ಗಾಲ್ಫ್ ಕಲಿಕೆಗೆ ಇಲ್ಲಿದೆ ವೇದಿಕೆ

7

ಗಾಲ್ಫ್ ಕಲಿಕೆಗೆ ಇಲ್ಲಿದೆ ವೇದಿಕೆ

Published:
Updated:
Deccan Herald

ವಿಶ್ವ ಕ್ರೀಡಾರಂಗದಲ್ಲಿ ಗಾಲ್ಫ್‌ಗೆ ವಿಶಿಷ್ಠ ಸ್ಥಾನವಿದೆ. ಇತರ ಕ್ರೀಡೆಗಳಂತೆ ಹೆಚ್ಚಿನ ದೈಹಿಕ ಶ್ರಮದ ಅಗತ್ಯತೆ ಈ ಕ್ರೀಡೆಗಿಲ್ಲ. ಜೊತೆಗೆ,ಇದರಲ್ಲಿ ತೊಡಗಿಕೊಳ್ಳುವವರ ಸಂಖ್ಯೆಯೂ ಕಡಿಮೆಯೇ. ಇದಕ್ಕೆ ಮುಖ್ಯ ಕಾರಣ ಗಾಲ್ಫ್ ಬಗ್ಗೆ ತರಬೇತಿ ಪಡೆಯಲು ಇರುವ ತೊಡಕುಗಳು. ತರಬೇತಿ ನೀಡುವ ಕೇಂದ್ರಗಳು ವಿರಳ. ಹಾಗೆಯೇ ದುಬಾರಿ ಕೂಡ.  ಈ ಎಲ್ಲದರ ಮಧ್ಯೆಯೂ ಇತ್ತೀಚಿನ ದಿನಗಳಲ್ಲಿ ಗಾಲ್ಫ್ ಜನಪ್ರಿಯ ಕ್ರೀಡೆಯಾಗಿ ಬೆಳೆಯುತ್ತಿದೆ ಎಂಬ ಮಾತುಗಳಿವೆ.‌‌ ಹೀಗಾಗಿ ಕರ್ನಾಟಕವು ಸೇರಿದಂತೆ ಭಾರತದ ಅನೇಕ ರಾಜ್ಯಗಳಿಂದ ಪ್ರತಿಭಾಶಾಲಿ ಗಾಲ್ಫರ್‌ಗಳು ಬೆಳಕಿಗೆ ಬರುತ್ತಿದ್ದಾರೆ.

ಈ ನಿಟ್ಟಿನಲ್ಲಿ ಗಾಲ್ಫ್ ಅನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಬಯಸುವವರಿಗೆ ಕೋಲಾರದಲ್ಲಿರುವ ತರುಣ್ ಸರ್ ದೇಸಾಯಿ ಗಾಲ್ಫ್ ಅಕಾಡೆಮಿಯು (ಟಿ.ಎಸ್.ಜಿ) ತರಬೇತಿ ನೀಡುತ್ತಿದೆ. ಕೋಲಾರದಿಂದ ಬಂಗಾರಪೇಟೆಗೆ ತೆರಳುವ ಮಾರ್ಗದಲ್ಲಿ ಸುಮಾರು 300 ಎಕರೆಯಷ್ಟು ವಿಶಾಲ ಜಾಗದಲ್ಲಿರುವ ಜಿಯೋನ್ ಹಿಲ್ಸ್ ಗಾಲ್ಫ್ ಕೌಂಟಿ ಕ್ಯಾಂಪಸ್‌ನಲ್ಲಿ ಈ ಅಕಾಡೆಮಿಯು ಕಾರ್ಯನಿರ್ವಹಿಸುತ್ತಿದೆ.

ಹತ್ತರಿಂದ ಇಪ್ಪತ್ತು ವರ್ಷದೊಳಗಿನವರು ಈ ಅಕಾಡೆಮಿಗೆ ಸೇರಬಹುದು. ಐದರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆಯ ವ್ಯವಸ್ಥೆಯು ಇಲ್ಲಿದೆ. ಹಿರಿಯ ಗಾಲ್ಫರ್‌ ತರುಣ್ ದೇಸಾಯಿ ಅವರಿಂದ ಹಿಡಿದು ನುರಿತ ಕೋಚ್‌ಗಳು ಈ ಕ್ರೀಡೆಯ ಬಗ್ಗೆ ಸಮಗ್ರ ತರಬೇತಿ ನೀಡುತ್ತಾರೆ. ಇದರ ಇತಿಹಾಸ, ನಿಯಮಾವಳಿಗಳು, ಅನುಸರಿಸಬೇಕಾದ ವಿಶೇಷ ತಂತ್ರಗಳು ಇನ್ನೂ ಮುಂತಾದ ವಿಷಯಗಳ ಬಗ್ಗೆ ತರಬೇತಿ ವೇಳೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

‘ಮೂರು ವರ್ಷಗಳ ಹಿಂದೆ ಆರಂಭವಾದ ಈ ಅಕಾಡೆಮಿಯಲ್ಲಿ ದೇಶ ವಿದೇಶದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ಕಲಿಯುತ್ತಿರುವ ಅನೇಕರು ರಾಷ್ಟ್ರ ಮತ್ತು ಏಷ್ಯಾ ಮಟ್ಟದ ಪ್ರಮುಖ ಗಾಲ್ಫ್ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಗಾಲ್ಫ್‌ನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವವರಿಗೆ ಇದೊಂದು ಉತ್ತಮ ವೇದಿಕೆ’ ಎಂದು ಹೇಳುತ್ತಾರೆ ಜಿಯೋನ್ ಹಿಲ್ಸ್ ಗಾಲ್ಫ್ ಕೌಂಟಿಯ ಉಪಾಧ್ಯಕ್ಷ ಶರವಣನ್ ಬಾಲಕೃಷ್ಣನ್.

‘ಹವ್ಯಾಸಕ್ಕಾಗಿ ಗಾಲ್ಫ್ ಕಲಿಯುವವರಿಗೂ ತರಬೇತಿ ಪಡೆಯುವ ಅವಕಾಶ ಇಲ್ಲಿದೆ. ಅಕಾಡೆಮಿಯಲ್ಲಿ ರಾಷ್ಟ್ರಮಟ್ಟದ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ವಿಶ್ವದ ಉತ್ತಮ ಗಾಲ್ಫ್ ರಗಳ ಸಂಪರ್ಕ ಮತ್ತು ಮಾರ್ಗದರ್ಶನ ಇಲ್ಲಿನ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಉತ್ತಮ ಗಾಲ್ಫ್ ಆಟಗಾರನಾಗಿ ಹೊರಹೊಮ್ಮಲು ಈ ಎಲ್ಲ ಅಂಶಗಳು ನೆರವಾಗುತ್ತವೆ’ ಎಂದು ಅವರು ಹೇಳುತ್ತಾರೆ.

ಮುಂದಿನ ದಿನಗಳಲ್ಲಿ ವಿಶ್ವದ ಪ್ರಮುಖ ಗಾಲ್ಫ್ ತರಬೇತಿ ಕೇಂದ್ರವಾಗಿ ಬೆಳೆಯುವ ಗುರಿ ಹೊಂದಿರುವ ಈ ಅಕಾಡೆಮಿಯು ಕರ್ನಾಟಕದಲ್ಲಿ ಗಾಲ್ಫ್ ಅನ್ನು ಹೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಮುಖ ರಹದಾರಿ ಆಗುವುದರಲ್ಲಿ ಸಂದೇಹವಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !