ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಾಟಕ್ಕೆ ಪೈಲ್ವಾನರು ಚಿತ್!

Last Updated 24 ಮೇ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕೊರೊನಾದಿಂದಾಗಿ ಕುಸ್ತಿ ಅಖಾಡಗಳು ಸ್ಥಬ್ಧವಾಗಿವೆ. ಇದರಿಂದ ಪೈಲ್ವಾನರ ಸಾಮರ್ಥ್ಯ ಮತ್ತು ಫಿಟ್‌ನೆಸ್ ಮೇಲೆ ಮಾತ್ರವಲ್ಲ, ಅವರ ಆರ್ಥಿಕ ಸ್ಥಿತಿಯ ಮೇಲೆಯೂ ದುಷ್ಪರಿಣಾಮ ಉಂಟಾಗಿದೆ. ಮಣ್ಣಿನ ಕುಸ್ತಿಯಲ್ಲಿ ಪಾಲ್ಗೊಂಡು ಸಾವಿರಾರು ರೂಪಾಯಿ ಖಮಾಯಿಸುತ್ತಿದ್ದ ಅವರ ಜೇಬು ಈಗ ಖಾಲಿ ಖಾಲಿ. ಅಭ್ಯಾಸವೂ ಇಲ್ಲದೆ ಸ್ಪರ್ಧೆಗಳೂ ಇಲ್ಲದೆ ದಿನಗಳೆಯುತ್ತಿರುವ ಕೆಲವರು ಭವಿಷ್ಯದ ಕುರಿತು ಮಾತನಾಡುವಾಗ ಬೆಚ್ಚಿ ಬೀಳುತ್ತಿದ್ದಾರೆ.

ಫೆಬ್ರುವರಿಯಲ್ಲಿ ಧಾರವಾಡದಲ್ಲಿ ನಡೆದ ಕುಸ್ತಿ ಹಬ್ಬದಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕೊಹಳ್ಳಿ ಗ್ರಾಮದ ಸಂಗಮೇಶ ಬಿರಾದಾರ ಕರ್ನಾಟಕ ಕೇಸರಿ ಪಟ್ಟ ಮುಡಿಗೇರಿಸಿಕೊಂಡಿದ್ದರು. ಪದವಿ ಕಾಲೇಜು ವಿದ್ಯಾರ್ಥಿಯಾಗಿರುವ ಸಂಗಮೇಶ ಅವರಲ್ಲಿ ಈ ಹಬ್ಬದ ನಂತರ ನವೋತ್ಸಾಹ ಚಿಮ್ಮಿತ್ತು. ಈ ಬಾರಿ ‘ನಾಡ ಕುಸ್ತಿ’ಗಳಲ್ಲಿ ಉತ್ತಮ ಬೇಡಿಕೆ ಬರುವ ನಿರೀಕ್ಷೆ ಮೂಡಿತ್ತು. ಆದರೆ ಕೊರೊನಾ ಕಾಟದಿಂದ ಉಂಟಾಗಿರುವ ವಿಷಮ ಸ್ಥಿತಿ ಅವರ ಜಂಘಾಬಲವನ್ನೇ ಉಡುಗಿಸಿದೆ.

ಸಂಗಮೇಶ ಬಿರಾದಾರ –ಪ್ರಜಾವಾಣಿ ಚಿತ್ರ

ಸಂಗಮೇಶ ಮಾತ್ರವಲ್ಲ, ರಾಜ್ಯದ ಮೂಲೆಮೂಲೆಗಳ ಪೈಲ್ವಾನರು ಕೊರೊನಾ ಹೊಡೆತಕ್ಕೆ ಸಿಕ್ಕು ಕಂಗಾಲಾದ್ದಾರೆ. ಸಾವಿರಾರು ರೂಪಾಯಿ ಜೇಬಿಗೆ ತುಂಬಿಕೊಂಡು ಕನಸಿನ ಸೌಧ ಕಟ್ಟುತ್ತಿದ್ದ ಪೈಲ್ವಾನರು ಈ ಬಾರಿ ಜಾತ್ರೆಯಲ್ಲಿ ಪಟ್ಟು ಹಾಕಲು ಅವಕಾಶ ಇಲ್ಲದೆ ಮತ್ತು ಊರಜನರು ಏರ್ಪಡಿಸುವ ‘ಕುಸ್ತಿಹಬ್ಬ’ಗಳು ಇಲ್ಲದೇ ಊರು–ಮನೆಗಳಲ್ಲೇ ‘ಬಂಧನ’ಕ್ಕೆ ಒಳಗಾಗಿದ್ದಾರೆ.

ಸಂಗಮೇಶ ಅವರು ಈ ಹಿಂದಿನ ವರ್ಷಗಳಲ್ಲಿ ಪ್ರತಿ ಕುಸ್ತಿಗೆ ₹ 15 ಸಾವಿರದಿಂದ ₹ 20 ಸಾವಿರದ ವರೆಗೆ ಸಂಭಾವನೆ ಪಡೆಯುತ್ತಿದ್ದರು. ‘ಕೇಸರಿ’ ಪಟ್ಟ ಸಿಕ್ಕಿದ ಕಾರಣ ಈ ಬಾರಿ ಬೇಡಿಕೆ ಹೆಚ್ಚುವುದು ಖಚಿತವಾಗಿತ್ತು. ಹೀಗಾಗಿ ಕುಸ್ತಿಯೊಂದಕ್ಕೆ ₹ 30 ಸಾವಿರ ಪಡೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ನಿರೀಕ್ಷೆ ಹುಸಿಯಾಗಿದೆ; ಕನಸು ಸದ್ಯಕ್ಕೆ ಕಮರಿಹೋಗಿದೆ.

‘ಊರಲ್ಲಿ ಗರಡಿಮನೆ ಇಲ್ಲ. ಆದ್ದರಿಂದ ಅಭ್ಯಾಸಕ್ಕೂ ಅವಕಾಶವಿಲ್ಲ. ಬೆಳಿಗ್ಗೆ ರನ್ನಿಂಗ್ ಮಾಡಿದ ನಂತರ ಮನೆಯಲ್ಲೇ ಸ್ವಲ್ಪ ತಾಲೀಮು. ಆ ಮೇಲೆ ಹೊಲದಲ್ಲಿ ಮಣ್ಣಿನ ಕೆಲಸ. ಅದರಿಂದ ಕುಟುಂಬಕ್ಕೆ ನೆರವೂ ಆಗುತ್ತದೆ. ದೇಹಕ್ಕೆ ವ್ಯಾಯಾಮವೂ ಆಗುತ್ತದೆ’ ಎನ್ನುತ್ತಾರೆ ಸಂಗಮೇಶ.

ಪೈಲ್ವಾನರಿಗೆ ಸಂಭಾವನೆ ಕೊಟ್ಟು ನಡೆಸುವ ಕುಸ್ತಿ ವರ್ಷಪೂರ್ತಿ ನಡೆಯುತ್ತಿರುತ್ತದೆ. ಆದರೆ ಫೆಬ್ರುವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹೆಚ್ಚು. ಈ ಸಂದರ್ಭದಲ್ಲಿ ಕೆಲವರಿಗೆ ನಿತ್ಯವೂ ಒಂದಲ್ಲ, ಒಂದು ಕಡೆ ಸ್ಪರ್ಧೆ ಇದ್ದೇ ಇರುತ್ತದೆ. ಹೊಸಬರು ಕಣಕ್ಕೆ ಇಳಿಯಲು ₹ ಎರಡು ಸಾವಿರದಿಂದ ₹ ಐದು ಸಾವಿರದ ವರೆಗೆ ಪಡೆಯುತ್ತಿದ್ದರೆ ಖ್ಯಾತಿ ಗಳಿಸಿದವರು ₹ 20 ಸಾವಿರದಿಂದ ₹ 50 ಸಾವಿರದ ವರೆಗೆ ನಿಗದಿ ಮಾಡುತ್ತಾರೆ. ಕಾರ್ತಿಕ್ ಕಾಟೆ ಅವರಂಥ ಬಹು ಬೇಡಿಕೆಯ ಪೈಲ್ವಾನರು ಕೆಲವೇ ತಿಂಗಳಲ್ಲಿ ಲಕ್ಷಾಂತರ ಮೊತ್ತ ಸಂಗ್ರಹಿಸುತ್ತಾರೆ. ಅವರಿಗೆ ಅದುವೇ ಉದ್ಯೋಗ; ಜೀವನ.

ಒಂದು ಫೈಟ್‌ಗೆ ₹ ಒಂದು ಲಕ್ಷ!

ಮೈಸೂರು ಭಾಗದ ಹಳ್ಳಿಗಳಲ್ಲಿ ಮತ್ತು ನಗರ–ಪಟ್ಟಣಗಳಲ್ಲಿ ಕುಸ್ತಿ ನಡೆಯಿತೆಂದರೆ ಪೈಲ್ವಾನರಿಗೆ ಸುಗ್ಗಿ. ಮೈಸೂರು ನಗರ ಬಿಟ್ಟರೆ ನಂಜನಗೂಡಿನಲ್ಲಿ ನಡೆಯುವ ಕುಸ್ತಿಯಲ್ಲಿ ಪೈಲ್ವಾನರು ಭಾರಿ ಮೊತ್ತ ಪಡೆಯುತ್ತಾರೆ. ಶ್ರಿರಂಗಪಟ್ಟಣ, ಗಂಜಾಂ, ಬನ್ನೂರು, ರಮ್ಮನಹಳ್ಳಿ, ಕ್ಯಾತಮಾರನಹಳ್ಳಿ ಮುಂತಾದ ಕಡೆಗಳಲ್ಲಿ ₹ 50 ಸಾವಿರದಿಂದ ₹ ಒಂದು ಲಕ್ಷದ ವರೆಗೂ ಪೈಲ್ವಾನರಿಗೆ ನೀಡಲಾಗುತ್ತದೆ. ಕೆಜಿ ಕೊಪ್ಪಲಿನಲ್ಲಿ ಈಚೆಗೆ ನಡೆದ ಕುಸ್ತಿಯಲ್ಲಿ ಒಟ್ಟು ₹ 15 ಲಕ್ಷ ಮೊತ್ತದ ಬಹುಮಾನ ನೀಡಲಾಗಿತ್ತು ಎಂದು ವಿವಿಧ ಕಡೆಗಳಲ್ಲಿ ಕುಸ್ತಿ ಸಂಘಟಿಸುವ ರವಿ ಬನ್ನೂರು ತಿಳಿಸುತ್ತಾರೆ.

ಡಮ್ಮಿಗಳೊಂದಿಗೆ ಅಭ್ಯಾಸ

ನೇರ ಸಂಪರ್ಕದ ಕ್ರೀಡೆಯಾಗಿರುವುದರಿಂದ ಕುಸ್ತಿ ಅಭ್ಯಾಸಕ್ಕೆ ಸರ್ಕಾರ ಇನ್ನೂ ಒಪ್ಪಿಗೆ ನೀಡಲಿಲ್ಲ. ಆದ್ದರಿಂದ ರಾಜ್ಯದ ಗರಡಿಮನೆಗಳು ಮತ್ತು ಕುಸ್ತಿ ಕ್ರೀಡಾನಿಲಯಗಳು ಸ್ತಬ್ಭವಾಗಿವೆ. ವೈಯಕ್ತಿಕವಾಗಿ ಕೆಲವರು ವ್ಯಾಯಾಮ ಮಾಡಲಷ್ಟೇ ಇವುಗಳನ್ನು ಬಳಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಡಮ್ಮಿಗಳನ್ನು (ಮರಳು ಮತ್ತಿತರ ಭಾರದ ಪದಾರ್ಥ ಬಳಸಿ ರಬ್ಬರ್‌ ಹೊದಿಸಿದ ಕೃತಕ ಮನುಷ್ಯಾಕೃತಿ) ಬಳಸಿಕೊಂಡು ಅಭ್ಯಾಸ ಮಾಡಲಾಗುತ್ತಿದೆ. ಆದರೆ ಡಮ್ಮಿಗಳು ‘ಥ್ರೋ’ ಮಾಡುವುದಕ್ಕೆ ಹೆಚ್ಚು ಬಳಕೆಯಾಗುತ್ತಿದ್ದು ಪಟ್ಟುಗಳನ್ನು ಹಾಕಲು ನೈಜ ‘ಎದುರಾಳಿ’ಯೇ ಬೇಕು ಎಂದು ಕೋಚ್‌ಗಳು ಅಭಿಪ್ರಾಯಪಡುತ್ತಾರೆ. ಕೊರೊನಾ ಸಂಕಷ್ಟದಿಂದಾಗಿ ಪ್ರತಿಯೊಬ್ಬರಿಗೂ ಒಂದೊಂದು ಡಮ್ಮಿಗಳನ್ನು ನೀಡುವುದು ಅನಿವಾರ್ಯ. ಅಷ್ಟು ಡಮ್ಮಿಗಳನ್ನು ವ್ಯವಸ್ಥೆ ಮಾಡುವುದು ಕೂಡ ಸುಲಭಸಾಧ್ಯವಲ್ಲ ಎಂಬುದು ಅವರ ಅಭಿಪ್ರಾಯ.
‘ಆಹಾರ ಸೇವನೆ ಪ್ರಮಾಣ ಕಡಿಮೆ ಮಾಡಿದ್ದೇನೆ’

ಹಾವೇರಿ ಜಿಲ್ಲೆ ರಾಣೆಬೆನ್ನೂರಿನವರಾದ ಕಾರ್ತಿಕ್ ಕಾಟೆ ಸದ್ಯ ದಾವಣಗೆರೆಯಲ್ಲಿ ಬಾಡಿಗೆ ಕೊಠಡಿಯಲ್ಲಿದ್ದಾರೆ. ಸಾಕಷ್ಟು ಹೆಸರು ಗಳಿಸಿದ್ದರೂ ಉದ್ಯೋಗ ಇಲ್ಲದ ಕಾರಣ ಅವರಿಗೆ ಕುಸ್ತಿಯೇ ಉಪಜೀವನ ಮಾರ್ಗ. ಗುಂಪಾಗಿ ಮತ್ತು ಎದುರಾಳಿಯನ್ನು ಬಳಸಿಕೊಂಡು ಅಭ್ಯಾಸ ಮಾಡಲು ಅವಕಾಶವಿಲ್ಲ. ಆದ್ದರಿಂದ ನನ್ನಷ್ಟಕ್ಕೇ ಅಭ್ಯಾಸ, ವ್ಯಾಯಾಮದಲ್ಲಿ ತೊಡಗಿದ್ದೇನೆ. ಎದುರಾಳಿಯ ಬದಲಿಗೆ ಡಮ್ಮಿ ಬಳಸುತ್ತಿದ್ದೇನೆ. ಇದೆಲ್ಲ ನಿತ್ಯವೂ ನಡೆಯುತ್ತಿದ್ದರೂ ಆರ್ಥಿಕ ಸಂಕಷ್ಟ ಕರುಳು ಹಿಂಡುತ್ತಿದೆ. ಹೆಚ್ಚು ಕುಸ್ತಿಗಳು ನಡೆಯುವ ಅವಧಿಯಲ್ಲಿ ಲಕ್ಷಾಂತರ ಮೊತ್ತ ಸಿಗುತ್ತಿತ್ತು. ಆದರೆ ದೇಹ ಹುರಿಗೊಳಿಸಲು ಪ್ರತಿ ತಿಂಗಳು ಕನಿಷ್ಟ ₹ 20 ಸಾವಿರ ವೆಚ್ಚ ಆಗುತ್ತಿತ್ತು. ಈಗ ಹಣ ಇಲ್ಲ. ಆದ್ದರಿಂದ ಸೇವಿಸುವ ಆಹಾರ, ಪೌಷ್ಠಿಕ ಅಂಶಗಳ ಪ್ರಮಾಣವನ್ನೇ ಕಡಿಮೆ ಮಾಡಿದ್ದೇನೆ. ಇನ್ನೇನು ಮಾಡಲು ಸಾಧ್ಯ ಎಂದು ಕಾರ್ತಿಕ್ ಹೇಳಿದರು.

***

ಸರ್ಕಾರವೂ ಸಂಕಷ್ಟದಲ್ಲಿದೆ; ಆದರೂ ಸ್ಪಂದಿಸಲಿ

ಕೊರೊನಾದಿಂದಾಗಿ ಮನುಕುಲವೇ ಆಪತ್ತಿಗೆ ಸಿಲುಕಿದೆ. ಈ ಸಂದರ್ಭದಲ್ಲಿ ಕಳೆದುಕೊಂಡದ್ದು ವಾಪಸ್ ಸಿಗುವುದು ಕಷ್ಟ. ಕುಸ್ತಿ ಆಡಿ ಜೀವನ ನಡೆಸುವವರ ಪೈಕಿ ಶೇಕಡಾ 80ರಷ್ಟು ಪೈಲ್ವಾನರು ಬಡ ಕುಟುಂಬದ ಕುಡಿಗಳು. ಅವರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ಎರಡು ವರ್ಷಗಳಿಗೆ ಆಗುವಷ್ಟು ‘ಆದಾಯ’ ತಂದುಕೊಡುವ ಕಾಲದಲ್ಲೇ ಕೊರೊನಾ ಕಾಡಿದೆ. ಸರ್ಕಾರವೂ ಸಂಕಷ್ಟದಲ್ಲಿದೆ ಎಂಬ ಅರಿವು ಇದೆ. ಆದರೂ ಬಡ ಕುಸ್ತಿಪಟುಗಳ ನೆರವಿಗೆ ಬರಲೇಬೇಕು. ಇಲ್ಲವಾದರೆ ಅವರು ಬದುಕು ಕಟ್ಟಿಕೊಳ್ಳುವುದು ಕಷ್ಟ.

- ರತನ್ ಮಠಪತಿ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT