ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಶೈಲಿ ಸಿಂಗ್‌ಗೆ ಲಾಂಗ್‌ ಜಂಪ್ ಬೆಳ್ಳಿ

20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಭಾರತಕ್ಕೆ ಮೂರನೇ ಪದಕ
Last Updated 22 ಆಗಸ್ಟ್ 2021, 16:39 IST
ಅಕ್ಷರ ಗಾತ್ರ

ನೈರೋಬಿ, ಕೆನ್ಯಾ (ಪಿಟಿಐ): ಭಾರತದ ಅಥ್ಲೀಟ್ ಶೈಲಿ ಸಿಂಗ್ ಅವರಿಗೆ ಭಾನುವಾರ ನಡೆದ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್‌ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಸುಮಾರು ಒಂದು ಸೆಂಟಿಮೀಟರ್ ಅಂತರದಲ್ಲಿ ಚಿನ್ನದ ಪದಕ ಕೈತಪ್ಪಪಿತು. ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು.

17 ವರ್ಷದ ಶೈಲಿ 6.59 ಮೀಟರ್ಸ್‌ ದೂರ ಜಿಗಿದು ಬೆಳ್ಳಿ ಗಳಿಸಿದರು. ಯುರೋಪಿಯನ್ ಜೂನಿಯರ್ ಚಾಂಪಿಯನ್‌ ಆಗಿರುವ ಸ್ವೀಡನ್‌ನ ಮಾಜಾ ಆಸ್ಕಾಗ್ 6.60 ಮೀಟರ್ ಜಿಗಿತದೊಂದಿಗೆ ಚಿನ್ನ ಗೆದ್ದರು. ಉಕ್ರೇನ್‌ನ ಮರಿಯಾ ಹಾರಿಲೊವಾ (6.50ಮೀ) ಕಂಚಿನ ಪದಕ ಪಡೆದರು.

ದಿಗ್ಗಜ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರ ಮಾರ್ಗದರ್ಶನ ಪಡೆಯುತ್ತಿರುವ ಶೈಲಿ ಸಿಂಗ್ ಮೂರನೇ ಸುತ್ತಿನ ಅಂತ್ಯದವರೆಗೂ ಮುನ್ನಡೆಯಲ್ಲಿದ್ದರು.ಶೈಲಿ ಮೊದಲ ಜಿಗಿತದಲ್ಲಿ 6.34 ಮೀಟರ್ಸ್‌ ಸಾಧನೆ ಮಾಡಿದರು. ಎರಡನೇ ಸುತ್ತಿನಲ್ಲಿ ಅದೇ ಅಂತರ ಕಾಪಾಡಿಕೊಂಡರು. ಮೂರನೇ ಸುತ್ತಿನಲ್ಲಿ 6.59 ಮೀ ಜಿಗಿದರು. ನಂತರದ ಎರಡು ಪ್ರಯತ್ನಗಳು ಫೌಲ್ ಆದವು.

ಆದರೆ ತಮ್ಮ ನಾಲ್ಕನೇ ಸುತ್ತಿನಲ್ಲಿ 18 ವರ್ಷದ ಮಾಜಾ ಚಿನ್ನದ ಜಿಗಿತ ಸಾಧಿಸಿದರು. ಅವರನ್ನು ಮೀರಿ ನಿಲ್ಲಲು ಶೈಲಿಗೆ ಸಾಧ್ಯವಾಗಲಿಲ್ಲ.

ಭಾರತ ತಂಡವು ಈ ಬಾರಿಯ ಕೂಟದಲ್ಲಿ ಒಟ್ಟು ಮೂರು ಪದಕಗಳನ್ನು ಜಯಿಸಿದ ದಾಖಲೆ ಮಾಡಿದೆ. ಈ ಕೂಟದ ಇತಿಹಾಸದಲ್ಲಿ ಭಾರತದ ಶ್ರೇಷ್ಠ ಸಾಧನೆ ಇದಾಗಿದೆ.

4X400 ಮೀಟರ್ಸ್‌ ಮಿಶ್ರ ರಿಲೆಯಲ್ಲಿ ಕಂಚು ಮತ್ತು ಪುರುಷರ 10 ಕಿ.ಮೀ ನಡಿಗೆಯಲ್ಲಿ ಅಮಿತ್ ಖತ್ರಿ ಬೆಳ್ಳಿ ಪದಕ ಜಯಿಸಿದ್ದಾರೆ.

2016ರಲ್ಲಿ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಮತ್ತು 2018ರಲ್ಲಿ ಓಟದಲ್ಲಿ ಹಿಮಾ ದಾಸ್ ಚಿನ್ನದ ಪದಕ ಜಯಿಸಿದ್ದರು.

ಅಮ್ಮನ ಶ್ರಮ; ಅಂಜು ಮಾರ್ಗದರ್ಶನ

ಮಧ್ಯಪ್ರದೇಶದ ಝಾನ್ಸಿಯಲ್ಲಿ ಜನಿಸಿದ ಶೈಲಿಗೆ ಅವರ ತಾಯಿಯೇ ಆಸರೆ. ಟೇಲರಿಂಗ್ ಕೆಲಸ ಮಾಡುತ್ತಿದ್ದ ಅವರ ತಾಯಿ ಮಗಳ ಕ್ರೀಡೆ ಮತ್ತು ವಿದ್ಯಾಭ್ಯಾಸಕ್ಕಾಗಿ ನೆರವಾಗಲು ಬಹಳಷ್ಟು ಶ್ರಮಿಸಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿದ ಹಿರಿಯ ಅಥ್ಲೀಟ್ ಅಂಜು ಅವರ ಪತಿ, ಕೋಚ್ ಭಾಬಿ ಜಾರ್ಜ್ ಅವರು ಬೆಂಗಳೂರಿನಲ್ಲಿರುವ ತಮ್ಮ ಅಕಾಡೆಮಿಗೆ ಸೇರ್ಪಡೆ ಮಾಡಿಕೊಂಡು ಮಾರ್ಗದರ್ಶನ ನೀಡಿದ್ದಾರೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಶೈಲಿ ಪ್ರಶಸ್ತಿ ಗೆದ್ದಿದ್ದರು. ಹೋದ ಜೂನ್‌ನಲ್ಲಿ ನಡೆದಿದ್ದ ಅಂತರರಾಜ್ಜ ಕೂಟದಲ್ಲಿ 6.48 ಮೀಟರ್ಸ್‌ ಜಿಗಿದು ಗಮನ ಸೆಳೆದಿದ್ದರು. ಸದ್ಯ 18 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್‌ ರ‍್ಯಾಂಕಿಂಗ್‌ನಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT