ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸೆಮಿಗೆ ಲಗ್ಗೆ ಇಟ್ಟ ಸೈನಾ ನೆಹ್ವಾಲ್

ಎಂಟರ ಘಟ್ಟದಲ್ಲಿ ಎಡವಿದ ಕಿದಂಬಿ ಶ್ರೀಕಾಂತ್‌
Last Updated 18 ಜನವರಿ 2019, 16:03 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಬಲಿಷ್ಠ ಆಟಗಾರ್ತಿಯ ಎದುರು ದಿಟ್ಟ ಆಟ ಆಡಿದ ಸೈನಾ ನೆಹ್ವಾಲ್‌, ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಕಿದಂಬಿ ಶ್ರೀಕಾಂತ್‌ ಎಂಟರ ಘಟ್ಟದಲ್ಲಿ ಎಡವಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಸೈನಾ 21–18, 23–21ರಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿ ನೊಜೊಮಿ ಒಕುಹರಾ ಅವರನ್ನು ಪರಾಭವಗೊಳಿಸಿದರು. ಈ ಗೆಲುವಿನೊಂದಿಗೆ ಸೈನಾ, ಜಪಾನ್‌ನ ಒಕುಹರಾ ಎದುರಿನ ಗೆಲುವಿನ ದಾಖಲೆಯನ್ನು 9–4ಕ್ಕೆ ಹೆಚ್ಚಿಸಿಕೊಂಡರು.

ಶನಿವಾರ ನಡೆಯುವ ನಾಲ್ಕರ ಘಟ್ಟದ ಪೈಪೋಟಿಯಲ್ಲಿ 28 ವರ್ಷ ವಯಸ್ಸಿನ ಸೈನಾ, ಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ಎದುರು ಸೆಣಸಲಿದ್ದಾರೆ.

ಸೈನಾ ಮತ್ತು ಒಕುಹರಾ ನಡುವಣ ಪೈಪೋಟಿ ಆರಂಭದಿಂದಲೇ ರಂಗೇರಿತು. ಇಬ್ಬರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರಿಂದ 9–9 ಸಮಬಲ ಕಂಡುಬಂತು. ಈ ಹಂತದಲ್ಲಿ ಮಿಂಚಿದ ಜಪಾನ್‌ನ ಆಟಗಾರ್ತಿ ಸತತ ಆರು ಪಾಯಿಂಟ್ಸ್‌ ಗಳಿಸಿ 15–9ರ ಮುನ್ನಡೆ ಪಡೆದರು. ಇದರಿಂದ ಭಾರತದ ಆಟಗಾರ್ತಿ ಎದೆಗುಂದಲಿಲ್ಲ. ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾಪ್ ಮಾಡುವ ತಂತ್ರ ಅನುಸರಿಸಿದ ಅವರು ನಿರಂತರವಾಗಿ ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡು 17–16ರ ಮುನ್ನಡೆ ಗಳಿಸಿದರು. ಬಳಿಕ 17–17 ಸಮಬಲ ಕಂಡುಬಂತು. ಈ ಹಂತದಲ್ಲಿ ಆಕ್ರಮಣಕಾರಿ ಆಟ ಆಡಿದ ಸೈನಾ ಗೆಲುವಿನ ತೋರಣ ಕಟ್ಟಿದರು.

ಎರಡನೇ ಗೇಮ್‌ನ ಆರಂಭದಲ್ಲಿ ಭಾರತದ ಆಟಗಾರ್ತಿ 4–2ರಿಂದ ಮುಂದಿದ್ದರು. ಬಳಿಕ ಒಕುಹರಾ 8–5ರಿಂದ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದ ಸೈನಾ 11–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಜಪಾನ್‌ನ ಆಟಗಾರ್ತಿ ಸತತ ಆರು ಪಾಯಿಂಟ್ಸ್‌ ಸಂಗ್ರಹಿಸಿ 18–14ರ ಮುನ್ನಡೆ ಗಳಿಸಿದರು. ನಂತರ 19–19, 21–21ರ ಸಮಬಲ ಕಂಡುಬಂತು. ಈ ಹಂತದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಸೈನಾ ಸತತ ಎರಡು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡು ಖುಷಿಯ ಕಡಲಲ್ಲಿ ತೇಲಿದರು.

ಶ್ರೀಕಾಂತ್‌ಗೆ ನಿರಾಸೆ: ಶ್ರೀಕಾಂತ್‌ 23–21, 16–21, 17–21ರಿಂದ ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ ಎದುರು ಮಣಿದರು.

ತುರುಸಿನ ಪೈಪೋಟಿ ಕಂಡುಬಂದ ಮೊದಲ ಗೇಮ್‌ನಲ್ಲಿ ಶ್ರೀಕಾಂತ್‌ ಗೆದ್ದರು. ಆದರೆ ನಂತರದ ಎರಡು ಗೇಮ್‌ಗಳಲ್ಲಿ ಭಾರತದ ಆಟಗಾರ, ಎದುರಾಳಿಯ ಅಬ್ಬರಕ್ಕೆ ಬೆದರಿದರು. ಸನ್‌ ವಾನ್‌ ಅವರ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳಿಗೆ ನಿರುತ್ತರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT