ಗುರುವಾರ , ಅಕ್ಟೋಬರ್ 17, 2019
22 °C
ಡಚ್‌ ಓಪನ್‌ ಸೂಪರ್‌–100: ರಾಹುಲ್‌ಗೆ ನಿರಾಸೆ

ಬ್ಯಾಡ್ಮಿಂಟನ್‌ ಟೂರ್ನಿ: ಸೆಮಿಫೈನಲ್‌ನತ್ತ ‘ಲಕ್ಷ್ಯ’

Published:
Updated:
Prajavani

ಅಲಮೆರ್‌, ನೆದರ್ಲೆಂಡ್ಸ್‌: ಭಾರತದ ಲಕ್ಷ್ಯಸೇನ್‌ ಅವರು ಡಚ್‌ ಓಪನ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ 18 ವರ್ಷ ವಯಸ್ಸಿನ ಲಕ್ಷ್ಯ 21–9, 21–16 ನೇರ ಗೇಮ್‌ಗಳಿಂದ ಭಾರತದವರೇ ಆದ ಬಿ.ಎಂ.ರಾಹುಲ್‌ ಭಾರದ್ವಾಜ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 37 ನಿಮಿಷಗಳಲ್ಲಿ ಮುಗಿಯಿತು.

ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಯೂತ್‌ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಹಾಗೂ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿರುವ ಲಕ್ಷ್ಯ, ಮೊದಲ ಗೇಮ್‌ನಲ್ಲಿ ಮಿಂಚಿದರು.

ಚುರುಕಿನ ಸರ್ವ್‌ ಮತ್ತು ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅವರು 6–0 ಮುನ್ನಡೆ ಪಡೆದರು. ನಂತರವೂ ಪರಿಣಾಮಕಾರಿಯಾಗಿ ಆಡಿದ ಅವರು, ಮುನ್ನಡೆಯನ್ನು 11–3ಕ್ಕೆ ಹೆಚ್ಚಿಸಿಕೊಂಡು ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲೂ ಲಕ್ಷ್ಯ ಆಟ ರಂಗೇರಿತು. ಸತತ ಆರು ಪಾಯಿಂಟ್ಸ್‌ ಗಳಿಸಿದ ಅವರು 13–8 ಮುನ್ನಡೆ ಗಳಿಸಿ ಗೆಲುವಿನ ಹಾದಿ ಸುಗಮ ಮಾಡಿಕೊಂಡರು. ಲಕ್ಷ್ಯ ಅವರ ಬೇಸ್‌ಲೈನ್‌ ಹೊಡೆತಗಳಿಗೆ ನಿರುತ್ತರರಾದ ರಾಹುಲ್‌, ಸುಲಭವಾಗಿ ಗೇಮ್‌ ಕೈಚೆಲ್ಲಿದರು.

ಆರಂಭಿಕ ನಿರಾಸೆಯಿಂದ ರಾಹುಲ್‌ ಎದೆಗುಂದಲಿಲ್ಲ. ಎರಡನೇ ಗೇಮ್‌ನಲ್ಲಿ ಗುಣಮಟ್ಟದ ಆಟ ಆಡಿದ ಅವರು 4–2 ಮುನ್ನಡೆ ಪಡೆದರು. ನಂತರ ಲಕ್ಷ್ಯ ತಿರುಗೇಟು ನೀಡಿದರು. ರ‍್ಯಾಲಿಗಳಿಗೆ ಒತ್ತು ನೀಡಿದ ಅವರು 11–6 ಮುನ್ನಡೆ ಪಡೆದರು. ದ್ವಿತೀಯಾರ್ಧದಲ್ಲೂ ಆಕರ್ಷಕ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ನಾಲ್ಕರ ಘಟ್ಟದಲ್ಲಿ ಲಕ್ಷ್ಯಗೆ ಸ್ವೀಡನ್‌ನ ಫೆಲಿಕ್ಸ್‌ ಬ್ಯೂರೆಸ್‌ಟೆಡ್ತ್‌ ಸವಾಲು ಎದುರಾಗಲಿದೆ.

Post Comments (+)