ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಕ್ವಾರ್ಟರ್‌ಗೆ ಸೈನಾ, ಶ್ರೀಕಾಂತ್‌

ಅಶ್ವಿನಿ–ಸಿಕ್ಕಿ ಜೋಡಿಗೆ ನಿರಾಸೆ
Last Updated 17 ಜನವರಿ 2019, 15:39 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಭಾರತದ ಭರವಸೆಯ ಸ್ಪರ್ಧಿಗಳಾಗಿರುವ ಸೈನಾ ನೆಹ್ವಾಲ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸೈನಾ 21–14, 21–16 ನೇರ ಗೇಮ್‌ಗಳಿಂದ ಹಾಂಕಾಂಗ್‌ನ ಪುಯಿ ಯಿನ್‌ ಯಿಪ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 39 ನಿಮಿಷ ನಡೆಯಿತು.

ಮುಂದಿನ ಸುತ್ತಿನಲ್ಲಿ ಸೈನಾ, ಜಪಾನ್‌ನ ನೊಜೊಮಿ ಒಕುಹರಾ ಎದುರು ಆಡಲಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಸೈನಾ, ಒಕುಹರಾ ವಿರುದ್ಧ 8–4 ಗೆಲುವಿನ ದಾಖಲೆ ಹೊಂದಿದ್ದಾರೆ.

ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಹೊಂದಿರುವ ಸೈನಾ, ಮೊದಲ ಗೇಮ್‌ನ ಆರಂಭದಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ನಂತರ ಭಾರತದ ಆಟಗಾರ್ತಿ ದಿಟ್ಟ ಆಟ ಆಡಿದರು. ದ್ವಿತೀಯಾರ್ಧದಲ್ಲಿ ಸತತವಾಗಿ ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ಎರಡನೇ ಗೇಮ್‌ನಲ್ಲೂ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 16–16 ಸಮಬಲ ಕಂಡುಬಂತು. ನಂತರ ಸೈನಾ ಚುರುಕಿನ ಡ್ರಾಪ್‌ ಮತ್ತು ಆಕರ್ಷಕ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳನ್ನು ಸಿಡಿಸಿ ಎದುರಾಳಿಯನ್ನು ಕಂಗೆಡಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಶ್ರೀಕಾಂತ್‌ 23–21, 8–21, 21–18ರಲ್ಲಿ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಎದುರು ಗೆದ್ದರು.

ಎಂಟರ ಘಟ್ಟದ ಪೈಪೋಟಿಯಲ್ಲಿ ಶ್ರೀಕಾಂತ್‌, ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ ವಿರುದ್ಧ ಆಡಲಿದ್ದಾರೆ. ಸನ್‌, ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಭಾರತದ ಆಟಗಾರನಿಗೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.

ಎರಡನೇ ಸುತ್ತಿನ ಪೈಪೋಟಿಯಲ್ಲಿ ಶ್ರೀಕಾಂತ್‌ ಮತ್ತು ವಿನ್ಸೆಂಟ್‌ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಹೀಗಾಗಿ ಆಟ ರೋಚಕತೆಯೊಂದಿಗೆ ಸಾಗಿತ್ತು. ಉಭಯ ಆಟಗಾರರು 21–21ರಿಂದ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಒತ್ತಡ ಮೀರಿನಿಂತು ಆಡಿದ ಶ್ರೀಕಾಂತ್ ಸತತ ಎರಡು ಪಾಯಿಂಟ್ಸ್‌ ಗಳಿಸಿ ಸಂಭ್ರಮಿಸಿದರು.

ಎರಡನೇ ಗೇಮ್‌ನಲ್ಲಿ ವಿನ್ಸೆಂಟ್‌, ತಿರುಗೇಟು ನೀಡಿ 1–1ರಿಂದ ಸಮಬಲ ಸಾಧಿಸಿದರು. ಮೂರನೇ ಗೇಮ್‌ನಲ್ಲಿ ಶ್ರೀಕಾಂತ್‌ ಮಿಂಚಿನ ಆಟ ಆಡಿ ಗೆಲುವು ಒಲಿಸಿಕೊಂಡರು.

ಇನ್ನೊಂದು ಪಂದ್ಯದಲ್ಲಿ ಸೈನಾ ಅವರ ಪತಿ, ಪರುಪಳ್ಳಿ ಕಶ್ಯಪ್‌ 17–21, 23–25ರಲ್ಲಿ ಇಂಡೊನೇಷ್ಯಾದ ಅಂಥೋಣಿ ಸಿನಿಸುಕಾ ಎದುರು ಸೋತರು.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಕರ್ನಾಟಕದ ಅಶ್ವಿನಿ ‍ಪೊನ್ನಪ್ಪ ಮತ್ತು ಹೈದರಾಬಾದ್‌ನ ಎನ್‌.ಸಿಕ್ಕಿ ರೆಡ್ಡಿ 18–21, 17–21ರಲ್ಲಿ ಇಂಡೊನೇಷ್ಯಾದ ನಿ ಕೆಟುಟ್‌ ಮಹಾದೇವಿ ಮತ್ತು ರಿಜಕಿ ಅಮೆಲಿಯಾ ಪ್ರದಿಪ್ತಾ ಎದುರು ನಿರಾಸೆ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT