ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡವಿಲ್ಲ, ಆತಂಕವೂ ಇಲ್ಲ: ಮಂಜೀತ್ ಸಿಂಗ್‌

ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮಂಜೀತ್ ಸಿಂಗ್‌ಗೆ ಬೆಂಗಳೂರಿನಲ್ಲಿ ತರಬೇತಿ
Last Updated 17 ನವೆಂಬರ್ 2018, 15:19 IST
ಅಕ್ಷರ ಗಾತ್ರ

ಬೆಂಗಳೂರು: ಜಕಾರ್ತದಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಮಿಂಚಿನ ಓಟದ ಮೂಲಕ ದೇಶಕ್ಕೆ ಚಿನ್ನ ಗೆದ್ದುಕೊಟ್ಟ ಮಂಜೀತ್ ಸಿಂಗ್ ಈಗ ಬೆಂಗಳೂರಿನಲ್ಲಿದ್ದಾರೆ. ಹರಿಯಾಣದ ಜಿಂದ್ ಜಿಲ್ಲೆಯ ಉಜಾನ ಗ್ರಾಮದ ಮಂಜೀತ್‌, ಭಾರತ ಅಥ್ಲೆಟಿಕ್ ಫೆಡರೇಷನ್‌ ಸಾಯ್‌ ಕೇಂದ್ರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ವಿಶ್ವ ಚಾಂಪಿಯನ್‌ಷಿಪ್‌ಗೆ ಸಜ್ಜಾಗುವ ಸಿದ್ಧತೆಯಲ್ಲಿದ್ದಾರೆ.

ನಗರದ ಮಂತ್ರಿಮಾಲ್‌ನಲ್ಲಿರುವ ಸ್ಕೆಚರ್ಸ್‌ ಕ್ರೀಡಾ ಉಡುಪು ಮತ್ತು ಶೂಗಳ ಮಾರಾಟ ಕಂಪೆನಿ ಶನಿವಾರ ಆಯೋಜಿಸಿದ್ದ ‘ಚಾಂಪಿಯನ್ಸ್ ವರ್ಕ್‌ಶಾಪ್‌’ನಲ್ಲಿ ಪಾಲ್ಗೊಂಡಿದ್ದ ಅವರು ಸಾರ್ವಜನಿಕರೊಂದಿಗೆ ಮುಕ್ತವಾಗಿ ಮಾತನಾಡಿ ಅನುಭವಗಳನ್ನು ಹಂಚಿಕೊಂಡರು.

ನಂತರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ‘ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಗಳಿಸಿದ ನಂತರ ನನ್ನ ಮೇಲೆ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಏಷ್ಯಾ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ. ಆದರೆ ಪದಕ ಗೆಲ್ಲಲೇಬೇಕೆಂಬ ಒತ್ತಡವಾಗಲಿ, ಅದರಿಂದಾಗಿ ಆತಂಕವಾಗಲಿ ಇಲ್ಲ’ ಎಂದರು.

‘ಏಷ್ಯಾ ಕ್ರೀಡಾಕೂಟದ ನಂತರ ಒಂದೂವರೆ ತಿಂಗಳು ಮನೆಯಲ್ಲೇ ಇದ್ದೆ. ಈಗ ಮತ್ತೆ ತರಬೇತಿ ಆರಂಭಗೊಂಡಿದೆ. ನಿತ್ಯವೂ ಏಳು ತಾಸು ಅಭ್ಯಾಸ ನಡೆಯುತ್ತಿದೆ. ಜನರ ನಿರೀಕ್ಷೆ ಹೆಚ್ಚಾಗಿರುವುದರಿಂದ ಮೊದಲಿಗಿಂತಲೂ ಹೆಚ್ಚು ಶ್ರಮ ಹಾಕುತ್ತಿದ್ದೇನೆ. ಫಿಟ್‌ನೆಸ್ ಉಳಿಸಿಕೊಳ್ಳುವುದು ಮತ್ತು ಗಾಯದ ಸಮಸ್ಯೆ ಕಾಡದೇ ಇರುವಂತೆ ನೋಡಿಕೊಳ್ಳುವುದು ಮುಖ್ಯ ಗುರಿ’ ಎಂದು ಅವರು ಹೇಳಿದರು.

ಏಷ್ಯಾ ಕ್ರೀಡಾಕೂಟದಲ್ಲಿ ಪ್ರಬಲ ಪೈಪೋಟಿ ನೀಡಿದ ಕೇರಳದ ಜಿನ್ಸನ್ ಜಾನ್ಸನ್‌ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ಇಬ್ಬರೂ ಜೊತೆಯಾಗಿ ಅಭ್ಯಾಸ ಮಾಡುತ್ತಿದ್ದೇವೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಎರಡು ಸ್ಥಾನಗಳನ್ನು ಗೆಲ್ಲುವುದು ನಮ್ಮ ಉದ್ದೇಶ’ ಎಂದರು.

‘ವಿಶ್ವ ಚಾಂಪಿಯನ್‌ಷಿಪ್‌ಗೂ ಏಷ್ಯಾ ಚಾಂಪಿಯನ್‌ಷಿಪ್‌ಗೂ ಭಾರಿ ವ್ಯತ್ಯಾಸವಿದೆ. ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಂಡಿರುವುದರಿಂದ ಪ್ರಮುಖ ಅಥ್ಲೀಟ್‌ಗಳ ಸಾಮರ್ಥ್ಯದ ಅರಿವು ಇದೆ. ಕಠಿಣ ಅಭ್ಯಾಸ ನಡೆಸಿದರೆ ಭಾರತದ ಅಥ್ಲೀಟ್‌ಗಳು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದು ನನ್ನ ಬಲವಾದ ನಂಬಿಕೆ’ ಎಂದು ಅವರು ವಿಶ್ವಾಸದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT