ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ: ಸೆಮಿಫೈನಲ್‌ಗೆ ಮೈಸೂರು

ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈಗೆ ಸೋಲು
Last Updated 6 ಜುಲೈ 2022, 16:11 IST
ಅಕ್ಷರ ಗಾತ್ರ

ಮೈಸೂರು: ಆತಿಥೇಯ ಮೈಸೂರು ವಿಶ್ವವಿದ್ಯಾಲಯ ತಂಡವು ಬುಧವಾರ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಕೊಕ್ಕೊ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ವಿ.ವಿ ತಂಡವನ್ನು 9–7ರಿಂದ ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿತು.

ಸ್ಫೋರ್ಟ್ಸ್‌ ಪೆವಿಲಿಯನ್‌ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಮೈಸೂರು ತಂಡದ ಎಲ್‌.ಮೋನಿಕಾ ಎರಡೂ ಸುತ್ತುಗಳ ಚೇಸಿಂಗ್‌ನಲ್ಲಿ ಮುಂಬೈನ ಆರು ಮಂದಿಯನ್ನು ಔಟ್‌ ಮಾಡುವ ಮೂಲಕ ನಾಲ್ಕರ ಹಂತ ಪ್ರವೇಶಿಸಲು ಕಾರಣರಾದರು.

ಮೊದಲ ಸುತ್ತಿನ ಡಿಫೆನ್ಸ್‌ನಲ್ಲಿ ಮೈಸೂರಿನ ಮೋನಿಕಾ, ತೇಜಸ್ವಿನಿ, ಚೈತ್ರಾ ಎದುರಾಳಿ ತಂಡವನ್ನು ಕಾಡಿದರು. ಮೂವರು ಕ್ರಮವಾಗಿ 1ನಿ, 30 ಸೆ, 4ನಿ,20ಸೆ, 3ನಿ,10ಸೆ ನಿಮಿಷ ಕಣದಲ್ಲಿದ್ದರು. ಮುಂಬೈನ ರೇಷ್ಮಾ ರಾಥೋಡ್‌, ಅಶ್ವಿನಿ ಪ್ರಭಾಕರ್‌, ಪೂಜಾ ಸಾಹೇಬ್‌ ತಲಾ 1 ಪಾಯಿಂಟ್‌ ತಂದು ಕೊಟ್ಟರು. ಚೇಸಿಂಗ್‌ನಲ್ಲಿ ಮೈಸೂರಿನ ಮೋನಿಕಾ 3 ಹಾಗೂ ಎಸ್‌.ಮೇಘನಾ 1 ಪಾಯಿಂಟ್‌ನ ಕಾಣಿಕೆಯಿಂದ ಮೈಸೂರು 4–3ರ ಮುನ್ನಡೆ ಪಡೆಯಿತು.

ಎರಡನೇ ಸುತ್ತಿನಲ್ಲಿ ಮೊನಿಕಾ, ತೇಜಸ್ವಿನಿ, ಚೈತ್ರಾ, ಅರ್ಪಿತಾ ಮತ್ತೆ ಉತ್ತಮವಾಗಿ ಡಿಫೆನ್ಸ್‌ ಮಾಡಿದರು. ಕ್ರಮವಾಗಿ 1.40 ನಿ., 3.40 ನಿ., 1.40, 1.50 ನಿಮಿಷ ಕಣದಲ್ಲಿದ್ದರು. ಕೊನೆ ಕ್ಷಣದಲ್ಲಿ ಅರ್ಪಿತಾ ಸುಲಭವಾಗಿ ಔಟ್‌ ಆಗುವ ಮೂಲಕ ನಿರಾಸೆ ಮೂಡಿಸಿದರು. ಮುಂಬೈನ ಅಶ್ವಿನಿ ಪ್ರಭಾಕರ್‌ 2, ಕಾಂಚನ್‌ ಠಾಕೂರ್‌ ಹಾಗೂ ರೂಪಾಲಿ ತಲಾ ಒಂದು ಪಾಯಿಂಟ್‌ ಗಿಟ್ಟಿಸಿ ತಂಡಕ್ಕೆ 4–7ರ ಮುನ್ನಡೆ ತಂದುಕೊಟ್ಟರು.

ಚೇಸಿಂಗ್‌ನಲ್ಲಿ ಮತ್ತೆ ಚುರುಕಿನ ನಡೆಗಳಿಂದ ಮೊನಿಕಾ 3 ಪಾಯಿಂಟ್‌ ತಂದುಕೊಟ್ಟು ತಂಡದ ಗೆಲುವನ್ನು ಖಾತರಿಪಡಿಸಿದರು. ಅಂತಿಮ ಮೂರು ನಿಮಿಷದಲ್ಲಿ ಬಿ.ಚೈತ್ರಾ, ಎಸ್‌.ಮೇಘನಾ ಮುಂಬೈನ ತಲಾ ಒಬ್ಬರನ್ನು ಔಟ್‌ ಮಾಡುವ ಮೂಲಕ 9–7ರ ರೋಚಕ ಗೆಲುವಿಗೆ ಕಾರಣರಾದರು.

ಅದಕ್ಕೂ ನಡೆದ ಲೀಗ್‌ ಹಂತದ ಮೂರನೇ ಪಂದ್ಯದಲ್ಲಿ ಮೈಸೂರು ವಿ.ವಿ ತಂಡ ಶಿವಾಜಿ ವಿಶ್ವವಿದ್ಯಾಲಯದ ವಿರುದ್ಧ 11–7ರಲ್ಲಿ ಜಯಿಸಿತು.

ಗುರುವಾರ ನಡೆಯುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್‌, ಎಂ.ಡಿಯು ರೋಹ್ಟಕ್‌, ಎರಡನೇ ಸೆಮಿಯಲ್ಲಿ ಮೈಸೂರು– ಡಾ.ಎ.ಎಂ.ಯು ಔರಂಗಾಬಾದ್‌ ಸೆಣಸಲಿವೆ. ಸಂಜೆ ಫೈನಲ್‌
ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT