ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್ ಹಾಕಿ ಪ್ರೊ ಲೀಗ್‌: ಅರ್ಜೆಂಟೀನಾಗೆ ಹೊರಟ ಭಾರತ ಹಾಕಿ ತಂಡ

ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನ ಎರಡು ಪಂದ್ಯಗಳಲ್ಲೂ ಆಡಲಿರುವ ಮನ್‌ಪ್ರೀತ್ ಸಿಂಗ್ ಬಳಗ
Last Updated 31 ಮಾರ್ಚ್ 2021, 11:25 IST
ಅಕ್ಷರ ಗಾತ್ರ

ಬೆಂಗಳೂರು: ಯುರೋಪ್‌ ಪ್ರವಾಸದಲ್ಲಿ ಅಜೇಯ ಸಾಮರ್ಥ್ಯ ತೋರಿ ವಾಪಸಾಗಿರುವ ಭಾರತ ಹಾಕಿ ತಂಡ ಇದೀಗ ಅರ್ಜೆಂಟೀನಾದಲ್ಲಿ ವಿಜಯದುಂಧುಬಿ ಮೊಳಗಿಸುವ ಭರವಸೆಯೊಂದಿಗೆ ಅಲ್ಲಿಗೆ ಪ್ರವಾಸ ಕೈಗೊಂಡಿದೆ. ಮನ್‌ಪ್ರೀತ್ ಸಿಂಗ್ ನಾಯಕತ್ವದ ಬಳಗ ಬುಧವಾರ ಅರ್ಜೆಂಟೀನಾಗೆ ಹೊರಟಿದ್ದು ಒಲಿಂಪಿಕ್ಸ್ ಚಾಂಪಿಯನರ ವಿರುದ್ಧ ಆರು ಪಂದ್ಯಗಳ ಸರಣಿಯನ್ನು ಆಡಲಿದೆ.

22 ಸದಸ್ಯರ ತಂಡ ಬೆಂಗಳೂರಿನಿಂದ ಬ್ಯೂನಸ್ ಏರ್ಸ್‌ಗೆ ಸಾಗಿದ್ದು ಏಪ್ರಿಲ್ 11 ಮತ್ತು 12ರಂದು ಎಫ್‌ಐಎಚ್ ಹಾಕಿ ಪ್ರೊ ಲೀಗ್ ಪಂದ್ಯಗಳಲ್ಲಿ ಆಡಲಿದೆ. ಕೋವಿಡ್‌–19ರಿಂದಾಗಿ ಒಂದು ವರ್ಷ ಸ್ಪರ್ಧಾ ಕಣಕ್ಕೆ ಇಳಿಯದೇ ಇದ್ದ ಭಾರತ ತಂಡ ಇತ್ತೀಚೆಗೆ ಯುರೋಪ್ ಪ್ರವಾಸದಲ್ಲಿ ಜರ್ಮನಿ ಮತ್ತು ಬ್ರಿಟನ್ ಎದುರು ಸೆಣಸಿತ್ತು.

'ವರ್ಷದ ನಂತರ ಸ್ಪರ್ಧಾ ಕಣಕ್ಕೆ ಇಳಿಯುವುದು ಸವಾಲೇ ಸರಿ. ಆದರೆ ಕೋವಿಡ್‌ನಿಂದಾಗಿ ಪ್ರಪಂಚದ ಬಹುತೇಕ ಎಲ್ಲ ತಂಡಗಳಿಗೂ ಈ ಸ್ಥಿತಿ ಎದುರಾಗಿದೆ. ವೈಯಕ್ತಿಕ ಕಾರಣಗಳಿಂದ ಯುರೋಪ್ ಪ್ರವಾಸದ ವೇಳೆ ತಂಡದೊಂದಿಗೆ ಇರಲಿಲ್ಲ. ಆದರೂ ಅಲ್ಲಿ ನಡೆದ ಪಂದ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಜರ್ಮನಿ ಮತ್ತು ಬ್ರಿಟನ್ ಎದುರಿನ ಪಂದ್ಯಗಳಲ್ಲಿ ಭಾರತ ತಂಡ ಆಡಿದ ರೀತಿ ಖುಷಿ ನೀಡಿತು’ ಎಂದು ಹಾಕಿ ಇಂಡಿಯಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿಮನ್‌ಪ್ರೀತ್ ಸಿಂಗ್ ನುಡಿದಿದ್ದಾರೆ.

‘ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಅರ್ಜೆಂಟೀನಾ ಪ್ರವಾಸ ಮಹತ್ವದ್ದಾಗಿದ್ದು ಯುವ ಆಟಗಾರರಿಗೆ ಜಗತ್ತಿನ ಬಲಿಷ್ಠ ತಂಡಗಳಲ್ಲಿ ಒಂದರ ಎದುರು ಆಡಿದ ಅನುಭವ ಗಳಿಸಲು ನೆರವಾಗಲಿದೆ. ಸವಾಲಿನ ಈ ಸಂದರ್ಭದಲ್ಲಿ ಸಿಗುವ ಪ್ರತಿಯೊಂದು ಅವಕಾಶವೂ ನಮ್ಮ ಪಾಲಿಗೆ ವರ ಇದ್ದಂತೆ’ ಎಂದು ಮನದೀಪ್ ಹೇಳಿದ್ದಾರೆ.

ಜೂನಿಯರ್ ಹಾಕಿ ಟೂರ್ನಿ ಮುಂದಕ್ಕೆ

ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಮಹಿಳೆಯರ ರಾಷ್ಟ್ರೀಯ ಹಾಕಿ ಟೂರ್ನಿಯನ್ನು ಮುಂದೂಡಿರುವುದಾಗಿ ಹಾಕಿ ಇಂಡಿಯಾ ಬುಧವಾರ ತಿಳಿಸಿದೆ. ಏಪ್ರಿಲ್ ಮೂರರಿಂದ 12ರ ವರೆಗೆ ಜಾರ್ಖಂಡ್‌ನ ಸಿಮ್ದೇಗಾದಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿತ್ತು.

ಸಿಮ್ದೇಗಾ ನಗರದ ಆಯುಕ್ತ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಎಚ್ಚರಿಕೆಯನ್ನು ಪರಿಗಣಿಸಿದ ಟೂರ್ನಿಯನ್ನು ಮುಂದೂಡಲಾಗಿದ್ದು ಹೊಸ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಗ್ಯಾನೇಂದ್ರೊ ನಿಂಗೊಂಬಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತಿಥೇಯ ತಂಡ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಟೂರ್ನಿಯಲ್ಲಿ ಪಾಲ್ಗೊಳ್ಳಲು 26 ತಂಡಗಳು ಹೆಸರು ನೊಂದಾಯಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT