ಭಾನುವಾರ, ಆಗಸ್ಟ್ 14, 2022
20 °C
ಕಶ್ಯಪ್‌ಗೆ ನಿರಾಸೆ

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಸಿಂಧು, ಪ್ರಣಯ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.‌ಪ್ರಣಯ್‌ ಅವರು ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಸಿಂಧು 19-21 21-9 21-14 ರಲ್ಲಿ ಥಾಯ್ಲೆಂಡ್‌ನ ಫಿತಯಪರ್ನ್ ಚಾಯ್ವಾನ್‌ ಅವರನ್ನು ಮಣಿಸಿದರು. ಮೊದಲ ಗೇಮ್‌ ಸೋತ ಸಿಂಧು, ಮರುಹೋರಾಟ ನಡೆಸಿ 57 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಸಿಂಧು, ಎಂಟರಘಟ್ಟದ ಹಣಾಹಣಿಯಲ್ಲಿ ಚೀನಾ ತೈಪೆಯ ತಾಯ್ ಜು ಯಿಂಗ್‌ ಅವರನ್ನು ಎದುರಿಸುವರು.

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಆಕರ್ಷಕ ಆಟ ಪ್ರದರ್ಶಿಸಿದರ ಪ್ರಣಯ್ 21-15 21-7 ರಲ್ಲಿ ಚೀನಾ ತೈಪೆಯ ಚೌ ತಿಯೆನ್ ಚೆನ್‌ ವಿರುದ್ಧ ಗೆದ್ದರು.

ವಿಶ್ವ ರ‍‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಎದುರಾಳಿಯನ್ನು ಸ್ಮ್ಯಾಷ್‌ಗಳು ಮತ್ತು ಡ್ರಾಪ್‌ ಶಾಟ್‌ಗಳ ಮೂಲಕ ಕಂಗೆಡಿಸಿದ ಪ್ರಣಯ್, 35 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಚೆನ್‌ ಎದುರಿನ ಆರು ಹಣಾಹಣಿಗಳಲ್ಲಿ ಪ್ರಣಯ್‌ಗೆ ದೊರೆತ ಎರಡನೇ ಜಯ ಇದು. ಮುಂದಿನ ಪಂದ್ಯದಲ್ಲಿ ಅವರು ಇಂಡೊನೇಷ್ಯದ ಜೊನಾಥನ್ ಕ್ರಿಸ್ಟಿ ಜತೆ ಪೈಪೋಟಿ ನಡೆಸುವರು.

ಕಶ್ಯಪ್‌ ಪರಾಭವ: ಪಿ.ಕಶ್ಯಪ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿದರು.

ಥಾಯ್ಲೆಂಡ್‌ನ ವಿತಿಸರನ್ ಕುನ್ಲಾವತ್ 21–19, 21–10 ರಲ್ಲಿ ಭಾರತದ ಆಟಗಾರನಿಗೆ ಆಘಾತ ನೀಡಿದರು. ಈ ಪಂದ್ಯ 44 ನಿಮಿಷಗಳಲ್ಲಿ ಕೊನೆಗೊಂಡಿತು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್‌ ಶೆಟ್ಟಿ ಅವರು ಅವರು ಮಲೇಷ್ಯಾದ ಫೆಯಿ ಸಿ ಗೊ ಮತ್ತು ನೂರ್‌ ಇಜ್ಜುದ್ದೀನ್ ಜತೆ ಆಡಬೇಕಿತ್ತು. ಆದರೆ ಹೊಟ್ಟೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಸಾತ್ವಿಕ್‌, ಪೂರ್ಣ ಫಿಟ್‌ನೆಸ್‌ ಪಡೆಯದ ಕಾರಣ ಭಾರತದ ಜೋಡಿ ಹಿಂದೆ ಸರಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು