ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಗಾರ್ಡ್’ಗೆ ಗೆಲುವಿನ ಭರವಸೆ

ಕಿಂಗ್‍ಫಿಷರ್ ಅಲ್ಟ್ರಾ ಡರ್ಬಿ ಬೆಂಗಳೂರು: ಕಣದಲ್ಲಿ ಐದು ಗಂಡು, ನಾಲ್ಕು ಹೆಣ್ಣು ಕುದುರೆಗಳು
Last Updated 25 ಜನವರಿ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು:ಗಣರಾಜ್ಯೋತ್ಸವ ದಿನದಂದು ನಡೆಯುವ ಚಳಿಗಾಲದ ಸಾಂಪ್ರದಾಯಿಕ ರೇಸ್ ‘ಕಿಂಗ್‍ಫಿಷರ್ ಅಲ್ಟ್ರಾ ಡರ್ಬಿ ಬೆಂಗಳೂರು’ಗೆ ವೇದಿಕೆ ಸಿದ್ಧಗೊಂಡಿದ್ದು ಮಂಗಳವಾರ ಸಂಜೆ 4.30ಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಡರ್ಬಿ ನಡೆಯಲಿದೆ.

ಕೋವಿಡ್-19ರಿಂದಾಗಿ ಬೆಂಗಳೂರು ಬೇಸಿಗೆ ರೇಸ್‍ಗಳು ರದ್ದಾಗಿದ್ದವು. ಹೀಗಾಗಿ ಯುನೈಟೆಡ್ ಬ್ರೂವರೀಸ್ 2020ರ ಬೇಸಿಗೆ ಡರ್ಬಿ ನಡೆದಿರಲಿಲ್ಲ. ಅದರ ಬದಲು ಜನವರಿ 2021ರ ಡರ್ಬಿ ಪ್ರಾಯೋಜಿಸಲು ನಿರ್ಧರಿಸಿದೆ. ಈ ಪ್ರಮುಖ ಡರ್ಬಿಯ ಕಣದಲ್ಲಿ ಐದು ಗಂಡು ಮತ್ತು ನಾಲ್ಕು ಹೆಣ್ಣು ಕುದುರೆಗಳು ಭಾಗವಹಿಸುತ್ತಿವೆ. ಅವುಗಳ ಪೈಕಿ ರಾಜೇಶ್ ನರೇಡು ತರಬೇತಿ ನೀಡಿರುವ ‘ಫಾರೆವರ್ ಟುಗೆದರ್’ ಮತ್ತು ಸುಲೈಮಾನ್ ಅಟ್ಟೋಲಾಹಿ ತರಬೇತಿಯಲ್ಲಿ ಪಳಗಿರುವ ‘ಲಗಾರ್ಡ್’ ಮತ್ತು ‘ಫಾರೆಸ್ಟ್‌ ಫ್ಲೇಮ್’ ಹಾಗೂ ಅರ್ಜುನ್ ಮಂಗ್ಳೋರ್ಕರ್ ತರಬೇತಿ ನೀಡಿರುವ ‘ಆಂಟಿಬೆಸ್’ ಪ್ರಮುಖ ಸ್ಪರ್ಧಿಗಳು.

ಚೊಚ್ಚಲ ಸ್ಪರ್ಧೆಯಲ್ಲಿ ‘ಫಾರೆವರ್ ಟುಗೆದರ್’ ಉತ್ತಮವಾಗಿ ಓಡಿ ಗೆದ್ದಿದ್ದರೂ ಹೆಚ್ಚುವರಿ ಓಟಕ್ಕೆ ಈ ವರೆಗಿನ ಅನುಭವ ಸಾಕಾಗಬಹುದೇ ಎಂಬ ಸಂದೇಹವಿದೆ. ‘ಫಾರೆಸ್ಟ್ ಫ್ಲೇರ್’ ಈ ವರೆಗೆ ಎಲ್ಲ ಐದು ಓಟಗಳಲ್ಲೂ ಅಜೇಯವಾಗಿ ಉಳಿದಿದೆ. ಆದರೆ ಡರ್ಬಿಯ 2400 ಮೀಟರ್ಸ್ ದೂರ ಓಡಿ ಗೆಲ್ಲುವ ಸಾಮರ್ಥ್ಯವಿದೆಯೇ ಎಂಬ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಈ ಎಲ್ಲ ಕಾರಣಗಳಿಂದಾಗಿ ಸ್ಪರ್ಧೆ ‘ಆಂಟಿಬಸ್’ ಮತ್ತು ‘ಲಗಾರ್ಡ್’ ನಡುವೆಯೇ ಸ್ಪರ್ಧೆ ನಡೆಯಲಿದೆ ಎಂಬದು ಲೆಕ್ಕಾಚಾರ. ಆಂಟಿಬಸ್‌ ಈ ಹಿಂದೆ, 2400 ಮೀಟರ್ಸ್ ಓಕ್ಸ್‌ ರೇಸ್ ಗೆದ್ದು ಸಾಮರ್ಥ್ಯ ಸಾಭೀತು ಪಡಿಸಿದ್ದರೆ, ‘ಲಗಾರ್ಡ್’ ಮೈಲು ದೂರದ ಬೆಂಗಳೂರು ಮತ್ತು ಮುಂಬೈ 2000 ಗಿನ್ನಿಸ್‌ ರೇಸ್‍ಗಳಲ್ಲಿ ಅಮೋಘ ಪ್ರದರ್ಶನ ನೀಡಿದೆ. ಕಿಂಗ್ಡ್‍ ಡಾಕ-ಲಾ ಟೆರಾಸ್ಸಿ ಸಂತತಿಯ ನಾಲ್ಕು ವರ್ಷದ ಈ ಗಂಡು ಕುದುರೆ ಆ ರೇಸ್‍ಗಳಲ್ಲಿ ಗೆದ್ದಿರುವ ವೈಖರಿ ಗಮನಿಸಿದರೆ, 2400 ಮೀಟರ್ಸ್ ಡರ್ಬಿ ರೇಸ್ ಗೆಲ್ಲುವುದು ಕಷ್ಟವಾಗಲಾರದು ಎನಿಸುತ್ತದೆ. ಹಾಗಾಗಿ, ‘ಲಗಾರ್ಡ್’ಗೆ ಡರ್ಬಿ ಗೆಲ್ಲುವ ಅವಕಾಶ ಹೆಚ್ಚಾಗಿಯೇ ಇದೆ ಎಂಬುದು ನಮ್ಮ ನಿರೀಕ್ಷೆ.

* ಡರ್ಬಿಯ ಒಟ್ಟು ಬಹುಮಾನ ಮೊತ್ತ ₹ 1,30,57,500 ಆಗಿದ್ದು ಡರ್ಬಿ ಗೆಲ್ಲುವ ಕುದುರೆಯ ಮಾಲೀಕರು ₹ 77,56,154 ಗಳಿಸಲಿದ್ದಾರೆ.

* ಡರ್ಬಿ ದಿನದಂದು ಎಂಟು ರೇಸ್‍ಗಳು ನಡೆಯಲಿವೆ. ಮೊದಲನೇ ರೇಸ್ ಮಧ್ಯಾಹ್ನ 1.30ಕ್ಕೆ ಪ್ರಾರಂಭವಾಗಲಿದ್ದು ಡರ್ಬಿ ರೇಸ್ ಸಂಜೆ 4.30ರಿಂದ ನಡೆಯಲಿದೆ.

* ಡರ್ಬಿಯಲ್ಲಿ ಸ್ಪರ್ಧಿಸುವ ಗಂಡು ಕುದುರೆಗಳು ಜಾಕಿ ತೂಕ ಸೇರಿ 58 ಕೆ.ಜಿ ತೂಕ ಹೊರಬೇಕು; ಹೆಣ್ಣು ಕುದುರೆ 56.5 ಕೆ.ಜಿ ತೂಕ ಹೊರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT