ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಮಿಲ್ಟನ್‌ ಮುಡಿಗೆ ಐದನೇ ವಿಶ್ವ ಕಿರೀಟ

ಫಂಗಿಯೊ ದಾಖಲೆ ಸರಿಗಟ್ಟಿದ ಬ್ರಿಟನ್‌ನ ಚಾಲಕ
Last Updated 29 ಅಕ್ಟೋಬರ್ 2018, 19:00 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ: ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌, ಭಾನುವಾರ ಮೋಟರ್‌ಸ್ಪೋರ್ಟ್ಸ್‌ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಮರ್ಸಿಡೀಸ್‌ ತಂಡದ ಚಾಲಕ ಹ್ಯಾಮಿಲ್ಟನ್‌, ಫಾರ್ಮುಲಾ–1 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಅರ್ಜೆಂಟೀನಾದ ವುವಾನ್‌ ಮ್ಯಾನುಯೆಲ್‌ ಫಂಗಿಯೊ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೆಕ್ಸಿಕೊ ಗ್ರ್ಯಾನ್‌ ಪ್ರೀ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿ ಲೂಯಿಸ್‌ ಈ ಸಾಧನೆ ಮಾಡಿದ್ದಾರೆ. ಒಟ್ಟು 358 ‍‍ಪಾಯಿಂಟ್ಸ್‌ ಕಲೆಹಾಕಿರುವ ಅವರು ಜರ್ಮನಿಯ ಚಾಲಕ ಸೆಬಾ‌ಸ್ಟಿಯನ್‌ ವೆಟಲ್‌ ಅವರನ್ನು ಹಿಂದಿಕ್ಕಿದ್ದಾರೆ.

ಹ್ಯಾಮಿಲ್ಟನ್‌ ಅವರು 2008ರಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ ಆಗಿದ್ದರು. 2014, 2015 ಮತ್ತು 2017ರಲ್ಲೂ ಪ್ರಶಸ್ತಿ ಜಯಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದಿರುವ ದಾಖಲೆ ಜರ್ಮನಿಯ ಮೈಕಲ್ ಶುಮಾಕರ್‌ ಹೆಸರಿನಲ್ಲಿದೆ. ಅವರು ಏಳು ಬಾರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಈ ಬಾರಿಯ ವಿಶ್ವ ಚಾಂಪಿಯನ್‌ ಕಿರೀಟಕ್ಕೆ 33 ವರ್ಷದ ಹ್ಯಾಮಿಲ್ಟನ್‌ ಮತ್ತು ಫೆರಾರಿ ತಂಡದ ಚಾಲಕ ವೆಟಲ್‌ ನಡುವೆ ಜಿದ್ದಾಜಿದ್ದಿನ ಪೈ‍ಪೋಟಿ ಏರ್ಪಟ್ಟಿತ್ತು. ಚಾಂಪಿಯನ್‌ ಪಟ್ಟದ ಆಸೆ ಜೀವಂತವಾಗಿಟ್ಟುಕೊಳ್ಳಲು ವೆಟಲ್‌, ಮೆಕ್ಸಿಕೊ ಗ್ರ್ಯಾನ್‌ ‍ಪ್ರೀ ರೇಸ್‌ನಲ್ಲಿ ಪ್ರಶಸ್ತಿ ಗೆಲ್ಲಲೇಬೇಕಿತ್ತು. ಎರಡನೇ ಸ್ಥಾನ ಗಳಿಸಿದ್ದರಿಂದ ಅವರ ಕನಸು ಕಮರಿತು.

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಪ್ರಶಸ್ತಿ ಗೆಲ್ಲುತ್ತೇನೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಜೊತೆಗೆ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಹ್ಯಾಮಿಲ್ಟನ್‌ ನುಡಿದಿದ್ದಾರೆ.

‘ಈ ಋತು ನನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ಪ್ರತಿ ರೇಸ್‌ನಲ್ಲೂ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೇನೆ. ಹಾಗಂತ ಎಂದೂ ಎದೆಗುಂದಲಿಲ್ಲ. ಟ್ರ್ಯಾಕ್‌ಗೆ ಇಳಿದ ಬಳಿಕ ಗುರಿ ಮುಟ್ಟುವತ್ತ ಮಾತ್ರ ಚಿತ್ತ ಹರಿಸುತ್ತಿದ್ದೆ. ಅದರ ಹೊರತು ಬೇರೆ ಯಾವ ಆಲೋಚನೆಯೂ ನನ್ನಲ್ಲಿರುತ್ತಿರಲಿಲ್ಲ. ಈ ಸಾಧನೆಯ ಹಿಂದೆ ಮರ್ಸಿಡೀಸ್‌ ತಂಡ ಮತ್ತು ನೆರವು ಸಿಬ್ಬಂದಿಯ ಕಾಣಿಕೆಯೂ ಇದೆ. ಅದನ್ನು ಮರೆಯುವಂತಿಲ್ಲ’ ಎಂದು ಅವರು ತಿಳಿಸಿದ್ದಾರೆ.

ವರ್ಸ್ಟಾಪನ್‌ ಚಾಂಪಿಯನ್‌: ಮೆಕ್ಸಿಕೊ ಗ್ರ್ಯಾನ್‌ ಪ್ರೀ ರೇಸ್‌ನಲ್ಲಿ ರೆಡ್‌ಬುಲ್‌ ತಂಡದ ಮ್ಯಾಕ್ಸ್‌ ವರ್ಸ್ಟಾಪನ್‌ ಚಾಂಪಿಯನ್‌ ಆದರು.

ನೆದರ್ಲೆಂಡ್ಸ್‌ನ ಚಾಲಕ ಮ್ಯಾಕ್ಸ್‌ 1 ಗಂಟೆ 38 ನಿಮಿಷ 28.851 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಫೆರಾರಿ ತಂಡದ ವೆಟಲ್‌ ಎರಡನೇಯವರಾಗಿ ಗುರಿ ಮುಟ್ಟಿದರು. ಫೆರಾರಿ ತಂಡದ ಮತ್ತೊಬ್ಬ ಚಾಲಕ, ಫಿನ್ಲೆಂಡ್‌ನ ಕಿಮಿ ರಾಯಿಕ್ಕೊನೆನ್‌ ಮೂರನೇ ಸ್ಥಾನ ಗಳಿಸಿದರು.

ಮರ್ಸಿಡೀಸ್‌ ತಂಡದ ವಲಟ್ಟೆರಿ ಬೊಟ್ಟಾಸ್‌, ರೆನಾಲ್ಟ್‌ ತಂಡದ ನಿಕೊ ಹುಲ್ಕೆನ್‌ಬರ್ಗ್‌, ಸಬರ್‌ ತಂಡದ ಚಾರ್ಲೆಸ್‌ ಲೆಕ್‌ಲರ್ಕ್‌, ಮೆಕ್‌ಲಾರೆನ್‌ ತಂಡದ ಸ್ಟೊಫೆಲ್‌ ವ್ಯಾಂಡೂರ್ನ್‌, ಸಬರ್‌ ತಂಡದ ಮಾರ್ಕಸ್‌ ಎರಿಕ್‌ಸನ್‌ ಮತ್ತು ಟೊರೊ ರೊಸೊ ತಂಡದ ಪಿಯೆರೆ ಗ್ಯಾಸ್ಲಿ ಅವರು ಕ್ರಮವಾಗಿ ಐದರಿಂದ 10ನೇ ಸ್ಥಾನಗಳಲ್ಲಿ ಕಾಣಿಸಿಕೊಂಡರು.

ಫೋರ್ಸ್‌ ಇಂಡಿಯಾ ತಂಡದ ಚಾಲಕ ಫ್ರಾನ್ಸ್‌ನ ಎಸ್ಟೆನ್‌ಬನ್‌ ಒಕಾನ್‌ ಅವರು 11ನೇ ಯವರಾಗಿ ಗುರಿ ಕ್ರಮಿಸಿದರು.

*********

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT