ಗುರುವಾರ , ನವೆಂಬರ್ 21, 2019
20 °C

ಹ್ಯಾಮಿಲ್ಟನ್‌ ಮುಡಿಗೆ ಆರನೇ ವಿಶ್ವ ಕಿರೀಟ

Published:
Updated:
Prajavani

ಆಸ್ಟಿನ್‌: ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಫಾರ್ಮುಲಾ ಒನ್‌ ಮೋಟರ್‌ ರೇಸ್‌ನಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ. 34 ವರ್ಷ ವಯಸ್ಸಿನ ಈ ಸಾಹಸಿ, ಆರನೇ ಸಲ ವಿಶ್ವ ಚಾಂಪಿಯನ್‌ ಆಗಿದ್ದಾರೆ.

ಮರ್ಸಿಡೀಸ್‌ ತಂಡದ ಹ್ಯಾಮಿಲ್ಟನ್‌, ಭಾನುವಾರ ನಡೆದ ಅಮೆರಿಕ ಗ್ರ್ಯಾನ್‌ಪ್ರಿ ರೇಸ್‌ನಲ್ಲಿ ಎರಡನೇ ಸ್ಥಾನ ಗಳಿಸಿದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 381ಕ್ಕೆ ಹೆಚ್ಚಿಸಿಕೊಂಡು ‘ಹ್ಯಾಟ್ರಿಕ್‌’ ಪ್ರಶಸ್ತಿಯ ಸಂಭ್ರಮ ಆಚರಿಸಿದರು.

2008ರಲ್ಲಿ ಮೊದಲ ಸಲ ವಿಶ್ವ ಚಾಂಪಿಯನ್‌ ಆಗಿದ್ದ ಅವರು 2014, 2015, 2017 ಮತ್ತು 2018ರಲ್ಲೂ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಫಾರ್ಮುಲಾ ಒನ್‌ನಲ್ಲಿ ಅತಿ ಹೆಚ್ಚು ವಿಶ್ವ ಕಿರೀಟ ಗೆದ್ದ (7) ದಾಖಲೆ ಜರ್ಮನಿಯ ಮೈಕಲ್‌ ಶುಮಾಕರ್‌ ಹೆಸರಿನಲ್ಲಿದೆ. ಶುಮಾಕರ್‌ ದಾಖಲೆ ಸರಿಗಟ್ಟಲು ಹ್ಯಾಮಿಲ್ಟನ್‌ ಇನ್ನೊಂದು ಪ್ರಶಸ್ತಿ ಜಯಿಸಬೇಕಿದೆ.

‘ಭಾನುವಾರದ ರೇಸ್‌ ತುಂಬಾ ಕಠಿಣವಾಗಿತ್ತು. ವಲಟ್ಟೆರಿ ಬೊಟ್ಟಾಸ್‌ ನನಗಿಂತಲೂ ಉತ್ತಮ ಸಾಮರ್ಥ್ಯ ತೋರಿದರು. ಅಪ್ಪ, ಅಮ್ಮ ಮತ್ತು ಕುಟುಂಬದ ಇತರ ಸದಸ್ಯರು ಈ ರೇಸ್‌ ನೋಡಲು ಬಂದಿದ್ದರು. ಅವರ ಎದುರು ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದರಿಂದ ಅತೀವ ಖುಷಿಯಾಗಿದೆ’ ಎಂದು ಹ್ಯಾಮಿಲ್ಟನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)