ಶನಿವಾರ, ನವೆಂಬರ್ 27, 2021
21 °C
ವಿಶ್ವ ಟಿಟಿ ಚಾಂಪಿಯನ್‌ಷಿಪ್: ಮಣಿಕಾ, ಶರತ್‌ಗೆ ನಿರಾಶೆ

ಎರಡನೇ ಸುತ್ತಿಗೆ ಸತ್ಯನ್ , ಐಹಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್, ಅಮೆರಿಕ (ಪಿಟಿಐ): ಭಾರತದ ಸತ್ಯನ್ ಜ್ಞಾನಶೇಖರನ್  ಮತ್ತು ಐಹಿಕಾ ಮುಖರ್ಜಿ ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ ಫೈನಲ್ಸ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಮೊದಲ ಸುತ್ತಿನಲ್ಲಿ ಗೆದ್ದರು.

ಆದರೆ, ಒಲಿಂಪಿಯನ್ ಮಣಿಕಾ ಬಾತ್ರಾ ಮತ್ತು ಅಗ್ರಶ್ರೇಯಾಂಕಿತ ಆಟಗಾರ ಶರತ್ ಕಮಲ್ ಅವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋತು ಹೊರಬಿದ್ದರು.

ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಸತ್ಯನ್  11-2, 11-9, 11-4, 11-3ರಿಂದ ಉಕ್ರೇನ್‌ನ ಯರೊಸ್ಲೇವ್ ಝಮುದೆನಕೊ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದರು. ‌

ಇನ್ನೊಂದು ಪಂದ್ಯದಲ್ಲಿ ಶರತ್ ಕಮಲ್ 11-9, 5-11, 6-11, 7-11, 9-11ರಿಂದ ಬೆಲ್ಜಿಯಂನ ಸೆಡ್ರಿಕ್ ನ್ಯೂಟಿಂಕ್ ವಿರುದ್ಧ ಸೋತರು.ಸಿಂಗಲ್ಸ್‌ನಲ್ಲಿ ಭಾರತದ ಅಂತೋಣಿ ಅಮಲರಾಜ್ ಮತ್ತು ಹರ್ಮಿತ್ ದೇಸಾಯಿ ಕೂಡ ನಿರಾಶೆ ಅನುಭವಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಐಹಿಕಾ ಮುಖರ್ಜಿ  11-7, 14-16, 8-11, 11-6, 11-9, 11-6 ರಿಂದ ಈಜಿಪ್ತ್‌ನ ಫರಾ ಅಬ್ದೆಲ್ ಅಜೀಜ್ ವಿರುದ್ಧ ಗೆದ್ದರು. ಎರಡನೇ ಸುತ್ತಿನಲ್ಲಿ ಅವರು ಜಪಾನಿನ ಹಿನಾ ಹಯಾತಾ ವಿರುದ್ಧ ಆಡಲಿದ್ದಾರೆ.

ಇದೇ ಸುತ್ತಿನಲ್ಲಿ ನಡೆದ ಇನ್ನೊಂದು ರೋಚಕ ಹೋರಾಟದಲ್ಲಿ ಭರವಸೆಯ ಆಟಗಾರ್ತಿ ಮಣಿಕಾ 11-5, 15-13, 8-11, 4-11, 6-11, 11-4, 7-11ರಿಂದ  ಬ್ರೆಜಿಲ್‌ನ ಬ್ರುನಾ ತಕಾಶಿ ವಿರುದ್ಧ ಸೋತರು.

ಮಣಿಕಾ ಮತ್ತು ಸತ್ಯನ್ ಅವರು ಮಿಶ್ರ ಡಬಲ್ಸ್‌ನಲ್ಲಿ ಆಡುತ್ತಿದ್ದಾರೆ. ಅವರಿಗೆ 64ರ ಘಟ್ಟದ ಪಂದ್ಯದಲ್ಲಿ ಬೈ ದೊರೆತಿದೆ. ಮಹಿಳೆಯರ ಡಬಲ್ಸ್‌ನಲ್ಲಿ ಕನ್ನಡತಿ ಅರ್ಚನಾ ಕಾಮತ್ ಜೋಡಿಯೂ ಬೈ ಪಡೆದು ಮುಂದಿನ ಹಂತಕ್ಕೆ ಸಾಗಿದೆ.

ಪುರುಷರ ಡಬಲ್ಸ್‌ನಲ್ಲಿ ಶರತ್ ಕಮಲ್ ಮತ್ತು ಸತ್ಯನ್ ಜೋಡಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು