ಗುರುವಾರ , ನವೆಂಬರ್ 14, 2019
22 °C
ಬೆಲ್ಜಿಯನ್‌ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌

ಲಕ್ಷ್ಯ ಸೇನ್‌ಗೆ ಕಿರೀಟ

Published:
Updated:
Prajavani

ಲಿವೆನ್‌, ಬೆಲ್ಜಿಯಂ: ಉತ್ತಮ ಆಟವಾಡಿದ ಭಾರತದ ಲಕ್ಷ್ಯ ಸೇನ್‌ ಬೆಲ್ಜಿಯನ್‌ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಶನಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು ಎರಡನೇ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್‌ ಸ್ವೆಂಡ್‌ಸೆನ್‌ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದರು.

ಕೇವಲ 34 ನಿಮಿಷಗಳಲ್ಲಿ ಮುಗಿದ ಪಂದ್ಯದಲ್ಲಿ ಭಾರತದ ಆಟಗಾರ 21–14, 21–15 ಗೇಮ್‌ಗಳಿಂದ ಜಯಭೇರಿ ಮೊಳಗಿಸಿದರು.

ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಲಕ್ಷ್ಯ ಅವರು ಡೆನ್ಮಾರ್ಕ್‌ನ ಕಿಮ್‌ ಬ್ರೂನ್‌ ವಿರುದ್ಧ 21–14, 21–15ರಿಂದ ಗೆದ್ದಿದ್ದರು.

ಸೆಮಿಫೈನಲ್‌ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಆರಂಭದಿಂದಲೇ ಇಬ್ಬರೂ ಆಟಗಾರರು ಮುನ್ನಡೆ ಪಡೆಯಲು ಹೋರಾಟ ನಡೆಸಿದರು. ವಿರಾಮದ ವೇಳೆಗೆ ಬ್ರೂಕ್‌ 11–9ರಿಂದ ಮುಂದಿದ್ದರು. ಬಳಿಕ ತಿರುಗೇಟು ನೀಡಿದ ಲಕ್ಷ್ಯ ಮುನ್ನಡೆಯನ್ನು ಹೆಚ್ಚಿಸಿಕೊಂಡು ಮೊದಲ ಗೇಮ್‌ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನ ಆರಂಭದಲ್ಲೇ ಭಾರತದ ಆಟಗಾರನಿಗೆ 6–2ರ ಮುನ್ನಡೆ ಸಿಕ್ಕಿತು. ವಿರಾಮದ ವೇಳೆ ಮುನ್ನಡೆಯನ್ನು 11–3ಕ್ಕೆ ಹೆಚ್ಚಿಸಿಕೊಂಡರು. ಗೇಮ್‌ ಜೊತೆಗೆ  ಲಕ್ಷ್ಯ ಅವರು ಪಂದ್ಯವನ್ನೂ ಗೆದ್ದು ಬೀಗಿದರು.

ವಿಯೆಟ್ನಾಂ ಓಪನ್: ಸೌರಭ್ ಜಯಭೇರಿ

ಹೊ ಚಿ ಮಿನ್ ಸಿಟಿ (ಪಿಟಿಐ): ಭಾರ ತದ ಸೌರಭ್ ವರ್ಮಾ ಭಾನುವಾರ ವಿಯೆಟ್ನಾಂ ಓಪನ್ ಬಿಡಬ್ಲ್ಯುಎಫ್ ಟೂರ್ ಸೂಪರ್ 100 ಪ್ರಶಸ್ತಿಯನ್ನು ಗೆದ್ದುಕೊಂಡರು.

ಫೈನಲ್‌ನಲ್ಲಿ ಅವರು 21–12, 17–21, 21–14ರಿಂದ ಚೀನಾದ  ಚೀನಾದ ಸನ್ ಫೀ ಯಾಂಗ್ ವಿರುದ್ಧ ಜಯ ಗಳಿಸಿದರು. 

ಮೊದಲ ಗೇಮ್‌ನ ಆರಂಭದಲ್ಲಿ 4–0 ಮುನ್ನಡೆ ಪಡೆದ ಅವರು ನಂತರ ಅದನ್ನು 15–4ಕ್ಕೆ ಹೆಚ್ಚಿಸಿಕೊಂಡರು. ನಂತರ ಗೇಮ್ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಚುರುಕಾದ ಆಟದ ಮೂಲಕ ಸನ್ ತಿರುಗೇಟು ನೀಡಿದರು. ಸೌರಭ್‌ ಪಟ್ಟು ಬಿಡದೆ ಆಡಿದರೂ ಎದುರಾಳಿ ಗೇಮ್ ಗೆದ್ದರು.

ಇದರಿಂದಾಗಿ ಮೂರನೇ ಗೇಮ್ ಕುತೂಹಲ ಕೆರಳಿಸಿತು. ಇಬ್ಬರೂ ಆರಂಭದಿಂದಲೇ ಜಿದ್ದಿಗೆ ಬಿದ್ದರು. 4–2ರ ಅಲ್ಪ ಮುನ್ನಡೆಯಲ್ಲಿದ್ದ ಚೀನಾದ ಆಟಗಾರನ್ನು ಹಿಂದಿಕ್ಕುವ ಸೌರಭ್ ಪ್ರಯತ್ನ ಫಲಿಸಿತು. 17–14ರವರೆಗೆ ತಮ್ಮ ಮುನ್ನಡೆ ವಿಸ್ತರಿಸುವಲ್ಲಿ ಸೌರಭ್ ಯಶಸ್ವಿಯಾದರು. ಅಷ್ಟೇ ಅಲ್ಲ. ಅಲ್ಲಿಂದ ಮುಂದೆ ಎದುರಾಳಿಗೆ ಒಂದೂ ಪಾಯಿಂಟ್‌ ಬಿಟ್ಟುಕೊಡದೇ ಗೆಲುವಿನ ದಡಕ್ಕೆ ಜಿಗಿದರು. ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮಧ್ಯಪ್ರದೇಶದ 26 ವರ್ಷದ ಸೌರಭ್ ಅವರಿಗೆ ಈ ವರ್ಷದ ಮೂರನೇ ಪ್ರಶಸ್ತಿ ಇದು. ಈಚೆಗೆ ಅವರು ಹೈದರಾಬಾದ್ ಓಪನ್ ಮತ್ತು ಸ್ಲೋವೆನಿಯನ್ ಇಂಟರ್‌ನ್ಯಾಷನಲ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಹೋದ ವರ್ಷ ಅವರು ಡಚ್ ಓಪನ್ ಮತ್ತು ಕೊರಿಯಾ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 38ನೇ ಸ್ಥಾನದಲ್ಲಿರುವ ಸೌರಭ್ ಇದೇ 24 ರಿಂದ 29ರವರೆಗೆ ನೆಯಲಿರುವ ಕೋರಿಯಾ ಓಪನ್ ವಿಶ್ವ ಟೂರ್ ಸೂಪರ್ 500 ಟೂರ್ನಿಯಲ್ಲಿ ಆಡಲಿದ್ದಾರೆ.

ಪ್ರತಿಕ್ರಿಯಿಸಿ (+)