ಮಂಗಳವಾರ, ಜೂನ್ 22, 2021
28 °C
ನಾಳೆ ಸೈನಾ, ಸಿಂಧು ಕಣಕ್ಕೆ

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಮೊದಲ ದಿನ ಭಾರತಕ್ಕೆ ನಿರಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಭಾರತದ ಸ್ಪರ್ಧಿಗಳು ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ದಿನವಾದ ಮಂಗಳವಾರ ನಿರಾಸೆ ಕಂಡಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಮೊದಲ ಸುತ್ತಿನಲ್ಲೇ ಆಘಾತ ಕಂಡಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಸಾತ್ವಿಕ್‌ ಮತ್ತು ಚಿರಾಗ್‌ 15–21, 21–18, 15–21ರಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 19ನೇ ಸ್ಥಾನ ಹೊಂದಿರುವ ಒಂಗ್ ಯೀವ್‌ ಸಿನ್‌ ಮತ್ತು ಟಿಯೊ ಯೀ ಎದುರು ಪರಾಭವಗೊಂಡರು. ಈ ಹೋರಾಟ 52 ನಿಮಿಷ ನಡೆಯಿತು.

ಮೊದಲ ಗೇಮ್‌ನಲ್ಲೇ ಮುಗ್ಗರಿಸಿದ್ದ ಭಾರತದ ಜೋಡಿ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿ 1–1 ಸಮಬಲ ಸಾಧಿಸಿತು. ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಮಲೇಷ್ಯಾದ ಒಂಗ್ ಮತ್ತು ಟಿಯೊ ಗುಣಮಟ್ಟದ ಆಟ ಆಡಿ ಪಂದ್ಯ ಜಯಿಸಿದರು.

ಲಕ್ಷ್ಯಗೆ ನಿರಾಸೆ: ಪುರುಷರ ಸಿಂಗಲ್ಸ್‌ನಲ್ಲಿ ಎಲ್ಲರ ಆಕರ್ಷಣೆಯಾಗಿದ್ದ ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್‌, ಮುಖ್ಯ ಸುತ್ತು ಪ್ರವೇಶಿಸಲು ವಿಫಲರಾದರು.

ಅರ್ಹತಾ ಹಂತದ ಹಣಾಹಣಿಯಲ್ಲಿ ಲಕ್ಷ್ಯ 21–11, 18–21, 14–21ರಲ್ಲಿ ಡೆನ್ಮಾರ್ಕ್‌ನ ಹಾನ್ಸ್‌ ಕ್ರಿಸ್ಟಿಯನ್‌ ವಿಟ್ಟಿಂಗಸ್‌ ಎದುರು ಮಣಿದರು. ಈ ಹಣಾಹಣಿ 49 ನಿಮಿಷ ನಡೆಯಿತು.

ಮೊದಲ ಗೇಮ್‌ನಲ್ಲಿ ಗೆದ್ದ ಲಕ್ಷ್ಯ, ನಂತರದ ಎರಡು ಗೇಮ್‌ಗಳಲ್ಲಿ ಎದುರಾಳಿಯ ಸವಾಲು ಮೀರಿ ನಿಲ್ಲಲು ವಿಫಲರಾದರು.

ಶುಭಾಂಕರ್‌ ಡೇ ಕೂಡ ಅರ್ಹತಾ ಹಂತದಲ್ಲೇ ಹೊರಬಿದ್ದರು. ಮೊದಲ ಸುತ್ತಿನಲ್ಲಿ ಶುಭಾಂಕರ್‌ 15–21, 15–21ರಲ್ಲಿ ಮಲೇಷ್ಯಾದ ಲೀವ್‌ ಡರೆನ್‌ ಎದುರು ಪರಾಭವಗೊಂಡರು.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಪೂಜಾ ದಂಡು ಮತ್ತು ಸಂಜನಾ ಸಂತೋಷ್‌ ಅವರೂ ಅರ್ಹತಾ ಸುತ್ತಿನಲ್ಲೇ ಸೋತರು.

ಭಾರತದ ಜೋಡಿ 15–21, 10–21ರಲ್ಲಿ ಇಂಡೊನೇಷ್ಯಾದ ಸಿತಿ ಫಾಡಿಯಾ ಸಿಲ್ವಾ ಮತ್ತು ರಿಬ್ಕಾ ಸುಗಿಯಾರ್ಟೊ ಎದುರು ಶರಣಾಯಿತು.

ಬುಧವಾರ ನಡೆಯುವ ಸಿಂಗಲ್ಸ್‌ ವಿಭಾಗದ ಹೋರಾಟಗಳಲ್ಲಿ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌, ಸಮೀರ್‌ ವರ್ಮಾ, ಪರುಪಳ್ಳಿ ಕಶ್ಯಪ್‌, ಬಿ.ಸಾಯಿ ಪ್ರಣೀತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಕಣಕ್ಕಿಳಿಯಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು