ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಸುತ್ತಿನಲ್ಲಿ ಸೋತ ಸಮೀರ್‌

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣವ್‌–ಸಿಕ್ಕಿ ಶುಭಾರಂಭ
Last Updated 2 ಏಪ್ರಿಲ್ 2019, 19:14 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಪಿಟಿಐ): ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಸಮೀರ್‌ ವರ್ಮಾ, ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಸೋತಿದ್ದಾರೆ.

ಆ್ಯಕ್ಸಿಯಟಾ ಅರೇನಾದಲ್ಲಿ ಮಂಗಳವಾರ ನಡೆದ ಪೈಪೋಟಿಯಲ್ಲಿ ಸಮೀರ್‌ 20–22, 23–21, 12–21ರಲ್ಲಿ ಚೀನಾದ ಶಿ ಯೂಕಿ ಎದುರು ಮಣಿದರು. ಈ ಹೋರಾಟ 65 ನಿಮಿಷ ನಡೆಯಿತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಯೂಕಿ ಎದುರು 24 ವರ್ಷದ ಸಮೀರ್‌ ದಿಟ್ಟ ಆಟ ಆಡಿ ಸೋಲಿನ ನಡುವೆಯೂ ಗಮನ ಸೆಳೆದರು.

ಮೊದಲ ಗೇಮ್‌ನ ಶುರುವಿನಿಂದಲೇ ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿಗೆ ಮುಂದಾದರು. ಹೀಗಾಗಿ 8–8 ಸಮಬಲ ಕಂಡುಬಂತು. ನಂತರ ಯೂಕಿ ಮೇಲುಗೈ ಸಾಧಿಸಿದರು. ಚುರುಕಿನ ಸರ್ವ್‌ ಮತ್ತು ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿ 16–11ರ ಮುನ್ನಡೆ ಪಡೆದರು. ಹೀಗಿದ್ದರೂ ಸಮೀರ್‌ ವಿಶ್ವಾಸ ಕಳೆದುಕೊಳ್ಳಲಿಲ್ಲ. ಕೆಚ್ಚೆದೆಯಿಂದ ಹೋರಾಡಿದ ಅವರು 20–20ರಲ್ಲಿ ಸಮಬಲ ಸಾಧಿಸಿದರು. ರೋಚಕ ಘಟ್ಟದಲ್ಲಿ ಸತತ ಎರಡು ಪಾಯಿಂಟ್ಸ್‌ ಗಳಿಸಿದ ಯೂಕಿ ಸಂಭ್ರಮಿಸಿದರು.

ಎರಡನೇ ಗೇಮ್‌ನಲ್ಲೂ ಸಮೀರ್‌ 11–16ರಿಂದ ಹಿಂದಿದ್ದರು. ಬಳಿಕ ಪುಟಿದೆದ್ದ ಭಾರತದ ಆಟಗಾರ 20–20ರಿಂದ ಸಮಬಲ ಮಾಡಿಕೊಂಡರು. ನಂತರವೂ ಗುಣಮಟ್ಟದ ಆಟ ಆಡಿ ಜಯದ ತೋರಣ ಕಟ್ಟಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನ ಆರಂಭದಿಂದಲೇ ಯೂಕಿ ಪರಿಣಾಮಕಾರಿ ಆಟ ಆಡಿ 9–0 ಮುನ್ನಡೆ ಪಡೆದರು. ನಂತರವೂ ಮಿಂಚಿದ ಅವರು ಸುಲಭವಾಗಿ ಪಂದ್ಯ ಜಯಿಸಿದರು.

ಪ್ರಣವ್‌–ಸಿಕ್ಕಿ ಶುಭಾರಂಭ: ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಶುಭಾರಂಭ ಮಾಡಿದರು.

ಮೊದಲ ಸುತ್ತಿನಲ್ಲಿ ಭಾರತದ ಜೋಡಿ 22–20, 24–22ರಲ್ಲಿ ಐರ್ಲೆಂಡ್‌ನ ಸ್ಯಾಮ್‌ ಮಗೀ ಮತ್ತು ಕ್ಲೋಯ್‌ ಮಗೀ ಅವರನ್ನು ಸೋಲಿಸಿತು.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ನಿರಾಸೆ ಕಂಡರು.

ಆರಂಭಿಕ ಸುತ್ತಿನಲ್ಲಿ ಅಶ್ವಿನಿ ಮತ್ತು ಸಿಕ್ಕಿ 20–22, 21–17, 20–22ರಲ್ಲಿ ದಕ್ಷಿಣ ಕೊರಿಯಾದ ಬಯೆಕ್‌ ಹಾ ನಾ ಮತ್ತು ಕಿಮ್‌ ಹೈ ರಿನ್‌ ವಿರುದ್ಧ ಪರಾಭವಗೊಂಡರು.

ಬುಧವಾರ ನಡೆಯುವ ಪಂದ್ಯಗಳಲ್ಲಿ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT