ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಜರ್ ಜನರಲ್‌ ವಿ.ಡಿ. ದೋಗ್ರಾಗೆ ‘ಐರನ್‌ಮ್ಯಾನ್’ ಪಟ್ಟ

ಈ ಸಾಧನೆ ಮಾಡಿದ ವಿಶ್ವದ ಮೊದಲ ಜನರಲ್
Last Updated 4 ಜುಲೈ 2018, 12:21 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರಿಯಾದಲ್ಲಿ ಜುಲೈ 1ರಂದು ನಡೆದ ‘ಐರನ್‌ಮ್ಯಾನ್‌’ ಕಠಿಣ ಟ್ರೈಯಾಥ್ಲಾನ್ (ಈಜು, ಸೈಕ್ಲಿಂಗ್ ಮತ್ತು ದೀರ್ಘ ದೂರದ ಓಟ ಒಳಗೊಂಡ ಸ್ಪರ್ಧೆ) ಸ್ಪರ್ಧೆಯಲ್ಲಿ ಭಾರತೀಯ ಸೇನೆಯ ಮೇಜರ್ ಜನರಲ್ ವಿ.ಡಿ. ದೋಗ್ರಾ ವಿಜಯ ಸಾಧಿಸಿದ್ದಾರೆ.

ಇದರೊಂದಿಗೆ, ‘ಐರನ್‌ಮ್ಯಾನ್’ ಟ್ರೈಯಾಥ್ಲಾನ್ ಪೂರೈಸಿದ ವಿಶ್ವದ ಮೊದಲ ಜನರಲ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಕರ್ತವ್ಯನಿರತ ಭಾರತೀಯ ಸೇನಾಧಿಕಾರಿಗಳ ಪೈಕಿಯೂ ಮೊದಲ ಬಾರಿ ಈ ಸಾಧನೆ ಮಾಡಿದ ಹೆಗ್ಗಳಿಕೆ ದೋಗ್ರಾ ಅವರದ್ದಾಗಿದೆ ಎಂದು ಸೇನೆ ತಿಳಿಸಿದೆ.

ಏನಿದು ‘ಐರನ್‌ಮ್ಯಾನ್’?: ಇದು ಅಂತರರಾಷ್ಟ್ರೀಯ ಮಟ್ಟದ ಈಜು, ಸೈಕ್ಲಿಂಗ್ ಮತ್ತು ದೀರ್ಘ ದೂರದ ಓಟ ಒಳಗೊಂಡ ಸ್ಪರ್ಧೆ. 3.8 ಕಿಲೋಮೀಟರ್ ಈಜು, 180 ಕಿಲೋಮೀಟರ್ ಸೈಕ್ಲಿಂಗ್ ಮತ್ತು 42.2 ಕಿಲೋಮೀಟರ್ ಓಟದ ಸ್ಪರ್ಧೆಯನ್ನು ಒಳಗೊಂಡಿದೆ. ಇದನ್ನು ವಿಶ್ವದಲ್ಲೇ ಅತಿ ಕಠಿಣ ‘ಒಂದು ದಿನದ ಕ್ರೀಡಾ ಸ್ಪರ್ಧೆ’ ಎಂದು ಪರಿಗಣಿಸಲಾಗಿದೆ. ಸ್ಪರ್ಧಾಳುಗಳು 17 ಗಂಟೆಗಳ ಅವಧಿಯೊಳಗೆ ನಿಗದಿತ ಸ್ಪರ್ಧೆಗಳನ್ನು ‍ಪೂರೈಸಬೇಕು.

ದೋಗ್ರಾ ಅವರು 14 ಗಂಟೆ 21 ನಿಮಿಷಗಳ ಅವಧಿಯಲ್ಲಿ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ಒಟ್ಟು 3,000 ಕ್ರೀಡಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ದೋಗ್ರಾ ಅವರೊಬ್ಬ ಕಟ್ಟಾ ಕ್ರೀಡಾಪಟು. ಐದು ವರ್ಷಗಳ ಹಿಂದೆಯೇ ಸೈಕ್ಲಿಂಗ್ ಆರಂಭಿಸಿದ್ದರು. ಲೇಹ್‌ನಿಂದ ಚಂಡೀಗಡದವರೆಗೆ ಸುಮಾರು 800 ಕಿಲೋಮೀಟರ್ ದೂರವನ್ನು 8 ದಿನಗಳಲ್ಲಿ ಸೈಕ್ಲಿಂಗ್ ಮೂಲಕ ಕ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ಒಂದು ವರ್ಷದಿಂದ ಅವರು ಕಚೇರಿ ವೇಳೆ ಮುಗಿದ ಬಳಿಕ ಮತ್ತು ವಾರಾಂತ್ಯಗಳಲ್ಲಿ ತರಬೇತಿ ಪಡೆಯುತ್ತಿದ್ದರು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ದೋಗ್ರಾ ಅವರು 1981ನೇ ಬ್ಯಾಚ್‌ನ ಚಿನ್ನದ ಪದಕ ವಿಜೇತ ಅಧಿಕಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT