ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ರಾಜ್ಯಕ್ಕಿಲ್ಲ ಕಾನೂನು ಹೋರಾಟದ ಆಸಕ್ತಿ

Last Updated 12 ಮಾರ್ಚ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಮಾಗಡಿ ಮುಖ್ಯರಸ್ತೆಯ ಸೀಗೆಹಳ್ಳಿಯಲ್ಲಿ ಆಯೋಜಿಸಿದ್ದ ‘ಮಾಗಡಿ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ನಗರ ನಿವಾಸಿಗಳ ಸಭೆ’ಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಕಾವೇರಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಆಸಕ್ತಿ ತೋರಿಸುತ್ತಿಲ್ಲ. ರಾಷ್ಟ್ರೀಯ ಪಕ್ಷಗಳು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವೆಸಗುತ್ತಾ ಬಂದಿವೆ. ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದರು.

‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಶಾ ಹಾಗೂ ಕೇಂದ್ರ ಸಚಿವರು ಅಬ್ಬರದ ಪ್ರಚಾರ ಮಾಡುವ ಜತೆಗೆ, ಹಣದ ಹೊಳೆ ಹರಿಸುತ್ತಿದ್ದಾರೆ. ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದೆಯೂ ನಾವೇ ಅಧಿಕಾರ ನಡೆಸುತ್ತೇವೆ ಎಂದು ಹೇಳುವ ಮೂಲಕ ಹಗಲುಗನಸು ಕಾಣುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಬೇಕೆಂಬ ಪುತ್ರ ವ್ಯಾಮೋಹವಿಲ್ಲ. ಜನರ ಸೇವೆಗಾಗಿ ನನ್ನ ಜೀವನ ಮುಡುಪಾಗಿಟ್ಟಿದ್ದೇನೆ. ಜನಹಿತ, ಅಭಿವೃದ್ಧಿ, ಬಡವರ ಅಭ್ಯುದಯಕ್ಕಾಗಿ ಅಧಿಕಾರಕ್ಕೆ ಬರಬೇಕೆಂಬ ಹಂಬಲವಿದೆ’ ಎಂದರು.

ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಪಕ್ಷಕ್ಕೆ ದ್ರೋಹವೆಸಗಿ ಅನ್ಯ ಪಕ್ಷದತ್ತ ಮುಖ ಮಾಡಿದ್ದಾರೆ. ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್, ‘ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾಗಡಿ ಸುತ್ತಮುತ್ತ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ‍ಪಡಿಸಲಾಗುತ್ತದೆ. ಬಡವರು, ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವ ಯೋಜನೆ ಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT