ ಇಲ್ಲ!

ಪ್ರಾಯೋಜಕತ್ವ ನೀಡಲು ಮುಂದೆ ಬಾರದ ಕಂಪನಿಗಳು: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್‌ ಸಂಸ್ಥೆ
Last Updated 25 ಸೆಪ್ಟೆಂಬರ್ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಡ್ಮಿಂಟನ್‌ ಲೋಕಕ್ಕೆ ಹಲವು ದಿಗ್ಗಜರನ್ನು ಕೊಡುಗೆಯಾಗಿ ನೀಡಿರುವ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಈಗ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ಈ ವರ್ಷದ ನವೆಂಬರ್‌ 27ರಿಂದ ಡಿಸೆಂಬರ್‌ 3ರವರೆಗೆ 15 ಮತ್ತು 17 ವರ್ಷದೊಳಗಿನವರ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ ಆಯೋಜಿಸುವ ಅವಕಾಶ ಕೆಬಿಎಗೆ ಸಿಕ್ಕಿದೆ. ಈ ಚಾಂಪಿಯನ್‌ಷಿಪ್‌ ನಡೆಸಲು ಅಂದಾಜು ₹ 80 ಲಕ್ಷ ಹಣ ಬೇಕಿದ್ದು, ಇಷ್ಟು ಮೊತ್ತ ಈಗ ಸಂಸ್ಥೆಯ ಬಳಿ ಇಲ್ಲ.

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ನೀಡುವ ₹ 25 ಲಕ್ಷ ಪ್ರಶಸ್ತಿ ಮತ್ತು ಪಂದ್ಯದ ಅಧಿಕಾರಿಗಳಿಗೆ (50ರಿಂದ 60 ಮಂದಿ) ನೀಡುವ ಭತ್ಯೆಗೆ ಸರಿಯಾಗಲಿದೆ. ಉಳಿದ₹ 55 ಲಕ್ಷ ಹಣ ಹೊಂದಿಸಲು ಈಗ ಕೆಬಿಎ ಪರದಾಡುತ್ತಿದೆ. ಟೂರ್ನಿಗೆ ಪ್ರಾಯೋಕತ್ವ ನೀಡಲು ಕಂಪನಿಗಳು ಮುಂದೆ ಬಾರದಿರುವುದು ಸಂಸ್ಥೆಯ ಚಿಂತೆಗೆ ಕಾರಣವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಬಿಎ ಕಾರ್ಯದರ್ಶಿ ರಾಜೇಶ್‌ ‘ಅಂತರರಾಷ್ಟ್ರೀಯ ಟೂರ್ನಿಗಳಿಗೆ ಪ್ರಾಯೋಜಕತ್ವ ನೀಡಲು ಸಾಕಷ್ಟು ಕಂಪನಿಗಳು ಮುಂದೆ ಬರುತ್ತವೆ. ಆದರೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಪ್ರಾಯೋಜಕತ್ವ ಕೊಡಲು ಯಾರೂ ಮನಸ್ಸು ಮಾಡುವುದಿಲ್ಲ. ನಾವು ಸಾಕಷ್ಟು ಕಂಪನಿಗಳಿಗೆ ಖುದ್ದಾಗಿ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಪ್ರಾಯೋಜಕತ್ವ ನೀಡುವಂತೆ ಕೆಲ ಕಂಪನಿಗಳಿಗೆ ಇ–ಮೇಲ್‌ಗಳನ್ನೂ ಕಳುಹಿಸಿದ್ದೇವೆ. ಇದಕ್ಕೆ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ’ ಎಂದರು.

‘ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಹಾಗೂ ಇನ್ನಿತರ ಸಣ್ಣಪುಟ್ಟ ಖರ್ಚುಗಳನ್ನು ಸರಿದೂಗಿಸಲು ಕನಿಷ್ಠ₹10 ಲಕ್ಷ ಬೇಕು. ಪ್ರಾಯೋಜಕರಿಂದ₹ 60 ಲಕ್ಷ ಸಿಕ್ಕರೆ ಚಾಂಪಿಯನ್‌ಷಿಪ್‌ ಅನ್ನು ಯಶಸ್ವಿಯಾಗಿ ಆಯೋಜಿಸಬಹುದು. ಇದಕ್ಕೆ ಸರ್ಕಾರದ ನೆರವಿನ ಅಗತ್ಯವೂ ಇದೆ. ಈ ಕುರಿತು ಶೀಘ್ರವೇ ಸಂಬಂಧಪಟ್ಟವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ’ ಎಂದು ಹೇಳಿದರು.

‘ಕ್ರಿಕೆಟಿಗರು ಅಥವಾ ಸಿನಿಮಾ ನಟರನ್ನು ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಿ ಆ ಮೂಲಕ ಪ್ರಾಯೋಜಕರನ್ನು ಸೆಳೆಯುವ ಆಲೋಚನೆಯೂ ಇದೆ. ಈ ನಿಟ್ಟಿನಲ್ಲಿ ರಾಬಿನ್ ಉತ್ತಪ್ಪ, ರಾಹುಲ್‌ ದ್ರಾವಿಡ್‌ ಮತ್ತು ವೆಂಕಟೇಶ್‌ ಪ್ರಸಾದ್‌ ಅವರನ್ನು ಸಂಪರ್ಕಿಸಲು ನಿರ್ಧರಿಸಿದ್ದೇವೆ’ ಎಂದು ರಾಜೇಶ್‌ ನುಡಿದರು.

‘ಚಾಂಪಿಯನ್‌ಷಿಪ್‌ನಲ್ಲಿ ಕ್ರೀಡಾಪಟುಗಳು ಮತ್ತು ನೆರವು ಸಿಬ್ಬಂದಿ ಸೇರಿ ಸುಮಾರು 700 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರ ಊಟ, ವಸತಿ ಮತ್ತು ಪ್ರಯಾಣ ವೆಚ್ಚವನ್ನು ನಾವೇ ಭರಿಸಬೇಕು. ಇದಕ್ಕೆ ಅಂದಾಜು₹ 50 ಲಕ್ಷ ಬೇಕಾಗುತ್ತದೆ. ಈ ಮೊತ್ತ ಹೊಂದಿಸುವುದೇದೊಡ್ಡ ಸವಾಲು’ ಎಂದರು.

**

ಇದೇ ಮೊದಲಲ್ಲ...

ಚಾಂಪಿಯನ್‌ಷಿಪ್‌ ಆಯೋಜಿಸಲು ಕೆಬಿಎ ಹಣಕಾಸಿನ ತೊಂದರೆ ಅನುಭವಿಸುತ್ತಿರುವುದು ಇದೇ ಮೊದಲಲ್ಲ. 2012 ಮತ್ತು 2016ರಲ್ಲೂ ಇಂತಹ ಸಂದಿಗ್ಧತೆ ಎದುರಿಸಿತ್ತು.

2012ರಲ್ಲಿ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ ನಡೆಸಲು ಸಂಸ್ಥೆಗೆ ₹73 ಲಕ್ಷ ಅಗತ್ಯವಿತ್ತು. ಆಗಲೂ ಪ್ರಾಯೋಜಕರನ್ನು ಸೆಳೆಯಲು ಸಂಸ್ಥೆ ಪರದಾಡಿತ್ತು.

2016ರಲ್ಲಿ ಉಡುಪಿಯಲ್ಲಿ 19 ವರ್ಷದೊಳಗಿನವರ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ ಆಯೋಜನೆಯಾಗಿತ್ತು. ಚಾಂಪಿಯನ್‌ಷಿಪ್‌ಗೆ ಪ್ರಾಯೋಜಕತ್ವ ನೀಡಲು ಒಪ್ಪಿದ್ದ ಕಂಪನಿಯೊಂದು ನೋಟು ಅಮಾನ್ಯೀಕರಣದಿಂದಾಗಿ ಕೊನೆ ಗಳಿಗೆಯಲ್ಲಿ ತನ್ನ ನಿರ್ಧಾರ ಬದಲಿಸಿತ್ತು. ರಾಜ್ಯ ಸರ್ಕಾರ ಕೂಡಾ ₹ 25 ಲಕ್ಷ ಹಣ ನೀಡುವ ಭರವಸೆ ನೀಡಿ ಕೊನೆಗೆ ಮಾತು ತಪ್ಪಿತ್ತು.

ಮಣಿಪಾಲ್‌ ವಿಶ್ವವಿದ್ಯಾಲಯ, ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಕ್ರೀಡಾ‍ಪಟುಗಳು ಮತ್ತು ನೆರವು ಸಿಬ್ಬಂದಿಗಳ ಊಟ, ವಸತಿ ಮತ್ತುಪ್ರಯಾಣ ವೆಚ್ಚವನ್ನು ಭರಿಸಿತ್ತು. ಜೊತೆಗೆ ಬ್ಯಾಡ್ಮಿಂಟನ್‌ ಅಂಗಳಗಳನ್ನು ಉಚಿತವಾಗಿ ನೀಡಿತ್ತು. ಹೀಗಾಗಿ ಕೆಬಿಎ ಮುಜುಗರದಿಂದಪಾರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT