ಬುಧವಾರ, ಸೆಪ್ಟೆಂಬರ್ 22, 2021
25 °C

ಶೂಟಿಂಗ್‌ನ ಹೊಸ ಚಿಗುರು ದಿವ್ಯಾಂಶ್‌

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

‘ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕೆಂಬುದು ನನ್ನ ಗುರಿ. ಅದು ಅಸಾಧ್ಯವಾದುದೇನಲ್ಲ. ಆ ಬಗ್ಗೆ ಈಗ ಹೆಚ್ಚು ಚಿಂತಿಸುವುದೂ ಇಲ್ಲ. ಮುಂದೆ ಸಾಕಷ್ಟು ಟೂರ್ನಿಗಳು ನಡೆಯುತ್ತವೆ. ಅವುಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವತ್ತ ಚಿತ್ತ ನೆಟ್ಟಿದ್ದೇನೆ. ಈ ಮೂಲಕ ಸಾಗಿದ ಹಾದಿಯಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಲು ಪ್ರಯತ್ನಿಸುತ್ತೇನೆ’

ನವ ಸಂವತ್ಸರದ ಶುರುವಿನಲ್ಲಿ (ಈ ವರ್ಷದ ಜನವರಿ) ಮುಂಬೈಯಲ್ಲಿ ನಡೆದಿದ್ದ ಲಕ್ಷ್ಯ ಕಪ್‌ ಶೂಟಿಂಗ್‌ನಲ್ಲಿ ಪ್ರಶಸ್ತಿ ಗೆದ್ದ ನಂತರ ದಿವ್ಯಾಂಶ್‌ ಸಿಂಗ್‌ ಪನ್ವರ್‌ ಆಡಿದ್ದ ವಿಶ್ವಾಸದ ನುಡಿಗಳಿವು.

ಅಂದು ಅವರು ಹೇಳಿದ್ದ ಮಾತು ಈಗ ನಿಜವಾಗಿದೆ. ಅವರ ಜೀವನದ ಕನಸು ಸಾಕಾರಗೊಂಡಿದೆ. ಜೈಪುರದ ಚಿಗುರು ಮೀಸೆಯ ಹುಡುಗ ದಿವ್ಯಾಂಶ್‌, 2020ರ ಟೋಕಿಯೊ ಒಲಿಂಪಿಕ್ಸ್‌ಗೆ ರಹದಾರಿ ಪಡೆದಿದ್ದಾರೆ. 17ರ ಹರೆಯದಲ್ಲೇ ಜಗಮೆಚ್ಚುವ ಸಾಧನೆ ಮಾಡಿದ್ದಾರೆ.

ಹೋದ ಶುಕ್ರವಾರ ಚೀನಾದ ಬೀಜಿಂಗ್‌ನಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ದಿವ್ಯಾಂಶ್‌ ಅವರು ಬೆಳ್ಳಿಯ ಪದಕ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ರಹದಾರಿ ಪಡೆದ ಭಾರತದ ನಾಲ್ಕನೇ ಶೂಟರ್‌ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.

ಭಾರತದಲ್ಲಿ ಶೂಟಿಂಗ್‌ಗೆ ವಿಶಿಷ್ಠ ಪರಂಪರೆ ಇದೆ. ಅಭಿನವ್‌ ಬಿಂದ್ರಾ, ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಗಗನ್‌ ನಾರಂಗ್‌, ಜಿತು ರಾಯ್‌, ಮೆಹುಲಿ ಘೋಷ್‌, ಅಪೂರ್ವಿ ಚಾಂಡೇಲಾ, ಹೀನಾ ಸಿಧು, ಅಂಜಲಿ ಭಾಗವತ್‌.. ಹೀಗೆ ಸಾಧಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರು ತೋರಿಸಿಕೊಟ್ಟ ಹಾದಿಯಲ್ಲಿ ಹೊಸ ಪೀಳಿಗೆಯವರೂ ಸಾಗುತ್ತಿದ್ದಾರೆ. ಈ ಪೈಕಿ ದಿವ್ಯಾಂಶ್‌ ಕೂಡಾ ಒಬ್ಬರು.

2013ರಲ್ಲಿ ಶೂಟಿಂಗ್‌ ಕ್ಷೇತ್ರಕ್ಕೆ ಅಡಿ ಇಟ್ಟ ದಿವ್ಯಾಂಶ್‌, ಆರು ವರ್ಷಗಳ ಅವಧಿಯಲ್ಲಿ ಸಾಧಿಸಿದ್ದು ಅಪಾರ. ಎಳವೆಯಿಂದಲೇ ಶೂಟಿಂಗ್‌ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ಶ್ರದ್ಧೆ ಮತ್ತು ಬದ್ಧತೆಯಿಂದ ಹೊಸ ತಂತ್ರಗಳನ್ನು ಕಲಿತು, ಅವುಗಳನ್ನು ಮೈಗೂಡಿಸಿಕೊಂಡು ಸಾಗಿರುವ ಅವರು ಸಣ್ಣ ವಯಸ್ಸಿನಲ್ಲೇ ಎತ್ತರದ ಸಾಧನೆ ಮಾಡಿ ಮಿನುಗುತ್ತಿದ್ದಾರೆ.

ದೀಪಕ್‌ ದುಬೆ ಮತ್ತು ಸುಮಾ ಶಿರೂರ್‌ ಅವರಂತಹ ದಿಗ್ಗಜರಿಂದ ಶೂಟಿಂಗ್‌ ಪಾಠಗಳನ್ನು ಕಲಿತಿರುವ ದಿವ್ಯಾಂಶ್‌, ಜೂನಿಯರ್‌, ಯೂತ್‌ ಮತ್ತು ಸೀನಿಯರ್‌ ವಿಭಾಗಗಳಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಹೋದ ವರ್ಷದ ನವೆಂಬರ್‌ನಲ್ಲಿ ಕುವೈತ್‌ ಸಿಟಿಯಲ್ಲಿ ನಡೆದಿದ್ದ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದ ದಿವ್ಯಾಂಶ್‌, ಸೆಪ್ಟೆಂಬರ್‌ನಲ್ಲಿ ಪುಣೆಯಲ್ಲಿ ಆಯೋಜನೆಯಾಗಿದ್ದ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನ 10 ಮೀಟರ್ಸ್‌ ಏರ್‌ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಜಯಿಸಿ ಶೂಟಿಂಗ್‌ ಲೋಕದ ಗಮನ ಸೆಳೆದಿದ್ದರು. ಆಗ ಅವರು ಶ್ರೇಯಾ ಅಗರವಾಲ್‌ ಜೊತೆಗೂಡಿ ಸ್ಪರ್ಧಿಸಿದ್ದರು. ಈ ವರ್ಷವೂ ಅವರು ಪದಕದ ಬೇಟೆ ಮುಂದುವರಿಸಿದ್ದಾರೆ. ಮಾರ್ಚ್‌ನಲ್ಲಿ ತೈಪೆಯ ತವೊಯುನ್‌ನಲ್ಲಿ ನಿಗದಿಯಾಗಿದ್ದ ಏಷ್ಯನ್‌ ಏರ್‌ಗನ್‌ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ದಿವ್ಯಾಂಶ್‌, ಚಿನ್ನದ ಪದಕಕ್ಕೆ ಕೊರಳೊಡ್ದಿದ್ದರು. ಈ ಮೂಲಕ ದಕ್ಷಿಣ ಕೊರಿಯಾ ಮತ್ತು ಚೀನಾದ ಶೂಟರ್‌ಗಳ ಪ್ರಾಬಲ್ಯಕ್ಕೆ ಕಡಿವಾಣ ಹಾಕಿದ್ದರು. ಪುರುಷರ ತಂಡ ವಿಭಾಗದಲ್ಲೂ ಅವರಿಂದ ಚಿನ್ನದ ಸಾಧನೆ ಅರಳಿತ್ತು.

ಏರ್‌ ರೈಫಲ್‌ ವಿಭಾಗದಲ್ಲಿ ದೀಪಕ್‌ ಕುಮಾರ್‌ ಮತ್ತು ರವಿಕುಮಾರ್‌ ಅವರ ನಂತರ ಭಾರತದ ಪರಂಪರೆ ಮುಂದುವರಿಸುವವರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಹನ್ನೊಂದನೇ ತರಗತಿಯ ವಿದ್ಯಾರ್ಥಿ ದಿವ್ಯಾಂಶ್‌, ಇದಕ್ಕೆ ಉತ್ತರವಾಗಿ ಸಿಕ್ಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು