ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹರಿಸದಿರಲು ‘ಕಾಡಾ’ ನಿರ್ಧಾರ

ಗದಗ ಜಿಲ್ಲೆಗೆ ಎರಡು ಟಿಎಂಸಿ ಅಡಿ ನೀರು ನೀಡಲು ಸರ್ಕಾರದ ಆದೇಶ
Last Updated 13 ಮಾರ್ಚ್ 2018, 7:47 IST
ಅಕ್ಷರ ಗಾತ್ರ

ಶಿವಮೊಗ್ಗ: ಗದಗ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ಜಲಾಶಯದಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಸೋಮವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.

ಮಳೆ ಕೊರತೆಯ ಕಾರಣ ಸತತ ಎರಡು ಭತ್ತದ ಬೆಳೆ ತ್ಯಾಗ ಮಾಡಿರುವ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಈ ಬೇಸಿಗೆ ಬೆಳೆಗೆ ಜನವರಿಯಿಂದಲೇ ನಿರಂತರ ನೀರು ಹರಿಸಲಾಗುತ್ತಿದೆ. ಈಗ ದಿಢೀರ್ ಎಂದು ನದಿಗೆ ನೀರು ಹರಿಸಿದರೆ ಭತ್ತಕ್ಕೆ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಕೊನೆಯ ಹಂತದಲ್ಲಿ ಬೆಳೆನಷ್ಟವಾಗುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಇದೇ ತಿಂಗಳ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂಗಟಾಲೂರು ಏತ ನೀರಾವರಿ ಯೋಜನೆ ಎರಡನೇ ಹಂತ ಉದ್ಘಾಟಿಸುತ್ತಿದ್ದು, ಈ ಸಮಯದಲ್ಲಿ ನದಿಯಲ್ಲಿ ನೀರು ಇರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಅಲ್ಲದೇ, ಜಿಲ್ಲೆಯ ಹಲವು ಕುಡಿಯುವ ನೀರಿನ ಯೋಜನೆಗಳಿಗೆ ನೀರು ಬೇಕಿದೆ. ಹಾಗಾಗಿ, ಸೋಮವಾರ ಮಧ್ಯರಾತ್ರಿಯಿಂದಲೇ ನದಿಗೆ 2 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು.

ಭದ್ರಾ ‘ಕಾಡಾ’ ಅಧ್ಯಕ್ಷ ಸುಂದರೇಶ್ ಮಾತನಾಡಿ, ‘ಗದಗ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ 2 ಟಿಎಂಸಿ ಅಡಿ ನೀರು ಹರಿಸುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ. ಜೂನ್‌ 2017ರಿಂದ ಈ ವರ್ಷದ ಮಾರ್ಚ್‌ 11ರವರೆಗೆ 2.325 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಮೀಸಲಿಟ್ಟ ನೀರಿನಲ್ಲಿ ಇನ್ನೂ 1.1ಟಿಎಂಸಿ ನೀರು ಹರಿಸುವುದು ಬಾಕಿ ಇದೆ. ಈಗ ಹೆಚ್ಚುವರಿಯಾಗಿ ನೀರು ಹರಿಸುವಂತೆ ಸೂಚಿಸಲಾಗಿದೆ. ಈ ಕುರಿತು ಸಭೆ ಸೂಕ್ತ ಸಲಹೆ ನೀಡಬೇಕು’ ಎಂದು ಕೋರಿದರು.

ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಒಕ್ಕೂಟಗಳ ಅಧ್ಯಕ್ಷ ತೇಜಸ್ವಿ ಪಟೇಲ್‌ ಮಾತನಾಡಿ, ‘ಕುಡಿಯುವ ನೀರಿನ ಬೇಡಿಕೆ ಮಾನವೀಯತೆ ದೃಷ್ಟಿಯಿಂದ ನೋಡಬೇಕು. ಆದರೆ, ಬೇಡಿಕೆ ಸಲ್ಲಿಸಿರುವ ಸಮಯ ಸಕಾಲಿಕವಾಗಿಲ್ಲ. ಈ ಸಾಲಿನ ನೀರು ಹಂಚಿಕೆ ವೇಳಾಪಟ್ಟಿ ನಿಗದಿ ಮಾಡುವ ಮುನ್ನ ಮನವಿ ಮಾಡಿದ್ದರೆ ಪರಿಗಣನೆಗೆ ತೆಗೆದುಕೊಳ್ಳಬಹುದಿತ್ತು. ಕುಡಿಯುವ ನೀರು ಸರಬರಾಜು ಮಾಡುವ ಹೊಣೆ ಹೊತ್ತು ಇಲಾಖೆಗಳು ಈ ಕುರಿತು ಮೊದಲೇ ಏಕೆ ಯೋಚಿಸಲಿಲ್ಲ’ ಎಂದು ಪ್ರಶ್ನಿಸಿದರು.

ಅಚ್ಚುಕಟ್ಟು ಭಾಗದಲ್ಲಿ ಈಗಲೂ ನಾಟಿ ಕಾರ್ಯ ನಡೆದಿದೆ. ರೈತರು ನಿರಂತರ ನೀರು ಹರಿಸುವ ಭರವಸೆ ನಂಬಿಕೊಂಡು ವಿವಿಧ ಬೆಳೆ ಹಾಕಿದ್ದಾರೆ. ನಿಗದಿಯಂತೆ ನೀರು ಹರಿಸಲೇ ಬೇಕಿದೆ. ಹಾಗಾಗಿ, ಸರ್ಕಾರದ ಪ್ರಸ್ತಾವ ತಿರಸ್ಕರಿಸಬೇಕು ಎಂದು ಸಲಹೆ ನೀಡಿದರು.

ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ್ ಮಾತನಾಡಿ, ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಎಷ್ಟು ನೀರು ಬೇಕು ಎಂಬ ಮಾಹಿತಿ ಮೊದಲೇ ನೀಡಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳ ಸಭೆಯಲ್ಲೂ ಪ್ರಸ್ತಾವ ಮಾಡಿರಲಿಲ್ಲ. ಈಗ ದಿಢೀರ್ ನೀರು ಬೇಕು ಎಂದರೆ ಹೇಗೆ? ಅಲ್ಲದೇ, 2 ಟಿಎಂಸಿ ಅಡಿ ನೀರು ಹರಿಸಿದರೆ 200 ಕಿಲೋ ಮೀಟರ್ ತಲುಪಲು ಸಾಧ್ಯವೇ ಇಲ್ಲ. ಇಲ್ಲಿನ ರೈತರಿಗೆ ಕಾಡಾ ನೀಡಿದ ವಚನದಂತೆ ನೀರು ಹರಿಸಬೇಕು. ಹಾಗಾಗಿ, ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಈ ಆದೇಶ ಹಿಂದಕ್ಕೆ ಪಡೆಯಲು ಸೂಚಿಸಬೇಕು’ ಎಂದು ಆಗ್ರಹಿಸಿದರು.

ಬೆಳೆಗೆ ಹರಿಸಬೇಕು 54 ದಿನ ನೀರು
ಕಾಡಾ ಸಭೆಯಲ್ಲಿ ಈ ಬಾರಿಯ ಬೇಸಿಗೆ ಭತ್ತದ ಬೆಳೆಗೆ ಒಟ್ಟು 125 ದಿನ ನಿರಂತರ ನೀರು ಹರಿಸಲು ನಿರ್ಧರಿಸಲಾಗಿತ್ತು. ಈಗಾಗಲೇ 66 ದಿನ ನೀರು ಹರಿಸಲಾಗಿದೆ. ಇನ್ನೂ 54 ದಿನ ಬಾಕಿ ಇದೆ. ಜಲಾಶಯದಲ್ಲಿ ಬಳಕೆಗೆ 17.70 ಟಿಎಂಸಿ ಅಡಿ ನೀರು ಲಭ್ಯವಿದೆ. 66 ದಿನ ನೀರು ಹರಿಸಲು ಇನ್ನೂ 1 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಬೇಕಿದೆ. ಸರ್ಕಾರದ ಆದೇಶದಂತೆ ಈಗ 2 ಟಿಎಂಸಿ ಅಡಿ ನೀರು ಹರಿಸಿದರೆ ಮತ್ತೆ 3 ಟಿಎಂಸಿ ಅಡಿ ನೀರಿನ ಕೊರತೆಯಾಗಲಿದೆ.

ಶಾಸಕರಾದ ಡಿ.ಜಿ. ಶಾಂತನಗೌಡ, ಎಂ.ಜೆ. ಅಪ್ಪಾಜಿ, ಎಚ್‌.ಎಸ್. ಶಿವಶಂಕರ್, ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT