ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಪಂದ್ಯ: ಟಿಕೆಟ್‌ಗೆ ಭಾರಿ ಬೇಡಿಕೆ

ಆರ್‌ಸಿಬಿ–ಸನ್‌ರೈಸರ್ಸ್‌ ಹೈದರಾಬಾದ್ ನಡುವಣ ಪಂದ್ಯ ನಾಳೆ
Last Updated 15 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ತಂಡವು ಸೋಮವಾರ ರಾತ್ರಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದೇ ತಡ, ಬೆಂಗಳೂರಿನ ಕ್ರಿಕೆಟ್‌ಪ್ರೇಮಿಗಳು ನಿದ್ದೆ ಬಿಟ್ಟು ಎದ್ದಿದ್ದಾರೆ. ಮೇ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಎದುರಿನ ಪಂದ್ಯದ ಟಿಕೆಟ್‌ ಮತ್ತು ಪಾಸ್‌ಗಳನ್ನು ಪಡೆಯಲು ಎಡತಾಕುತ್ತಿದ್ದಾರೆ. ಕಾಳಸಂತೆಕೋರರು ದುಪಟ್ಟು ದುಡ್ಡು ಗಳಿಸುವ ಕನಸು ಕಾಣುತ್ತಿದ್ದಾರೆ.

ಈ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಕೊನೆಯ ಪಂದ್ಯ ಇದಾಗಿದೆ. ಕೊಹ್ಲಿ ಬಳಗವು ಕಳೆದ ಎರಡೂ ಪಂದ್ಯಗಳಲ್ಲಿ ಜಯಿಸಿದೆ. ಪ್ಲೇ ಆಫ್‌ ಹಂತಕ್ಕೆ ಸಾಗುವ ಅವಕಾಶ ಇನ್ನೂ ಜೀವಂತವಾಗಿರುವುದರಿಂದ ಈ ಪಂದ್ಯ ಬಹಳಷ್ಟು ಕುತೂಹಲ ಕೆರಳಿಸಿದೆ. ಅದರಿಂದಾಗಿ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ ಟಿಕೆಟ್‌ ಮಾರಾಟವಾಗುತ್ತಿರುವ ಟಿಕೆಟ್‌ಜೀನಿ ಡಾಟ್ ಕಾಮ್‌ ವೆಬ್‌ಸೈಟ್‌ನಲ್ಲಿ ಎಲ್ಲ ಟಿಕೆಟ್‌ಗಳೂ ಮಾರಾಟವಾಗಿವೆ. ಆರ್‌ಸಿಬಿ ಫ್ರ್ಯಾಂಚೈಸ್ ಕೂಡ ತನ್ನ ಪಾಲಿನ ಎಲ್ಲ ಟಿಕೆಟ್‌ಗಳನ್ನೂ ಬಿಕರಿ ಮಾಡಿದೆ. ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಟಿಕೆಟ್ ಮಾರಾಟ ಮಾಡುತ್ತಿಲ್ಲ. ವಿಐಪಿ, ವಿವಿಐಪಿ, ಕ್ಲಬ್ ಸದಸ್ಯರು ಮತ್ತು ಆಹ್ವಾನಿತರಿಗಾಗಿ ಉಚಿತ ಪಾಸ್‌ಗಳನ್ನು ಮಾತ್ರ ನೀಡಿದೆ.

‘ಈ ಸಲ ಎಲ್ಲ ಟಿಕೆಟ್‌ಗಳೂ ಆನ್‌ಲೈನ್‌ನಲ್ಲಿಯೇ ಮಾರಾಟವಾಗಿವೆ. ನಮ್ಮ ಸಂಸ್ಥೆಯಿಂದ ಮಾಡುತ್ತಿಲ್ಲ’ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಕಾಳಸಂತೆಕೋರರ ಹಾವಳಿ: ಹೋದ ತಿಂಗಳು ಇಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳ ಎದುರಿನ ಪಂದ್ಯಗಳ ವೇಳೆ ಟಿಕೆಟ್‌ಗಳು ಕಾಳಸಂತೆಯಲ್ಲಿ  ಮೂರ್ನಾಲ್ಕು ಪಟ್ಟು ಬೆಲೆಗೆ ಮಾರಾಟವಾಗಿದ್ದ ಆರೋಪಗಳು ಕೇಳಿಬಂದಿದ್ದವು.  ಪಂದ್ಯದ ಆರಂಭಕ್ಕೂ ಕೆಲವೇ ಹೊತ್ತಿನ ಮುನ್ನ ಈ ಚಟುವಟಿಕೆ ನಡೆದಿತ್ತು. ಈ ಬಾರಿಯೂ ಇದೇ ರೀತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘₹ 750, ₹ 1750 ಬೆಲೆಯ ಮುಖಬೆಲೆಯ ಟಿಕೆಟ್‌ಗಳು ನಾಲ್ಕು ಸಾವಿರ ರೂಪಾಯಿಗಳಿಗೆ ಮಾರಾಟವಾಗಿದ್ದವು. ಈ ಪಂದ್ಯದ ಸಂದರ್ಭದಲ್ಲಿಯೂ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜನರೂ ಕೂಡ ಇಂತಹ ಟಿಕೆಟ್‌ಗಳನ್ನು ಖರೀದಿಸಿ ಮೋಸ ಹೋಗಬಾರದು‘ ಎಂದು ಸಂಸ್ಥೆಯ ಸದಸ್ಯರೊಬ್ಬರು ಹೇಳಿದ್ದಾರೆ.

12 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತಂಡವು 5ರಲ್ಲಿ ಗೆದ್ದಿದೆ. 7ರಲ್ಲಿ ಸೋತಿದೆ. ಮೇ 19ರಂದು ತನ್ನ ಪಾಲಿನ ಕೊನೆ ಪಂದ್ಯವನ್ನು ಕೊಹ್ಲಿ ಬಳಗವು ಆಡಲಿದೆ. ಈ ಎರಡೂ ಪಂದ್ಯಗಳಲ್ಲಿ ಗೆದ್ದರೆ ಫ್ಲೇ ಆಫ್‌ ಹಂತಕ್ಕೆ ಪ್ರವೇಶಿಸುವ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT