ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ ವಾನ್‌, ಇಂಟನಾನ್‌ಗೆ ಚಿನ್ನ

ಮಲೇಷ್ಯಾ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಮರಿನ್‌, ಚೆನ್‌ ಲಾಂಗ್‌ಗೆ ನಿರಾಸೆ
Last Updated 20 ಜನವರಿ 2019, 20:00 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ವಿಶ್ವ ರ‍್ಯಾಂಕಿಂಗ್‌ನಲ್ಲಿ ತನಗಿಂತ ಮೇಲಿನ ಸ್ಥಾನ ಹೊಂದಿರುವ ಆಟಗಾರನ ವಿರುದ್ಧ ಮಿಂಚಿನ ಸಾಮರ್ಥ್ಯ ತೋರಿದ ಸನ್‌ ವಾನ್‌ ಹೊ, ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾದ ಸನ್‌ ವಾನ್‌ 21–17, 21–19 ನೇರ ಗೇಮ್‌ಗಳಿಂದ ಚೀನಾದ ಚೆನ್‌ ಲಾಂಗ್‌ಗೆ ಆಘಾತ ನೀಡಿದರು.

ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಲ್ಲಿರುವ ಸನ್ ವಾನ್‌, ಮೊದಲ ಗೇಮ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆಕರ್ಷಕ ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಹೊಂದಿರುವ ಚೆನ್‌, ಎರಡನೇ ಗೇಮ್‌ನ ಶುರುವಿನಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿ ಮುನ್ನಡೆ ಗಳಿಸಿದರು. ಇದರಿಂದ ವಿಶ್ವಾಸ ಕಳೆದುಕೊಳ್ಳದ ಸನ್‌ ವಾನ್‌, ದ್ವಿತೀಯಾರ್ಧದಲ್ಲಿ ಚುರುಕಿನ ಸರ್ವ್‌ ಮತ್ತು ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿ ಗೆಲುವಿನ ತೋರಣ ಕಟ್ಟಿದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಥಾಯ್ಲೆಂಡ್‌ನ ರಚಾನೊಕ್‌ ಇಂಟಾನನ್‌ 21–9, 22–20ರಲ್ಲಿ ಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ಅವರನ್ನು ಮಣಿಸಿದರು.

ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದ ಮರಿನ್‌, ಮೊದಲ ಗೇಮ್‌ನಲ್ಲಿ ಆರನೇ ಶ್ರೇಯಾಂಕದ ಇಂಟಾನನ್‌ ಎದುರು ಸುಲಭವಾಗಿ ಮಣಿದರು. ಜಿದ್ದಾಜಿದ್ದಿನ ಹೋರಾಟ ಕಂಡುಬಂದ ಎರಡನೇ ಗೇಮ್‌ನಲ್ಲಿ ಇಬ್ಬರೂ 20–20ರಿಂದ ಸಮಬಲ ಮಾಡಿಕೊಂಡರು. ನಂತರ ರಚಾನೊಕ್‌ ಮಿಂಚಿದರು.

ಪುರುಷರ ಡಬಲ್ಸ್‌ ವಿಭಾಗದ ಚಿನ್ನದ ಪದಕ ಇಂಡೊನೇಷ್ಯಾದ ಮಾರ್ಕಸ್‌ ಫರ್ನಾಲ್ಡಿ ಗಿಡೊನ್‌ ಮತ್ತು ಕೆವಿನ್‌ ಸಂಜಯ ಸುಕಮುಲ್ಜೊ ಅವರ ಪಾಲಾಯಿತು.

ಫೈನಲ್‌ನಲ್ಲಿ ಮಾರ್ಕಸ್‌ ಮತ್ತು ಕೆವಿನ್‌ 21–15, 21–16ರಲ್ಲಿ ಮಲೇಷ್ಯಾದ ಒಂಗ್‌ ಯೀವ್‌ ಸಿನ್‌ ಮತ್ತು ಟಿಯೊ ಯೀ ಯಿನ್‌ ಅವರನ್ನು ಮಣಿಸಿದರು.

ಮಹಿಳೆಯರ ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಜಪಾನ್‌ನ ಯೂಕಿ ಫುಕುಶಿಮಾ ಮತ್ತು ಸಯಾಕ ಹಿರೋಟಾ 18–21, 21–16, 21–16ರಲ್ಲಿ ಇಂಡೊನೇಷ್ಯಾದ ಗ್ರೇಸಿಯಾ ಪೊಲೀ ಮತ್ತು ಅಪ್ರಿಯಾನಿ ರಹಾಯು ಎದುರು ಗೆದ್ದರು.

ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಯೂಟಾ ವತಾನಬೆ ಮತ್ತು ಅರಿಸಾ ಹಿಗಾಶಿನೊ 21–18, 21–18ರಲ್ಲಿ ದೆಚಾಪೊಲ್‌ ಪುವರಾನುಕ್ರೋಹ್‌ ಮತ್ತು ಸಪ್ಸಿರೀ ತಯೆರಾಟನಚೈ ಅವರನ್ನು ಪರಾಭವಗೊಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT