ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳಕ್ಕೆ ಕನ್ನಡಿಗನ ಕಬಡ್ಡಿ ಪಾಠ

Last Updated 28 ಜುಲೈ 2019, 20:00 IST
ಅಕ್ಷರ ಗಾತ್ರ

ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಕಬಡ್ಡಿ ಆಟಗಾರರಲ್ಲಿ ಕನ್ನಡಿಗ ಬಿ.ಸಿ.ರಮೇಶ್‌ ಕೂಡ ಒಬ್ಬರು.

ಆಟಗಾರನಾಗಿ ಮಾತ್ರವಲ್ಲದೆ ಕೋಚ್‌ ಆಗಿಯೂ ಅವರು ಕಬಡ್ಡಿ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕಗಳ ಸಾಧನೆ ಮಾಡಿರುವ ರಮೇಶ್‌ ಅವರಿಗೆ ಅರ್ಜುನ ಗೌರವವೂ ಸಂದಿದೆ.

ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ರಮೇಶ್‌ ಅವರ ತಂತ್ರಗಾರಿಕೆ ಮಹತ್ವದ್ದೆನಿಸಿತ್ತು. ಹಿಂದಿನ ಆವೃತ್ತಿಯಲ್ಲಿ ಅವರು ತವರಿನ ತಂಡಕ್ಕೆ ಮಾರ್ಗದರ್ಶನ ನೀಡಿ ಬುಲ್ಸ್‌ ‘ಗುಟುರು’ ಹಾಕುವಂತೆ ಮಾಡಿದ್ದರು.‌ ಐದನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ತಂಡಕ್ಕೂ ರಮೇಶ್‌, ಕಬಡ್ಡಿಯ ಪಾಠಗಳನ್ನು ಹೇಳಿಕೊಟ್ಟಿದ್ದರು. ಈ ಸಲ ಬೆಂಗಾಲ್‌ ವಾರಿಯರ್ಸ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿರುವ ಅವರು ‘ಪ್ರಜಾವಾಣಿ’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

ನೀವು ಕೋಚ್‌ ಹುದ್ದೆ ವಹಿಸಿಕೊಂಡ ನಂತರ ಬೆಂಗಾಲ್‌ ತಂಡವು ಆಡಿದ ಮೊದಲ ಪಂದ್ಯದಲ್ಲೇ ಗೆದ್ದಿತ್ತು. ಈ ಕುರಿತು ಹೇಳಿ?
ತಂಡದಿಂದ ಮೂಡಿಬಂದ ಸಾಮರ್ಥ್ಯ ಹೆಚ್ಚು ಖುಷಿ ಕೊಟ್ಟಿದೆ. ಈ ಬಾರಿಯ ಲೀಗ್‌ನ ಮೊದಲ ಪಂದ್ಯದಲ್ಲೇ ದೊಡ್ಡ ಅಂತರದಿಂದ ಗೆದ್ದಿರುವುದರಿಂದ ಆಟಗಾರರ ಆತ್ಮವಿಶ್ವಾಸವೂ ಇಮ್ಮಡಿಸಿದೆ. ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಚೆನ್ನಾಗಿ ಆಡಲು ಇದು ಪ್ರೇರಣೆಯಾಗಿದೆ.

ತಂಡದ ಕುರಿತು...
ರೈಡಿಂಗ್‌ ವಿಭಾಗದಲ್ಲಿ ಬೆಂಗಾಲ್‌ ತಂಡ ಶಕ್ತಿಯುತವಾಗಿದೆ. ರಕ್ಷಣಾ ವಿಭಾಗದಲ್ಲಿ ಅಲ್ಪ ದುರ್ಬಲವೆನಿಸಿತ್ತು. ಅದನ್ನು ಸರಿಪಡಿಸಿದ್ದೇನೆ. ಕಾರ್ನರ್‌ ಮತ್ತು ಕವರ್‌ ವಿಭಾಗಗಳನ್ನೂ ಬಲಪಡಿಸಿದ್ದೇನೆ.

ಹೋದ ಸಲ ಬಂಗಾಳ ತಂಡ ‘ಪ್ಲೇ ಆಫ್‌’ ಪ್ರವೇಶಿಸಿತ್ತು. ಈ ಬಾರಿ ತಂಡದ ಗುರಿ?
ತಂಡ ಈ ಸಲ ಚಾಂಪಿಯನ್‌ ಆಗಿಯೇ ಬಿಡುತ್ತದೆ ಎಂದು ಈಗಲೇ ಷರಾ ಬರೆಯುವುದಿಲ್ಲ. ಪ್ರಶಸ್ತಿ ಗೆಲ್ಲಲೇಬೇಕೆಂಬ ಗುರಿಯೂ ನಮ್ಮದಲ್ಲ. ತಂಡದಲ್ಲಿರುವ ಎಲ್ಲರೂ ಎಲ್ಲಾ ಪಂದ್ಯಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಬೇಕು. ಎಂತಹುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡಬೇಕು. ಛಲವನ್ನು ಮೈಗೂಡಿಸಿಕೊಳ್ಳಬೇಕು. ತಂಡದಿಂದ ನಾನು ಬಯಸುವುದು ಇಷ್ಟೇ. ಬಂಗಾಳ ತಂಡದಲ್ಲಿರುವ ಎಲ್ಲರೂ ಪ್ರತಿಭಾವಂತರಿದ್ದಾರೆ, ತುಂಬಾ ಚೆನ್ನಾಗಿ ಆಡುತ್ತಾರೆ ಎಂದು ಅಭಿಮಾನಿಗಳು ಮತ್ತು ಹಿರಿಯ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಬೇಕು. ಆ ಪ್ರಶಂಶೆಯೇ ನಮಗೆ ಶ್ರೀರಕ್ಷೆ. ಅದೇ ದೊಡ್ಡ ಪ್ರಶಸ್ತಿ.

ಈ ಸಲ ಬಂಗಾಳ ತಂಡದಲ್ಲಿ ಕರ್ನಾಟಕದ ಮೂರು ಮಂದಿ ಆಟಗಾರರಿದ್ದಾರೆ. ಇವರಿಂದ ತಂಡಕ್ಕೆ ಏನು ಲಾಭವಾಗಬಹುದು?
ಕೆ.ಪ್ರಪಂಜನ್‌, ಜೀವಕುಮಾರ್‌ ಮತ್ತು ಸುಕೇಶ್‌ ಹೆಗಡೆ ಅವರು ತಂಡದಲ್ಲಿದ್ದಾರೆ. ಈ ಸಲದ ಲೀಗ್‌ನಲ್ಲಿ ಅತಿ ಹೆಚ್ಚು ಕನ್ನಡಿಗರಿರುವ ತಂಡ ನಮ್ಮದು. ಇದು ಖುಷಿಯ ವಿಷಯ. ಮೊದಲ ಪಂದ್ಯದ ಗೆಲುವಿನಲ್ಲಿ ಜೀವಕುಮಾರ್‌ ಮತ್ತು ಪ್ರಪಂಜನ್‌ ಅವರ ಪಾತ್ರ ಮಹತ್ವದ್ದೆನಿಸಿತ್ತು. ಸುಕೇಶ್‌ ಕೂಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಮೂವರೂ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸವೂ ನನಗಿದೆ.

ಜೀವಕುಮಾರ್‌ ಅನುಭವಿ ಆಟಗಾರ. ರಕ್ಷಣಾ ವಿಭಾಗದಲ್ಲಿ ಅವರು ತಂಡದ ಆಧಾರಸ್ಥಂಭವಾಗಿದ್ದಾರೆ. ಪಂದ್ಯದ ಸಂದರ್ಭದಲ್ಲಿ ಯುವಕರಿಗೆ ಅಮೂಲ್ಯ ಸಲಹೆಗಳನ್ನು ನೀಡಿ ಅವರಲ್ಲಿ ಹೊಸ ಚೈತನ್ಯ ತುಂಬುತ್ತಾರೆ. ಪ್ರಪಂಜನ್‌ ಮತ್ತು ಸುಕೇಶ್‌ ಅವರು ರೈಡಿಂಗ್‌ನಲ್ಲಿ ತಂಡದ ಶಕ್ತಿಯಾಗಿದ್ದಾರೆ.

ಲೀಗ್‌ ಆರಂಭಕ್ಕೂ ಮುನ್ನ ಯಾವೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಿರಿ?
ಎರಡು ತಿಂಗಳ ಸಮಯ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ವೇಳೆ ಆಟಗಾರರಿಗೆ ಫಿಟ್‌ನೆಸ್‌ನ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿತ್ತು. ಹೊಸ ಕೌಶಲಗಳನ್ನು ಕಲಿಸಲು ಹೆಚ್ಚಿನ ಆದ್ಯತೆ ನೀಡಿದ್ದೆವು. ಅಭ್ಯಾಸದ ವೇಳೆ ಆಟಗಾರರು ಮಾಡುತ್ತಿದ್ದ ತಪ್ಪುಗಳನ್ನು ಗುರುತಿಸಿ ಅವುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದೆವು. ಜೊತೆಗೆ ಶಿಸ್ತಿನ ಪಾಠವನ್ನೂ ಮಾಡಲಾಗಿತ್ತು.

ಹೋದ ವರ್ಷ ಬೆಂಗಳೂರು ಬುಲ್ಸ್‌ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ತಂಡದ ಯಶಸ್ಸಿನಲ್ಲಿ ನಿಮ್ಮ ಪಾತ್ರ ಮಹತ್ವದ್ದೆನಿಸಿತ್ತು. ಈ ಕುರಿತು ಹೇಳಿ?
ಪವನ್‌ಕುಮಾರ್‌ ಶೆರಾವತ್‌ ಪ್ರತಿಭಾನ್ವಿತ ಆಟಗಾರ. ಹೀಗಿದ್ದರೂ ಆತನಿಗೆ ಹಿಂದಿನ ಆವೃತ್ತಿಗಳಲ್ಲಿ ಅವಕಾಶ ನೀಡಿರಲಿಲ್ಲ. ಇದು ನನಗೆ ತುಂಬಾ ಆಶ್ಚರ್ಯ ತಂದಿತ್ತು. ಹೋದ ಸಲದ ಆಟಗಾರರ ಹರಾಜಿನಲ್ಲಿ ಮೋನು ಗೋಯತ್‌ ಅವರನ್ನು ಖರೀದಿಸುವ ಇರಾದೆ ಇತ್ತು. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೆ. ಮೋನುಗಿಂತಲೂ ಪವನ್‌ ಶೆರಾವತ್‌ ಉತ್ತಮ ರೈಡರ್‌ ಎಂಬುದನ್ನು ಮನವರಿಕೆ ಮಾಡಿಕೊಟ್ಟೆ.

ಎಲ್ಲಾ ಪಂದ್ಯಗಳಲ್ಲೂ ಪವನ್‌ಗೆ ಅವಕಾಶ ಸಿಗುವಂತೆ ಮಾಡಿದ್ದೆ. ಆಮೇಲೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಪವನ್‌, ಲೀಗ್‌ನ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದ.

ಸುಮಿತ್‌ ಮತ್ತು ಅಮಿತ್‌ ಅವರಿಗೂ ಅಗತ್ಯಮಾರ್ಗದರ್ಶನ ನೀಡಿ ತಂಡದಲ್ಲಿ ಅವಕಾಶ ಸಿಗುವಂತೆ ಮಾಡಿದ್ದೆ. ಹೀಗಾಗಿ ತಂಡದಿಂದ ಉತ್ತಮ ಸಾಮರ್ಥ್ಯ ಮೂಡಿಬಂದಿತ್ತು.

ಈ ಬಾರಿ ಬೆಂಗಳೂರು ಬುಲ್ಸ್‌ನಿಂದ ದೂರವಾಗಲು ಕಾರಣ?
ತಂಡದಲ್ಲಾದ ಕೆಲ ಬೆಳವಣಿಗಳಿಂದ ತುಂಬಾ ಬೇಸರವಾಗಿದೆ. ಈ ಬಗ್ಗೆ ಈಗ ಹೆಚ್ಚು ಮಾತನಾಡುವುದಿಲ್ಲ. ಸಮಯ ಬಂದಾಗ ಎಲ್ಲದಕ್ಕೂ ಉತ್ತರಿಸುತ್ತೇನೆ.

ಈ ಸಲ ಬುಲ್ಸ್‌ ತಂಡದಲ್ಲಿ ಕನ್ನಡಿಗರೇ ಇಲ್ಲವಲ್ಲ?
ಕನ್ನಡಿಗನಾಗಿ ಈ ವಿಷಯ ನನಗೂ ನೋವು ತರಿಸಿದೆ. ಹೋದ ವರ್ಷ ಹರೀಶ್‌ ನಾಯಕ್‌ಗೆ ಅವಕಾಶ ನೀಡಲಾಗಿತ್ತು. ಈ ಬಗ್ಗೆ ನಾನು ಪ್ರತಿಕ್ರಿಯಿಸಿ ಪ್ರಯೋಜನವಿಲ್ಲ. ಸಂಬಂಧಪಟ್ಟವರನ್ನು ಕೇಳಿದರೆ ಉತ್ತರ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT