ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟಿಷ್ ಓಪನ್ ಪ್ರಶಸ್ತಿ ಲಕ್ಷ್ಯ ಸೇನ್ ಮುಡಿಗೆ

Last Updated 25 ನವೆಂಬರ್ 2019, 19:37 IST
ಅಕ್ಷರ ಗಾತ್ರ

ಗ್ಲಾಸ್ಗೊ (ಪಿಟಿಐ): ಎದುರಾಳಿಯ ಛಲದ ಆಟಕ್ಕೆ ದಿಟ್ಟ ಉತ್ತರ ನೀಡಿದ ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ಭಾನುವಾರ ರಾತ್ರಿ ಮುಕ್ತಾಯಗೊಂಡ ಸ್ಕಾಟಿಷ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅವರು ಬ್ರೆಜಿಲ್‌ನ ಇಗೊರ್ ಕೊಲ್ಹೊ ವಿರುದ್ಧ 18–21, 21–18, 21–19ರಲ್ಲಿ ಜಯ ಗಳಿಸಿದರು. ಅಗ್ರ ಶ್ರೇಯಾಂಕದ ಲಕ್ಷ್ಯ ಸೇನ್‌ ಎದುರಾಳಿಯನ್ನು ಮಣಿಸಲು ತೆಗೆದುಕೊಂಡದ್ದು ಕೇವಲ 56 ನಿಮಿಷ.

18 ವರ್ಷದ, ಉತ್ತರಾಖಂಡದ ಈ ಆಟಗಾರ ಮೂರು ತಿಂಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಭರವಸೆ ಮೂಡಿಸಿದ್ದಾರೆ. ಸಾರ್‌ಲಾರ್ ಲಕ್ಸ್‌ ಓಪನ್‌, ಡಚ್ ಓಪನ್ ಮತ್ತು ಬೆಲ್ಜಿಯಂ ಅಂತರರಾಷ್ಟ್ರೀಯ ಟೂರ್ನಿಗಳಲ್ಲೂ ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಆದರೆ ಐರಿಷ್ ಓಪನ್‌ನಲ್ಲಿ ಎರಡನೇ ಸುತ್ತಿನಲ್ಲೇ ಸೋತಿದ್ದರು. ಇದರಿಂದ ಎದೆಗುಂದದ ಸೇನ್ ಸ್ಕಾಟಿಷ್ ಓಪನ್‌ನ ಆರಂಭದಲ್ಲೇ ಎಚ್ಚರಿಕೆಯ ಆಟವಾಡಿದ್ದರು.

ವಿಶ್ವ ಕ್ರಮಾಂಕದಲ್ಲಿ 41ನೇ ಸ್ಥಾನದಲ್ಲಿರುವ ಅವರು ಮೊದಲ ಸುತ್ತಿನಲ್ಲಿ ಆಸ್ಟ್ರಿಯಾದ ಲೂಕಾ ವ್ರಾಬರ್ ಎದುರು ನೇರ ಗೇಮ್‌ಗಳಿಂದ ಗೆದ್ದಿದ್ದರು. ಭಾರತದ ಕಿರಣ್ ಜಾರ್ಜ್ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಲಕ್ಷ್ಯ, ಆರನೇ ಶ್ರೇಯಾಂಕದ ಬ್ರಯಾನ್ ಯಾಂಗ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇರಿಸಿದ್ದರು. ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್ ಎದುರು ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು.

ಹಿನ್ನಡೆಯಿಂದ ಮೇಲೆದ್ದ ಸೇನ್:ಫೈನಲ್ ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲಿ ಲಕ್ಷ್ಯ ಸೇನ್ ಹಿನ್ನಡೆ ಅನುಭವಿಸಿದ್ದರು. ನಂತರ ಚೇತರಿಸಿಕೊಂಡು 10–8 ಮುನ್ನಡೆ ಗಳಿಸಿದರು. ಆದರೆ ಸತತ ಆರು ಪಾಯಿಂಟ್ ಕಲೆ ಹಾಕಿ ಬ್ರೆಜಿಲ್ ಆಟಗಾರ ಮುನ್ನಡೆದರು. ನಂತರ ಗೇಮ್‌ ಗೆದ್ದರು.

ಎರಡನೇ ಗೇಮ್‌ನಲ್ಲಿ ಲಕ್ಷ್ಯ ಸೇನ್ ಪುಟಿದೆದ್ದರು. ಆರಂಭದಲ್ಲಿ 7–0 ಮುನ್ನಡೆ ಸಾಧಿಸಿದ ಅವರು ಸುಲಭವಾಗಿ ಗೇಮ್ ಗೆಲ್ಲುವ ಭರವಸೆ ಮೂಡಿಸಿದರು. ಆದರೆ ಇಗೊರ್ ನಿಧಾನಕ್ಕೆ ಹಿಡಿತ ಸಾಧಿಸಿ 17–17ರ ಸಮಬಲ ಸಾಧಿಸಿದರು. ಆದರೂ ಲಕ್ಷ್ಯ ಸೇನ್ ಪಟ್ಟು ಬಿಡದೆ ಆಡಿ ಗೇಮ್ ಗೆದ್ದುಕೊಂಡರು.

ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಇಬ್ಬರೂ ಛಲದಿಂದ ಕಾದಾಡಿದರು. ಇಗೊರ್ 11–8ರ ಮುನ್ನಡೆ ಸಾಧಿಸಿದ್ದಾಗ ಪ್ರಬಲ ತಿರುಗೇಟು ನೀಡಿದ ಭಾರತದ ಆಟಗಾರ ಗೇಮ್ ಮತ್ತು ಪಂದ್ಯವನ್ನು ಗೆದ್ದು ಸಂಭ್ರಮಿಸಿದರು. 1999ರಲ್ಲಿ ಪುಲ್ಲೇಲ ಗೋಪಿಚಂದ್‌, 2004ರಲ್ಲಿ ಅರವಿಂದ ಭಟ್‌, 2010 ಮತ್ತು 2012ರಲ್ಲಿ ಆನಂದ್ ಪವಾರ್ ಅವರು ಸ್ಕಾಟಿಷ್ ಓಪನ್ ಪ್ರಶಸ್ತಿ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT