ಬ್ಯಾಡ್ಮಿಂಟನ್‌: ಪ್ರಶಸ್ತಿ ಮೇಲೆ ಲಕ್ಷ್ಯ ಕಣ್ಣು

7
ಇಂದಿನಿಂದ ವಿಯೆಟ್ನಾಂ ಓಪನ್‌ ಟೂರ್ನಿ: ಜಯದ ನಿರೀಕ್ಷೆಯಲ್ಲಿ ಅಜಯ್‌, ಮಿಥುನ್‌

ಬ್ಯಾಡ್ಮಿಂಟನ್‌: ಪ್ರಶಸ್ತಿ ಮೇಲೆ ಲಕ್ಷ್ಯ ಕಣ್ಣು

Published:
Updated:
Deccan Herald

ಹೊಚಿಮಿನ್‌ ನಗರ, ವಿಯೆಟ್ನಾಂ: ಇತ್ತೀಚೆಗೆ ನಡೆದಿದ್ದ ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತದ ಲಕ್ಷ್ಯ ಸೇನ್‌, ಇಂದಿನಿಂದ ಇಲ್ಲಿ ಆರಂಭವಾಗುವ ವಿಯೆಟ್ನಾಂ ಓಪನ್‌ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

₹51.58 ಲಕ್ಷ (75 ಸಾವಿರ ಅಮೆರಿಕನ್‌ ಡಾಲರ್‌) ಪ್ರಶಸ್ತಿ ಮೊತ್ತದ ಈ ಟೂರ್ನಿಯಲ್ಲಿ ಲಕ್ಷ್ಯ ಸೇನ್‌ ಅವರು ಚಿನ್ನದ ಪದಕ ಜಯಿಸುವ ನೆಚ್ಚಿನ ಆಟಗಾರರಾಗಿದ್ದಾರೆ. 16 ವರ್ಷದ ಈ ಆಟಗಾರ ಏಷ್ಯಾ ಜೂನಿಯರ್‌ ಚಾಂಪಿಯನ್‌ಷಿಪ್‌ನ ಬಾಲಕರ ಸಿಂಗಲ್ಸ್‌ನಲ್ಲಿ 53 ವರ್ಷಗಳ ನಂತರ ಚಿನ್ನ ಗೆದ್ದ ಭಾರತದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. 

ಲಕ್ಷ್ಯ, ಈ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಸಿಂಗಪೂರದ ಜಿ ಜಿನ್‌ ರೀ ರ‍್ಯಾನ್‌ ಅವರನ್ನು ಎದುರಿಸಲಿದ್ದಾರೆ. ಇತ್ತೀಚೆಗೆ ನಡೆದಿದ್ದ ವೈಟ್‌ ನೈಟ್ಸ್‌ ಅಂತರರಾಷ್ಟ್ರೀಯ ಚಾಲೆಂಜ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ ಅಜಯ್‌ ಜಯರಾಮ್‌, ತಮ್ಮ ಮೊದಲ ಹಣಾಹಣಿಯಲ್ಲಿ ಸ್ಥಳೀಯ ಲೆ ಡುಕ್‌ ಫಾಟ್‌ ಅವರೊಂದಿಗೆ ಸೆಣಸಲಿದ್ದಾರೆ. 

ರಷ್ಯಾ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಮಿಥುನ್‌ ಮಂಜುನಾಥ್‌ ಅವರೂ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

ಧಾರವಾಡದ ಅಭಿಷೇಕ್‌ ಎಲಿಗಾರ, ಮಾರಿಷಸ್‌ನ ಜಾರ್ಜ್‌ ಜುಲಿಯನ್‌ ಪೌಲ್‌ ಎದುರು ಪೈಪೋಟಿ ನಡೆಸಲಿದ್ದಾರೆ. ರಾಹುಲ್‌ ಯಾದವ್‌ ಚಿತ್ತಬೊಯ್ನಾ ಅವರು ಟಿನ್‌ ಮಿನ್‌ ಗ್ಯುಯನ್‌ ವಿರುದ್ಧ ಆಡಲಿದ್ದಾರೆ. 

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಋತ್ವಿಕಾ ಶಿವಾನಿ ಗದ್ದೆ ಅವರು ಮಲೇಷ್ಯಾದ ಯಿನ್‌ ಫನ್‌ ಲಿಮ್‌ ಎದುರು ಸೆಣಸಲಿದ್ದಾರೆ. 2016ರಲ್ಲಿ ನಡೆದಿದ್ದ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಆಟಗಾರ್ತಿ ಚಿನ್ನಕ್ಕೆ ಕೊರಳೊಡ್ಡಿದ್ದರು.

ಮುಗ್ಧಾ ಅಗ್ರೆ, ಏಳನೇ ಶ್ರೇಯಾಂಕಿತ ಚೀನಾದ ಹಾನ್‌ ಯು ಎದುರು ಹಾಗೂ ವೈದೇಹಿ ಚೌಧರಿ ಅವರು ಅಮೆರಿಕದ ಕ್ರಿಸ್ಟಲ್‌ ಪ್ಯಾನ್‌ ವಿರುದ್ಧ ಹೋರಾಡಲಿದ್ದಾರೆ.

ಡಬಲ್ಸ್‌ ವಿಭಾಗದಲ್ಲಿ ಮೇಘನಾ ಜಕ್ಕಂಪುಡಿ ಹಾಗೂ ಎಸ್‌. ಪೂರ್ವಿಶಾ ರಾಮ್‌ ಜೋಡಿಯು ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಈ ಜೋಡಿಯು ಅರ್ಹತಾ ಸುತ್ತಿನಲ್ಲಿ ಗೆದ್ದ ಜೋಡಿಯನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದೆ. ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಶಿವಂ ಶರ್ಮಾ ಹಾಗೂ ಎಸ್‌. ಪೂರ್ವಿಶಾ ಜೋಡಿಯು ಪೈಪೋಟಿ ನಡೆಸಲಿದೆ. 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !