ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ವಂಚಿತರಿಗೆ ವಿಶೇಷ ಸೌಲಭ್ಯ

ಮಂಗಳೂರು ವಿಶ್ವವಿದ್ಯಾಲಯದ ಪ್ರಸ್ತಾವಕ್ಕೆ ರಾಜ್ಯಪಾಲರ ಅಂಕಿತ
Last Updated 19 ಮಾರ್ಚ್ 2019, 19:58 IST
ಅಕ್ಷರ ಗಾತ್ರ

ಮಂಗಳೂರು: ಈ ಶೈಕ್ಷಣಿಕ ವರ್ಷ ದಿಂದಲೇ ಪರೀಕ್ಷೆ ವಂಚಿತ ಕ್ರೀಡೆ, ಎನ್‌ಎಸ್‌ಎಸ್‌, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸುವ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ಬರೆಯವ ಭಾಗ್ಯ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಿಕ್ಕಿದೆ.

ಅಂತರ ವಿವಿ ವಿಭಾಗ ಮಟ್ಟ, ರಾಷ್ಟ್ರ ಹಾಗೂ ಅಂತರ ರಾಷ್ಟ್ರ ಮಟ್ಟದಲ್ಲಿ ವಿಶ್ವವಿದ್ಯಾಲಯ ಪ್ರತಿನಿಧಿಸುವ ಸ್ನಾತ ಕೋತ್ತರ, ಪದವಿ, ಪಿಜಿ ಡಿಪ್ಲೊಮಾ, ಡಿಪ್ಲೊಮಾ, ಸೆಮಿಸ್ಟರ್‌ ಹಂತದ ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ ವೇಳೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪರೀಕ್ಷೆ ಬರೆಯಲು ಆಗದೇ ಇರುವಂತವರಿಗೆ ಮತ್ತೆ ‘ವಿಶೇಷ ಪರೀಕ್ಷೆ’ ನಡೆಸುವ ಮೂಲಕ ಅವಕಾಶ ಕಲ್ಪಿಸಬೇಕು ಎನ್ನುವ ವಿಶ್ವವಿದ್ಯಾಲಯದ ಪ್ರಸ್ತಾವಕ್ಕೆ ರಾಜ್ಯಪಾಲರು ಮುದ್ರೆ ಒತ್ತಿದ್ದಾರೆ.

ವಿಶಿಷ್ಟ ನೀತಿಗಳ ಮೂಲಕ ಸದಾ ಮುಂಚೂಣಿಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯವು ಈ ಹಿಂದೇ ಕೂಡಾ ಕ್ರೀಡಾ ನೀತಿ ಜಾರಿಗೆ ತರುವ ಮೂಲಕ ರಾಜ್ಯದಲ್ಲಿ ಸುದ್ದಿ ಮಾಡಿತ್ತು. ಈಗ ಮತ್ತೆ ಸುದ್ದಿಯಲ್ಲಿ ಇದೆ. ಈ ಹಿಂದೆ ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ ವೇಳೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಿಕೊಳ್ಳುತ್ತಿದ್ದರು. ಪರಿಣಾಮ ಶೈಕ್ಷಣಿಕವಾಗಿ ಹಿನ್ನಡೆ ಉಂಟಾಗುತ್ತಿತ್ತು. ಈ ಕಾರಣಕ್ಕೆ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗವು ಪರೀಕ್ಷೆಯಿಂದ ವಂಚಿತವಾಗುವ ವಿದ್ಯಾರ್ಥಿಗಳಿಗೆ ಪುನರ್‌ ಪರೀಕ್ಷೆ ಬರೆಯುವ ವಿಶೇಷ ಅವಕಾಶ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಈ ಆದೇಶದಿಂದ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 90 ರಿಂದ 100 ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಜತೆಗೆ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕೂಡಾ ಈ ಲಾಭ ಪಡೆಯಲಿದ್ದಾರೆ. ಈ ಆದೇಶಕ್ಕೂ ಮೊದಲು ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿಗಳಿಗೆ ಇದರ ಲಾಭ ಸಿಗದೇ ಇರುವುದು ಬೇಸರ ಮೂಡಿಸಿದೆ.

ವಿಶ್ವವಿದ್ಯಾಲಯ ವ್ಯಾಪ್ತಿ 210 ಕಾಲೇಜು ಹಾಗೂ 5 ಸ್ವಾಯತ್ತೆ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ಈ ಆದೇಶ ಅನ್ವಯವಾಗಲಿದೆ. ವಿಶ್ವವಿದ್ಯಾಲಯಕ್ಕೆ ಹೆಸರು ತಂದು ಕೊಡುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವುದನ್ನು ತಪ್ಪಿಸಲು ವಿವಿ ದೈಹಿಕ ಶಿಕ್ಷಣ ವಿಭಾಗವು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಹಾಗೂ ಕೌನ್ಸಿಲ್‌ ಸಭೆಗೆ ವಿಶೇಷ ಪರೀಕ್ಷೆ ಬರೆಯುವ ಪ್ರಸ್ತಾವ ಸಲ್ಲಿಸಿತ್ತು. ವಿಶ್ವವಿದ್ಯಾಲಯ ಸಲ್ಲಿಸಿದ್ದ ಪ್ರಸ್ತಾವಕ್ಕೆ ಫಲ ಸಿಕ್ಕಿದೆ ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್‌ ಕುಮಾರ್‌ ತಿಳಿಸಿದರು.

ಕ್ರೀಡೆಗೆ ಅವಕಾಶ ನೀಡುವುದರ ಜತೆಗೆ, ರಾಷ್ಟ್ರ ಅಂತರರಾಷ್ಟ್ರ ಮಟ್ಟದಲ್ಲಿ ವಿವಿ ಪ್ರತಿನಿಧಿಸುವ ಕಲೆ, ಸಂಸ್ಕೃತಿ, ಎನ್‌ಎಸ್‌ಎಸ್‌, ಎನ್‌ಸಿಸಿ, ಸ್ಕೌಡ್ಸ್‌, ಗೈಡ್ಸ್‌ ವಿದ್ಯಾರ್ಥಿಗಳಿಗೂ ಈ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಈ ವಿಭಾಗದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೂ ಕೂಡಾ ಸೇರ್ಪಡೆಗೆ ವಿಶೇಷ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವ ಪ್ರೊ. ಎ. ಎಂ ಖಾನ್‌ ತಿಳಿಸಿದರು.

ಪ್ರತಿಭಾವಂತರಿಗೆ ಅವಕಾಶ

ಪ್ರೊ. ಎ.ಎಂ ಖಾನ್‌
ಪ್ರೊ. ಎ.ಎಂ ಖಾನ್‌

ಪ್ರತಿಭಾವಂತ ವಿದ್ಯಾರ್ಥಿಗಳು ಪರೀಕ್ಷಾ ವೇಳೆಯಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಹಿಂದೇಟು ಹಾಕುವಂತಹ ಸ್ಥಿತಿ ಇತ್ತು. ಆದರೆ, ಈಗ ಹೊಸ ಆದೇಶದಿಂದಾಗಿ ವಿದ್ಯಾರ್ಥಿಗಳಲ್ಲಿ ಹುರುಪು ಬಂದಿದೆ. ಅವಕಾಶ ವಂಚಿತ ನೂರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ. ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೂ ಆದೇಶದ ಪ್ರತಿ ಕಳುಹಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ.ಎಂ ಖಾನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT