ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಲಕ್ಷ್ಯಗೆ ಡಚ್‌ ಓಪನ್‌ ಕಿರೀಟ

ಫೈನಲ್‌ನಲ್ಲಿ ಒನೊಡೆರಾ ಎದುರು ಗೆದ್ದ ಭಾರತದ ಆಟಗಾರ
Last Updated 13 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಅಲಮೆರ್‌, ನೆದರ್ಲೆಂಡ್ಸ್‌: ಅಮೋಘ ಆಟ ಆಡಿದ ಭಾರತದ ಲಕ್ಷ್ಯ ಸೇನ್‌ ಅವರು ಡಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಲಕ್ಷ್ಯ 15–21, 21–14, 21–15ರಲ್ಲಿ ಜಪಾನ್‌ನ ಯುಸಕೆ ಒನೊಡೆರಾ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ನಲ್ಲಿ ಚೊಚ್ಚಲ ಟ್ರೋಫಿ ಗೆದ್ದ ಸಾಧನೆ ಮಾಡಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 160ನೇ ಸ್ಥಾನದಲ್ಲಿದ್ದ ಒನೊಡೆರಾ, ಮೊದಲ ಗೇಮ್‌ನಲ್ಲಿ ಮಿಂಚಿದರು. ಆರಂಭದಿಂದಲೇ ಚುರುಕಿನ ಆಟ ಆಡಿದ ಅವರು 11–10, 14–13ರಲ್ಲಿ ಮುನ್ನಡೆ ಗಳಿಸಿದ್ದರು. ದ್ವಿತೀಯಾರ್ಧದಲ್ಲೂ ಗುಣಮಟ್ಟದ ಆಟ ಆಡಿ ಸುಲಭವಾಗಿ ಗೇಮ್‌ ಗೆದ್ದರು.

ಎರಡನೇ ಗೇಮ್‌ನಲ್ಲಿ ಲಕ್ಷ್ಯ, ತಿರುಗೇಟು ನೀಡಿದರು. 12–8ರಿಂದ ಮುನ್ನಡೆ ಗಳಿಸಿದ್ದ ಅವರು ನಂತರವೂ ನಿರಂತರವಾಗಿ ಪಾಯಿಂಟ್ಸ್‌ ಗಳಿಸಿ ಮುನ್ನಡೆಯನ್ನು 18–11ಕ್ಕೆ ಹೆಚ್ಚಿಸಿಕೊಂಡರು. ಭಾರತದ ಆಟಗಾರನ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳಿಗೆ ನಿರುತ್ತರರಾದ ಒನೊಡೆರಾ ಗೇಮ್‌ ಕೈಚೆಲ್ಲಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಭಾರತದ ಆಟಗಾರ ಆಕ್ರಮಣಕಾರಿಯಾಗಿ ಆಡಿದರು. 11–8 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 72ನೇ ಸ್ಥಾನದಲ್ಲಿರುವ ಲಕ್ಷ್ಯ, ದ್ವಿತೀಯಾರ್ಧದಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದರು. ಹೀಗಿದ್ದರೂ ಎದೆಗುಂದದ ಅವರು ದಿಟ್ಟ ಆಟ ಆಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT