ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ತಿದೆ ನೋಡಿ ಕೊಕ್ಕೊ ಲೀಗ್

Last Updated 7 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹೆಸರಿನಲ್ಲಿ ಕ್ರಿಕೆಟ್‌ ಮೂಲಕ ಆರಂಭಗೊಂಡು ಆ ಬಳಿಕ ಹಾಕಿ, ಫುಟ್‌ಬಾಲ್‌, ಕಬಡ್ಡಿ, ಬ್ಯಾಡ್ಮಿಂಟನ್‌, ಕುಸ್ತಿ... ಹೀಗೆ ವಿವಿಧ ಕ್ರೀಡೆಗಳಲ್ಲಿ ಕಾಣಿಸಿಕೊಂಡ ಲೀಗ್‌ ಸಂಸ್ಕೃತಿ ಇದೀಗ ಕೊಕ್ಕೊಗೂ ಕಾಲಿಟ್ಟಿದೆ. ಭಾರತ ಕೊಕ್ಕೊ ಫೆಡರೇಷನ್, ‘ಅಲ್ಟಿಮೇಟ್‌ ಕೊಕ್ಕೊ ಲೀಗ್‌’ ಆರಂಭಿಸಲು ನಿರ್ಧರಿಸಿರುವುದು ಈ ಕ್ರೀಡೆಯ ಪೋಷಕರು, ಕ್ರೀಡಾಪಟುಗಳಲ್ಲಿ ಸಂಚಲನ ಮೂಡಿಸಿದೆ.

ಅಪ್ಪಟ ದೇಸಿ ಕ್ರೀಡೆ ಕೊಕ್ಕೊಗೆ ಇದುವರೆಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಚಾರ ಸಿಕ್ಕಿರಲಿಲ್ಲ. ಇನ್ನೊಂದು ದೇಸಿ ಕ್ರೀಡೆ ಕಬಡ್ಡಿ ‘ಪ್ರೊ ಕಬಡ್ಡಿ ಲೀಗ್‌’ ಮೂಲಕ ಜನಪ್ರಿಯತೆ ಗಳಿಸಿದೆ. ಕೊಕ್ಕೊ ಕೂಡಾ ಆ ಮಟ್ಟಕ್ಕೆ ಏರಬಹುದು ಎಂಬ ನಿರೀಕ್ಷೆಗಳನ್ನು ಈ ಲೀಗ್‌ ಹುಟ್ಟುಹಾಕಿದೆ.

ತಡವಾಗಲು ಕಾರಣವೇನು?

ಕೊಕ್ಕೊ ಆಟದ ನಿಯಮಗಳು ವೃತ್ತಿಪರ ಲೀಗ್‌ನ ಅಗತ್ಯಕ್ಕೆ ತಕ್ಕಂತೆ ಇಲ್ಲ. ಮಾತ್ರವಲ್ಲ, ನಿಯಮದಲ್ಲಿ ಬದಲಾವಣೆ ತರುವುದು ಕಷ್ಟ ಕೂಡಾ ಕಷ್ಟ. ಇದೇ ಕಾರಣದಿಂದ ಯಾರೂ ಲೀಗ್‌ ಅರಂಭಿಸುವ ಗೋಜಿಗೆ ಹೋಗಿರಲಿಲ್ಲ ಎಂದು ಹಿರಿಯ ಕ್ರೀಡಾತಜ್ಞ ಮೈಸೂರಿನ ಪ್ರೊ.ಶೇಷಣ್ಣ ಅವರು ಅಭಿಪ್ರಾಯಪಡುತ್ತಾರೆ.

ಫ್ರಾಂಚೈಸ್‌ ಮಾಲೀಕರು ಮತ್ತು ಟೂರ್ನಿಯ ಸಂಘಟಕರ ಅಗತ್ಯಕ್ಕೆ ತಕ್ಕಂತೆ ಈ ಕ್ರೀಡೆಯನ್ನು ಮಾರ್ಪಾಡು ಮಾಡುವುದು ಕಷ್ಟ. ಅದರಿಂದಾಗಿ ಸ್ವಲ್ಪ ಹಿಂದೆ ಉಳಿದುಕೊಂಡಿದೆ. ಇಲ್ಲದಿದ್ದರೆ ಈ ಹಿಂದೆಯೇ ಕೊಕ್ಕೊ ಕ್ರೀಡೆ ಜನಪ್ರಿಯತೆ ಪಡೆಯುತ್ತಿತ್ತು ಎಂದಿದ್ದಾರೆ. ಇತರ ಕ್ರೀಡೆಗಳಲ್ಲಿ ಆರಂಭಿಸಿರುವ ಲೀಗ್‌ಗಳು ಯಶಸ್ವಿಯಾಗುವುದಕ್ಕೆ ಟಿವಿ ಪ್ರಸಾರದ ಹಕ್ಕುಗಳು ಮತ್ತು ಜಾಹೀರಾತು ಮೂಲಕ ಬಂದ ಹಣ ಕೂಡಾ ಕಾರಣ. ಈ ವಿಷಯದಲ್ಲಿ ಕೊಕ್ಕೊ ಕ್ರೀಡೆಗೆ ತನ್ನದೇ ಅದ ಕೆಲವು ಇತಿಮಿತಿಗಳಿವೆ.

ಕೊಕ್ಕೊದಲ್ಲಿ ತಲಾ ಒಂಬತ್ತು ನಿಮಿಷಗಳ ನಾಲ್ಕು ಅವಧಿಗಳ (ಇನಿಂಗ್ಸ್‌) ಆಟವಿರುತ್ತದೆ. ಒಮ್ಮೆ ಆಟ ಆರಂಭವಾದರೆ ಒಂಬತ್ತು ನಿಮಿಷ ಪೂರ್ಣಗೊಂಡ ಬಳಿಕವೇ ನಿಲ್ಲಬೇಕು. ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸುವಂತಿಲ್ಲ. ಮಧ್ಯದಲ್ಲಿ ಆಟ ನಿಂತರೆ ಮತ್ತೆ ಹೊಸದಾಗಿ ಆರಂಭಿಸಬೇಕು.

ಲೀಗ್‌ನ ಪಂದ್ಯಗಳನ್ನು ನೇರಪ್ರಸಾರ ಮಾಡುವವರಿಗೆ ಆಟದ ನಡುವೆ ಜಾಹೀರಾತು ತೋರಿಸಲು ಅವಕಾಶ ಸಿಗುವುದು ಕಡಿಮೆ. 9 ನಿಮಿಷಗಳ ಅವಧಿ ಮುಗಿದ ಬಳಿಕವೇ ಜಾಹೀರಾತಿಗೆ ಅವಕಾಶ ಸಿಗುತ್ತದೆ. ಪ್ರತಿ ಅವಧಿಯ ಆಟ ಕೊನೆಗೊಂಡಾಗ (ಪಂದ್ಯವೊಂದರಲ್ಲಿ ಮೂರು ಸಲ) ಮಾತ್ರ ಜಾಹೀರಾತು ಪ್ರಸಾರಕ್ಕೆ ಅವಕಾಶ ಸಿಗುತ್ತದೆ.

ನಿಯಮಗಳಿಗೆ ಬದಲಾವಣೆ ತರುವರೇ?

ಹಾಕಿ, ಕ್ರಿಕೆಟ್‌ನಲ್ಲಿ ‘ಟೆಕ್ನಿಕಲ್‌ ಟೈಮ್‌ ಔಟ್‌’ ಹೆಸರಿನಲ್ಲಿ ಆಟವನ್ನು ನಿಲ್ಲಿಸಿ ಜಾಹೀರಾತು ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಕ್ಕೊದಲ್ಲೂ ಇದೇ ರೀತಿಯ ತಂತ್ರ ಅನುಸರಿಸಬಹುದೇ ಎಂಬ ಚರ್ಚೆ ನಡೆಯುತ್ತಿದೆ.

ಒಂಬತ್ತು ನಿಮಿಷಗಳ ಇನಿಂಗ್ಸ್‌ ನಡುವೆ ಟೈಮ್ ಔಟ್‌ ತೆಗೆದುಕೊಂಡರೆ ಆಟದ ಯೋಜನೆ, ವೇಗ ಬದಲಾಗುತ್ತದೆ. ಮತ್ತೆ ಆರಂಭಿಸುವಾಗ ಆಟಗಾರರಿಗೆ ಅದೇ ಲಯ ಕಾಪಾಡಿಕೊಳ್ಳುವುದು ಕಷ್ಟ. ಆದ್ದರಿಂದ ಸಾಕಷ್ಟು ಚಿಂತನೆ ನಡೆಸಬೇಕಿದೆ ಎಂದು ಶೇಷಣ್ಣ ಹೇಳುತ್ತಾರೆ.

ಲೀಗ್‌ನಿಂದಾಗಿ ಕೊಕ್ಕೊ ಕ್ರೀಡೆಯ ಅಂಪೈರಿಂಗ್‌ನ ಗುಣಮಟ್ಟವೂ ಉತ್ತಮವಾಗಬಹುದು. ಪಂದ್ಯವನ್ನು ನಿಯಂತ್ರಿಸುವ ಅಂಪೈರ್‌ಗಳು ಕೆಲವೊಮ್ಮೆ ತಪ್ಪು ತೀರ್ಮಾನ ತೆಗೆದುಕೊಂಡರೆ ಇಡೀ ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂಪೈರ್‌ಗಳು ತುಂಬಾ ದೂರದಲ್ಲಿ ಇದ್ದಾಗ ನಿಖರ ತೀರ್ಪು ನೀಡುವುದು ಕಷ್ಟ ಎಂದರು.

ಕೊಕ್ಕೊದಲ್ಲಿ ತೀರ್ಪು ನೀಡಲು ಯಾವುದೇ ತಂತ್ರಜ್ಞಾನದ ನೆರವು ಬಳಸುತ್ತಿಲ್ಲ. ಫೌಲ್‌, ಔಟ್‌ ತೀರ್ಪು ಕೊಟ್ಟರೆ ಅದನ್ನು ಮರುಪರಿಶೀಲಿಸುವ ಅವಕಾಶ ಇಲ್ಲ. ಏಕೆಂದರೆ ಒಮ್ಮೆ ಆರಂಭವಾದ ಆಟವನ್ನು ನಡುವೆ ನಿಲ್ಲಿಸುವಂತಿಲ್ಲ. ಹೊಸ ಲೀಗ್‌ನಲ್ಲಿ ತೀರ್ಪು ಮರುಪರಿಶೀಲನೆಗೆ ಅವಕಾಶ ದೊರೆಯುವುದೇ? ಹಾಗಾದಲ್ಲಿ ನಿಯಮದಲ್ಲಿ ಯಾವ ರೀತಿ ಬದಲಾವಣೆ ತರಬೇಕು? ತಂತ್ರಜ್ಞಾನವನ್ನು ಎಷ್ಟರಮಟ್ಟಿಗೆ ಬಳಸುತ್ತಾರೆ ಎಂಬುದನ್ನು ಕಾದುನೋಡಬೇಕು ಎನ್ನುತ್ತಾರೆ.

ಹೊಸತನಕ್ಕೆ ಅವಕಾಶ

ಐಪಿಎಲ್‌ ಟೂರ್ನಿ ಕ್ರಿಕೆಟ್‌ ಆಟದಲ್ಲಿ ಹೊಸತನ ತಂದಿದೆ. ಬ್ಯಾಟ್ಸ್‌ಮನ್‌ಗಳು ಹೊಸ ರೀತಿಯ ಹೊಡೆತಗಳ ಮೂಲಕ ರನ್‌ ಕಲೆ ಹಾಕುತ್ತಿದ್ದಾರೆ. ಸಾಂಪ್ರದಾಯಿಕ ಶೈಲಿಯ ಆಟದ ಜತೆಗೆ ಹೊಸ ರೀತಿಯ ಆಟವೂ ಸೇರಿಕೊಂಡಿದೆ. ಕೊಕ್ಕೊ ಲೀಗ್‌ ಆರಂಭವಾದರೆ ಈ ಕ್ರೀಡೆಯನ್ನಾಡುವ ಆಟಗಾರರಲ್ಲೂ ಹೊಸ ರೀತಿಯ ಕೌಶಲ್ಯ, ತಂತ್ರಗಾರಿಕೆ ಹುಟ್ಟಿಕೊಳ್ಳಬಹುದು ಎಂದು ಅಭಿಪ್ರಾಯಪಡುತ್ತಾರೆ.

ವಿದೇಶಿಯವರಿಗೆ ಅವಕಾಶ ನೀಡಿರುವುದಿಂದ ಆ ದೇಶಗಳಲ್ಲಿ ಕೊಕ್ಕೊ ಆಟ ಜನಪ್ರಿಯತೆ ಗಳಿಸಬಹುದು. ಅವರ ತಂತ್ರಗಾರಿಕೆ ತಿಳಿಯುವ ಅವಕಾಶ ಭಾರತದ ಆಟಗಾರರಿಗೆ ಲಭಿಸಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಆಟಗಾರರಿಗೆ ಆರ್ಥಿಕ ಬಲ ದೊರೆಯಲಿದೆ. ಈಗ ಕೊಕ್ಕೊ ಟೂರ್ನಿಗಳಲ್ಲಿ ಗೆದ್ದರೆ ಸಿಗುವ ಬಹುಮಾನದ ಮೊತ್ತ ಬಹಳ ಕಡಿಮೆ. ಎಷ್ಟೋ ಕಡೆ ಗೆದ್ದವರಿಗೆ ಕೇವಲ ಸರ್ಟಿಫಿಕೇಟ್‌ ಮಾತ್ರ ನೀಡುತ್ತಾರೆ. ಕೊಕ್ಕೊ ಲೀಗ್‌ನಿಂದ ಆಟಗಾರರಿಗೆ ಹಣ ಗಳಿಸುವ ಅವಕಾಶ ಲಭಿಸಲಿದೆ.

ಅಡ್ಡದಾರಿ ಹಿಡಿಯುವ ಅಪಾಯ

ಕೊಕ್ಕೊ ಆಟಗಾರರು ದೈಹಿಕ ಸಾಮರ್ಥ್ಯ, ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅಡ್ಡದಾರಿ ಹಿಡಿಯುವ ಸಾಧ್ಯತೆಗಳು ಇವೆ ಎಂದು ಶೇಷಣ್ಣ ಅವರು ಎಚ್ಚರಿಸುತ್ತಾರೆ.

ಹರಾಜಿನಲ್ಲಿ ಫ್ರಾಂಚೈಸ್‌ಗಳು ಖರೀದಿಸಬೇಕಾದರೆ ಆಟಗಾರರಿಗೆ ಕೌಶಲ್ಯ, ಸಾಮ‌ರ್ಥ್ಯ ಹೆಚ್ಚಿಸುವ ಸವಾಲು ಇರುತ್ತದೆ. ಕೆಲವರು ತಮ್ಮ ಸಾಮರ್ಥ್ಯ ಹೆಚ್ಚಿಸಲು ಉದ್ದೀಪನಾ ಮದ್ದು ಸೇವಿಸುವ ಸಾಧ್ಯತೆಗಳೂ ಇರುತ್ತವೆ. ಆದರೆ ಈಗಲೇ ಆ ರೀತಿ ನಕಾರಾತ್ಮಕ ಚಿಂತನೆ ಮಾಡುವುದು ಸರಿಯಲ್ಲ ಎನ್ನುತ್ತಾರೆ.

ಈ ಕ್ರೀಡೆಯಲ್ಲಿ ಆಟಗಾರನಿಗೆ ದೀರ್ಘ ಅವಧಿಯವರೆಗೆ ಆಡಲು ಆಗುವುದಿಲ್ಲ. ಬೇಗನೇ ನಿವೃತ್ತಿ ಪಡೆಯಬೇಕಾಗುತ್ತದೆ. ಕ್ರಿಕೆಟ್‌ ಒಳಗೊಂಡಂತೆ ಇತರ ಕ್ರೀಡೆಗಳಲ್ಲಿ 35 ರಿಂದ 38 ವರ್ಷದವರೆಗೂ ಆಡಬಹುದು. ಆದರೆ ಗರಿಷ್ಠವೆಂದರೆ ಕೊಕ್ಕೊದಲ್ಲಿ 28 ರಿಂದ 30 ವರ್ಷದವರೆಗೆ ಆಡಬಹುದು. ಆ ಬಳಿಕವೂ ಈ ಕ್ರೀಡೆಯಲ್ಲಿ ಮುಂದುವರಿಯುವುದು ಕಷ್ಟ ಎಂದು ಹೇಳುತ್ತಾರೆ.

ಎಂಟು ತಂಡಗಳು

ಕೊಕ್ಕೊ ಲೀಗ್‌ನಲ್ಲಿ ಎಂಟು ತಂಡಗಳನ್ನು ಆಡಿಸುವುದು ಕೆಕೆಎಫ್‌ಐ ಉದ್ದೇಶ. ಟೂರ್ನಿ 21 ದಿನ ನಡೆಯಲಿದ್ದು, ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ಒಟ್ಟು 60 ಪಂದ್ಯಗಳು ನಡೆಯಲಿವೆ.

ಭಾರತ ಅಲ್ಲದೆ ಇಂಗ್ಲೆಂಡ್‌, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ನೇಪಾಳ, ಇರಾನ್‌ ಮತ್ತು ಶ್ರೀಲಂಕಾದ ಆಟಗಾರರಿಗೂ ಲೀಗ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಯುವ ಆಟಗಾರರಿಗೆ ಸೂಕ್ತ ವೇದಿಕೆ ಕಲ್ಪಿಸಲು ಹರಾಜಿನಲ್ಲಿ ಪ್ರತಿ ತಂಡವೂ 19 ವರ್ಷದೊಳಗಿನ ಒಬ್ಬ ಆಟಗಾರನನ್ನು ಖರೀದಿಸಲೇಬೇಕು ಎಂಬ ನಿಯಮ ಜಾರಿಗೊಳಿಸಲು ನಿರ್ಧರಿಸಿದೆ. 12 ಮಂದಿಯ ತಂಡದಲ್ಲಿ ಇಬ್ಬರು ವಿದೇಶಿ ಆಟಗಾರರು ಸೇರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT