ಗುರುವಾರ , ಡಿಸೆಂಬರ್ 12, 2019
16 °C

ಉರುಳಿದೆ 41 ವರುಷ.. ಮೂಡಿಲ್ಲ ‘ಚಿನ್ನ’ದ ಹರುಷ..

Published:
Updated:
Prajavani

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಶುರುವಾಗಿ ನಾಲ್ಕು ದಶಕಗಳು ಉರುಳಿವೆ. ಈ ಅವಧಿಯಲ್ಲಿ 24 ಆವೃತ್ತಿಗಳ ಆಟವೂ ನಡೆದಿದೆ. ಚಾಂಪಿಯನ್‌ಷಿಪ್‌ನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಚೀನಾದ ಸ್ಪರ್ಧಿಗಳ ಪ್ರಾಬಲ್ಯವೇ ಎದ್ದು ಕಾಣುತ್ತದೆ. ಆ ದೇಶದವರು ಬರೋಬ್ಬರಿ 182 ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ಭಾರತದವರೂ ಹೆಜ್ಜೆ ಗುರುತು ಮೂಡಿಸಿದ್ದಾರೆ. ಆದರೆ ಪದಕ ಗಳಿಕೆಯಲ್ಲಿ ನಮಗೆ ಚೀನಾದ ಸಮೀಪಕ್ಕೂ ಸುಳಿಯಲು ಆಗಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದು ಕನ್ನಡಿಗ ಪ್ರಕಾಶ್‌ ಪಡುಕೋಣೆ. ಅವರು 1983ರಲ್ಲಿ ಕೋಪನ್‌ಹೇಗನ್‌ನಲ್ಲಿ ಕಂಚು ಗೆದ್ದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು. ನಂತರದ ಎರಡು ದಶಕದಲ್ಲಿ ಭಾರತಕ್ಕೆ ಪದಕ ಗಗನಕುಸುಮವಾಗಿತ್ತು. 28 ವರ್ಷಗಳಿಂದ ಎಡಬಿಡದೆ ಕಾಡುತ್ತಿದ್ದ‌ ಕೊರಗನ್ನು ದೂರ ಮಾಡಿದ್ದು ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಹೈದರಾಬಾದ್‌ನ ಜ್ವಾಲಾ ಗುಟ್ಟಾ. 2011ರ ಚಾಂಪಿಯನ್‌ಷಿಪ್‌ನ ಮಹಿಳಾ ಡಬಲ್ಸ್‌ನಲ್ಲಿ ಈ ಜೋಡಿ ಕಂಚಿನ ಪದಕ ಜಯಿಸಿತ್ತು. ಬಳಿಕ ಭಾರತದ ಬ್ಯಾಡ್ಮಿಂಟನ್‌ನಲ್ಲಿ ಹೊಸ ಮನ್ವಂತರ ಶುರುವಾಯಿತು. ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಅವರು ಚೀನಾ, ದಕ್ಷಿಣ ಕೊರಿಯಾ ಮತ್ತು ಡೆನ್ಮಾರ್ಕ್‌ನ ಸ್ಪರ್ಧಿಗಳಿಗೆ ಸಡ್ಡು ಹೊಡೆದರು. ಹೈದರಾಬಾದ್‌ನ ಸಿಂಧು ನಾಲ್ಕು ಪದಕಗಳಿಗೆ ಮುತ್ತಿಟ್ಟು ಹೊಸ ಭಾಷ್ಯ ಬರೆದರು. ಸೈನಾ ಎರಡು ಪದಕಗಳನ್ನು ಜಯಿಸಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತಿದ್ದರು.

ಆದರೆ, 41 ವರ್ಷಗಳ ಸುದೀರ್ಘ ಅವಧಿಯಲ್ಲಿ ಭಾರತದ ಸ್ಪರ್ಧಿಗಳು, ಒಂದೇ ಒಂದು ಚಿನ್ನದ ಪದಕವನ್ನೂ ಗೆಲ್ಲಲಿಲ್ಲ ಎಂಬ ಕೊರಗು ಬ್ಯಾಡ್ಮಿಂಟನ್‌ ಪ್ರಿಯರನ್ನು ಕಾಡುತ್ತಿದೆ. ಆ ಕನಸು ಈ ಬಾರಿ ಸಾಕಾರಗೊಳ್ಳಬಹುದೆಂಬ ನಿರೀಕ್ಷೆ ಗರಿಗೆದರಿದೆ. ಎಲ್ಲರ ಚಿತ್ತ ಈಗ ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನತ್ತ ನೆಟ್ಟಿದೆ. ಈ ಸಲ ಭಾರತದ ದೊಡ್ಡ ಪಡೆಯೇ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯುತ್ತಿದೆ. ಸಿಂಧು, ಸೈನಾ ಮತ್ತು ಕಿದಂಬಿ ಶ್ರೀಕಾಂತ್‌ ಮೇಲೆ ಬೆಟ್ಟದಷ್ಟು ಭರವಸೆ ಇಡಲಾಗಿದೆ. ಹಿಂದಿನ ಎರಡು ಆವೃತ್ತಿಗಳಲ್ಲಿ ಬೆಳ್ಳಿಯ ಪದಕ ಜಯಿಸಿರುವ ಸಿಂಧು, ಈ ಬಾರಿ ಚಿನ್ನದ ಬೇಟೆಯಾಡಿ ಬರುತ್ತಾರೆ ಎಂದೂ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಆದರೆ ಭಾರತೀಯರ ಪದಕದ ಹಾದಿ ಹೂವಿನ ಹಾಸಿಗೆಯಂತೂ ಅಲ್ಲ. ಅದು ಮುಳ್ಳಿನ ಮೇಲಿನ ನಡಿಗೆ ಎಂಬುದಂತೂ ಸತ್ಯ. ಈ ವರ್ಷದಲ್ಲಿ ಭಾರತದ ಸ್ಪರ್ಧಿಗಳಿಂದ ಮೂಡಿಬಂದಿರುವ ಸಾಮರ್ಥ್ಯದ ಮೇಲೆ ಕಣ್ಣು ಹಾಯಿಸಿದರೆ ಇದು ಮನದಟ್ಟಾಗುತ್ತದೆ.

24ರ ಹರೆಯದ ಸಿಂಧು ಈ ಋತುವಿನಲ್ಲಿ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಿಂಧು, ಜಪಾನ್‌ನ ಅಕಾನೆ ಯಮಗುಚಿ, ತೈ ಜು ಯಿಂಗ್‌ ವಿರುದ್ಧ ಪದೇ ಪದೇ ಮುಗ್ಗರಿಸುತ್ತಿದ್ದಾರೆ. ತಮ್ಮನ್ನು ಆವರಿಸಿರುವ ‘ಫೈನಲ್‌ ಫೋಬಿಯಾ’ ದಿಂದ ಹೊರಬರಲು ಒದ್ದಾಡುತ್ತಿದ್ದಾರೆ. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು, ಎದುರಾಳಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಆಡುವ ಸವಾಲು ಅವರ ಎದುರಿಗಿದೆ.

ಸೈನಾ ಅವರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಗಾಯದಿಂದ ಈಗಿನ್ನೂ ಚೇತರಿಸಿಕೊಂಡಿರುವ ಅವರು ಸೆಮಿಫೈನಲ್‌ ಹಂತಕ್ಕೇರಲು ಸಾಕಷ್ಟು ಬೆವರು ಹರಿಸಬೇಕಾಗಬಹುದು. ಏಕೆಂದರೆ ಅವರು ಈ ಹಾದಿಯಲ್ಲಿ ಚೆನ್‌ ಯೂಫೀ, ಮೈಕೆಲೆ ಲೀ ಅವರಂತಹ ಬಲಿಷ್ಠ ಆಟಗಾರ್ತಿಯರನ್ನು ಹಿಮ್ಮೆಟ್ಟಿಸಬೇಕು.

ಶ್ರೀಕಾಂತ್‌ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಕೆಂಟೊ ಮೊಮೊಟಾ, ಲಿನ್‌ ಡಾನ್‌, ಕೆಂಟಾ ನಿಶಿಮೊಟಾ, ಜೊನಾಥನ್‌ ಕ್ರಿಸ್ಟಿ ಅವರಂತಹ ಬಲಿಷ್ಠರನ್ನು ಸೋಲಿಸಿ ಪದಕ ಗೆಲ್ಲಬೇಕು. ಇದು ಸಾಧ್ಯವಾಗಬೇಕಾದರೆ ಪವಾಡವೇ ನಡೆಯಬೇಕು.

ಭಾರತದಲ್ಲೂ ನಡೆದಿತ್ತು

2009ರ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯ ವಹಿಸಿತ್ತು.

ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ಆಗಸ್ಟ್‌ 10ರಿಂದ 16ರವರೆಗೆ ನಡೆದಿದ್ದ 17ನೇ ಆವೃತ್ತಿಯ ಚಾಂಪಿಯನ್‌ಷಿಪ್‌ನಿಂದ ಇಂಗ್ಲೆಂಡ್‌ ಹಿಂದೆ ಸರಿದಿತ್ತು.

ಪುರುಷರ ಸಿಂಗಲ್ಸ್‌ನಲ್ಲಿ ಚೀನಾದ ಲಿನ್‌ ಡಾನ್‌ ಚಾಂಪಿಯನ್‌ ಆದರೆ, ಮಹಿಳಾ ಸಿಂಗಲ್ಸ್‌ ವಿಭಾಗದ ಕಿರೀಟ, ಲು ಲಾನ್‌ ಪಾಲಾಗಿತ್ತು.

ಮಹಿಳಾ ಮತ್ತು ಪುರುಷರ ಡಬಲ್ಸ್‌ ಪ್ರಶಸ್ತಿಗಳನ್ನೂ ಚೀನಾದ ಸ್ಪರ್ಧಿಗಳು ಕೈವಶ ಮಾಡಿಕೊಂಡಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದ ಭಾರತದ ಚೇತನ್ ಆನಂದ್‌ ಮೂರನೇ ಸುತ್ತಿನಲ್ಲಿ ಮುಗ್ಗರಿಸಿದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ ಆತಿಥೇಯರ ಸವಾಲು ಎತ್ತಿಹಿಡಿದಿದ್ದ ಸೈನಾ ನೆಹ್ವಾಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾದ ಲಿನ್‌ ವಾಂಗ್‌ ಎದುರು ಪರಾಭವಗೊಂಡಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಭಾಗವಹಿಸಿದ್ದ ವಾಲಿಯಾವೀಟಿಲ್‌ ದಿಜು ಮತ್ತು ಜ್ವಾಲಾ ಗುಟ್ಟಾ  ಕೂಡ ಎಂಟರ ಘಟ್ಟದಲ್ಲಿ ಎಡವಿದ್ದರು. ಈ ಚಾಂಪಿಯನ್‌ಷಿಪ್‌ನಲ್ಲಿ ಚೀನಾ ಒಟ್ಟು 10 ಪದಕಗಳನ್ನು ಗೆದ್ದು ಪ್ರಾಬಲ್ಯ ಮೆರೆದಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು