ಮಂಗಳವಾರ, ಆಗಸ್ಟ್ 3, 2021
24 °C

ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ ಪ್ರಶಸ್ತಿ : ದಾಖಲೆ ಸರಿಗಟ್ಟಿದ ಹ್ಯಾಮಿಲ್ಟನ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬುಡಾಪೆಸ್ಟ್: ಮಿಂಚಿನ ವೇಗದ ಚಾಲನೆ ಮಾಡಿ ಸರ್ಕೀಟ್‌ನ ಲ್ಯಾಪ್ ದಾಖಲೆ ಮುರಿದ ಮರುದಿನವೇ ಮರ್ಸಿಡಿಸ್‌ ಚಾಲಕ ಲೂಯಿಸ್ ಹ್ಯಾಮಿಲ್ಟನ್ ದಾಖಲೆಯ ಗೆಲುವಿನೊಂದಿಗೆ ಸಂಭ್ರಮಿಸಿದರು. ಭಾನುವಾರ ಇಲ್ಲಿ ನಡೆದ ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ ಫಾರ್ಮುಲಾ ಒನ್ ರ‍್ಯಾಲಿಯ ಪ್ರಶಸ್ತಿ ಸುತ್ತಿನಲ್ಲಿ ಮೊದಲಿಗರಾದ ಅವರು ಹ್ಯಾಟ್ರಿಕ್ ಸಾಧಿಸಿದರು. ಹ್ಯಾಮಿಲ್ಟನ್ ಶನಿವಾರ ವೃತ್ತಿಜೀವನದಲ್ಲಿ 90ನೇ ಬಾರಿ ಅಗ್ರ ಸ್ಥಾನ ಗಳಿಸಿದ್ದರು.

ಭಾನುವಾರದ ಗೆಲುವಿನೊಂದಿಗೆ ಅವರು ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ನಲ್ಲಿ ಒಟ್ಟು ಎಂಟು ಬಾರಿ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದರು. ಈ ಮೂಲಕ ಮೈಕೆಲ್ ಶುಮಾಕರ್ ದಾಖಲೆಯನ್ನು ಸರಿಗಟ್ಟಿದರು. ಶುಮಾಕರ್ ಫ್ರೆಂಚ್ ಗ್ರ್ಯಾನ್‌ ಪ್ರಿಕ್ಸ್‌ನಲ್ಲಿ ಎಂಟು ಬಾರಿ ಪ್ರಶಸ್ತಿ ಗೆದ್ದಿದ್ದರು. ಇದು, ಒಬ್ಬ ಚಾಲಕ ಒಂದೇ ರೇಸ್‌ನಲ್ಲಿ ಗಳಿಸಿದ ಅತಿ ಹೆಚ್ಚು ಪ್ರಶಸ್ತಿ ಆಗಿತ್ತು.

ಹವಾಮಾನ ಆಗಾಗ ಬದಲಾಗುತ್ತಿದ್ದ ಪ್ರದೇಶದಲ್ಲಿ ಕಾರನ್ನು ಅತ್ಯಂತ ನಾಜೂಕಾಗಿ ನಿಯಂತ್ರಿಸಿದ ಹ್ಯಾಮಿಲ್ಟನ್ ಈ ಋತುವಿನ ಎರಡನೇ ಮತ್ತು ವೃತ್ತಿಜೀವನದ ಒಟ್ಟಾರೆ 86ನೇ ಜಯ ಸಾಧಿಸಿದರು. ಇನ್ನು ಐದು ಗೆಲುವು ದಾಖಲಿಸಿದರೆ ಶುಮಾಕರ್ ದಾಖಲೆಯನ್ನು ಅವರು ಸರಿಗಟ್ಟಲಿದ್ದಾರೆ.

ಟ್ರ್ಯಾಕ್‌ನಲ್ಲಿ ಕಾರು ಕೈಕೊಟ್ಟ ಕಾರಣ ದುರಸ್ತಿ ಮಾಡಿ ಮುಂದುವರಿದ ರೆಡ್ ಬುಲ್‌ನ ಮ್ಯಾಕ್ಸ್ ವೆರ್ಸಪ್ಪನ್ ದ್ವಿತೀಯ ಸ್ಥಾನ ಗಳಿಸಿದರು. ಅಂತಿಮ ಕ್ಷಣಗಳಲ್ಲಿ ಬೊತಾಸ್ ಅವರ ಸವಾಲನ್ನು ಮೀರಿ ನಿಂತು ವೆರ್ಸಪ್ಪನ್ ಗಮನ ಸೆಳೆದರು. ಕೆಲವೇ ಮೀಟರ್ ಅಂತರದಲ್ಲಿ ದ್ವಿತೀಯ ಸ್ಥಾನ ಕಳೆದುಕೊಂಡ ಬೊತಾಸ್ ನಿರಾಸೆಗೆ ಒಳಗಾದದ್ದು ನಿಜ. ಆದರೆ ನಾಲ್ಕು ಬಾರಿಯ ಚಾಂಪಿಯನ್ ಸೆಬಾಸ್ಟಿಯನ್ ವೆಟೆಲ್ ಅವರನ್ನು ಹಿಂದಿಕ್ಕಿ ಪುಳಕಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು