ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಟ್ಟ’ದಂತ ಸವಾಲಿಗೆ ಸಜ್ಜಾದ ವಿನಯ್‌

ಪರ್ವತ ಪ್ರದೇಶದಲ್ಲಿ ನಡೆಯುವ ಅತ್ಯಂತ ಕ್ಲಿಷ್ಟಕರ ಮ್ಯಾರಥಾನ್‌ನಲ್ಲಿ ಭಾಗಿ
Last Updated 28 ಜುಲೈ 2019, 20:02 IST
ಅಕ್ಷರ ಗಾತ್ರ

ಅಲ್ಟ್ರಾ ಟ್ರಯಲ್ ಡು ಮಾಂಟ್‌ ಬ್ಲ್ಯಾಂಕ್‌ (ಯುಟಿಎಂಬಿ) ... ಇದು ಪರ್ವತ ಪ್ರದೇಶದಲ್ಲಿ ನಡೆಯುವ ಮ್ಯಾರಥಾನ್. ಅತ್ಯಂತ ಕ್ಲಿಷ್ಟಕರ ಮತ್ತು ಸವಾಲಿನ ಓಟ. ವಿಶ್ವದಲ್ಲಿಯೇ ಅತೀ ಸಾಹಸಮಯ ಮ್ಯಾರಥಾನ್ ಎಂದರೂ ಅತಿಶಯೋಕ್ತಿಯಾಗಲಾರದು. ಸಾಮಾನ್ಯವಾಗಿ ಆಗಸ್ಟ್‌ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್‌ ಆರಂಭದಲ್ಲಿ ಈ ಅಂತರರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ನಡೆಯುತ್ತದೆ. 2003ರಲ್ಲಿ ಇದು ಆರಂಭವಾಯಿತು. ಅಂಥ ಒಂದು ಕಠಿಣ ಸವಾಲಿಗೆ ಸಜ್ಜಾಗಿರುವವರು ಬೆಂಗಳೂರಿನ ಯುವಕ ವಿನಯ್‌ ಕೃಷ್ಣಮೂರ್ತಿ. ‘ಪ್ರಜಾವಾಣಿ’ ಜೊತೆಗೆ ಅವರು ತಮ್ಮ ಆಶಯಗಳನ್ನು ಹಂಚಿಕೊಂಡಿದ್ದಾರೆ.

*ಆಸಕ್ತಿ ಬೆಳೆದದ್ದು ಹೇಗೆ?
ಓಟ ಬಾಲ್ಯದಿಂದಲೂನನ್ನ ಹವ್ಯಾಸ ಆಗಿತ್ತು. ಅಪಘಾತವೊಂದು ಸಂಭವಿಸಿ ಶಸ್ತ್ರಚಿಕಿತ್ಸೆಗೆ ಒಳಗಾದೆ. ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಜಿಮ್‌ಗೆ ಹೋಗಲಾರಂಭಿಸಿದೆ. ಹಾಗೆಯೇ 5 ಹಾಗೂ 10 ಕಿ.ಮೀ. ಓಟ ಓಡಲಾರಂಭಿಸಿದೆ. ಕ್ರಮೇಣ 50 ಕಿ.ಮೀ.ನಂತಹ ದೀರ್ಘ ದೂರದ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತಿಯೂ ಬೆಳೆಯಿತು. ಇದನ್ನೇ ಪ್ರವೃತ್ತಿಯಾಗಿ ಮುಂದುವರಿಸಿದೆ. ಬಳಿಕ ಯುಟಿಎಂಬಿ ಬಗ್ಗೆ ತಿಳಿದುಬಂತು.

*ಯುಟಿಎಂಬಿ ಸ್ಪರ್ಧೆಗೆ ಪ್ರವೇಶ ಪಡೆಯುವ ಬಗೆ?
ಭಾರತದಲ್ಲಿ ಮಲ್ನಾಡ್‌ ಅಲ್ಟ್ರಾ ಎಂಬ 80 ಕಿ.ಮೀ. ದೂರದ ಸ್ಪರ್ಧೆ ಸೇರಿದಂತೆ ಮೂರ್ನಾಲ್ಕು ಕಡೆ ಅರ್ಹತಾ ಸುತ್ತಿನ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ಪಡೆಯುವ ಅಂಕಗಳ ಆಧಾರದಲ್ಲಿ ಡಿಸೆಂಬರ್‌ನಲ್ಲಿ ಡ್ರಾ ಪ್ರಕ್ರಿಯೆನಡೆಸಲಾಗುತ್ತದೆ. ಜನವರಿಯಲ್ಲಿ ಹೆಸರು ಘೋಷಣೆ ಮಾಡಲಾಗುತ್ತದೆ. ಭಾರತದಿಂದ 10–15 ಸ್ಪರ್ಧಿಗಳು ಭಾಗವಹಿಸಿದ್ದರು. ನಾನೊಬ್ಬನೇ ಆಯ್ಕೆಯಾಗಿದ್ದೇನೆ.

*ಎಲ್ಲಿ ಮತ್ತು ಯಾವಾಗ ಯುಟಿಎಂಬಿ ಮ್ಯಾರಥಾನ್‌ ನಡೆಯಲಿದೆ?
ಫ್ರಾನ್ಸ್ ದೇಶದ ಚಾಮೋನಿಕ್ಸ್ ಎಂಬಲ್ಲಿಆಗಸ್ಟ್‌ 29ರಿಂದ ಆರಂಭವಾಗಲಿದೆ.

*ಸಿದ್ಧತೆ ಹೇಗೆ ನಡೆಸಿದ್ದೀರಿ?
ಯುಟಿಎಂಬಿಗಾಗಿ ಯಾವುದೇ ವಿಶೇಷ ತರಬೇತಿ ಅಥವಾ ಅಭ್ಯಾಸ ನಡೆಸುತ್ತಿಲ್ಲ. ಮೈಸೂರಿನ ಚಾಮುಂಡಿಬೆಟ್ಟ, ಬೆಂಗಳೂರಿನ ನಂದಿ ಬೆಟ್ಟಗಳಲ್ಲೇ ಓಡುತ್ತೇನೆ. ಲಾಲ್‌ಬಾಗ್‌ ಬೆಟ್ಟವನ್ನು ಹತ್ತಿ ಇಳಿಯುತ್ತೇನೆ. ಹಾಗೆಯೇ ಉತ್ತರ ಭಾರತದ ಮನಾಲಿ, ಡಾರ್ಜಿಲಿಂಗ್‌ ಮತ್ತಿತರ ಕಡೆ ಆಯೋಜಿಸುವ ಪರ್ವತ ಪ್ರದೇಶದ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಿ ಅಭ್ಯಾಸ ನಡೆಸುತ್ತೇನೆ.

*ಕುಟುಂಬದ ಪ್ರೋತ್ಸಾಹ ಹೇಗಿದೆ?
ತುಂಬಾ ಪ್ರೋತ್ಸಾಹ ಇದೆ. ನನ್ನ ಸಾಧನೆಯ ಹಾದಿಗೆ ತಂದೆ–ತಾಯಿ ಸದಾ ಬೆನ್ನೆಲುಬಾಗಿದ್ದಾರೆ.

*ಯಾವುದಾದರೂ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದೀರಾ?
ಡಾರ್ಜಿಲಿಂಗ್‌ನ ಸಂದಕ್ಪು ಪರ್ವತ ಪ್ರದೇಶದಲ್ಲಿ ನಡೆದ ‘ಬುದ್ಧ ಟ್ರಯಲ್ಸ್’ ಎಂಬ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಆಗಿದ್ದೆ.

*ಸ್ಮರಣೀಯ ಕ್ಷಣ...
ಸಂದಕ್ಪು ಮ್ಯಾರಥಾನ್‌ನಲ್ಲಿ ಓಡಿದ್ದು ಸದಾ ನೆನಪಿನಲ್ಲುಳಿಯುವ ಕ್ಷಣ. ಯಾಕೆಂದರೆ 3,500 ಮೀಟರ್‌ ಎತ್ತರದ ಈ ಮಾರ್ಗದಲ್ಲಿ ಓಡಬೇಕಾದರೆ ಉಸಿರುಕಟ್ಟಿದ ಅನುಭವ. ಸುತ್ತಲೂ ಕಾಡು ಬೇರೆ. ಸತ್ತು ಹುಟ್ಟಿ ಬಂದ ಅನುಭವವಾಗಿದ್ದಂತೂ ಸತ್ಯ. ಆ ವೇಳೆ ಸ್ಪರ್ಧೆ ಮುಗಿಸಬೇಕು ಎಂಬುದೊಂದೆ ನನ್ನ ಮನಸ್ಸಿನಲ್ಲಿದ್ದದ್ದು. ಆದರೆ ರನ್ನರ್‌ಅಪ್‌ ಸ್ಥಾನ ದೊರೆತಾಗ ದೊರೆತ ಖುಷಿ, ಸಂತೃಪ್ತಿ ವರ್ಣಿಸಲಸಾಧ್ಯ.

*ಭವಿಷ್ಯದ ಕನಸು...
ಯುಟಿಎಂಬಿಯಲ್ಲಿ ಓಡುವುದೇ ಒಂದು ಅದ್ಭುತ ಕನಸು. ಅಲ್ಲಿ ಪ್ರಶಸ್ತಿ ಗೆದ್ದರೆ ಹೆಚ್ಚು ಖುಷಿ. ಅಮೆರಿಕದಲ್ಲಿ ನಡೆಯುವ ವೆಸ್ಟರ್ನ್‌ ಸ್ಟೇಟ್ಸ್‌ ಎಂಬ ಮ್ಯಾರಥಾನ್‌ಗೆ ಆಯ್ಕೆಯಾಗುವ ಹಂಬಲವಿದೆ. ಇದಕ್ಕಾಗಿ ಭಾರತದಲ್ಲೂ ಅರ್ಹತಾ ಟೂರ್ನಿ ನಡೆಯುತ್ತದೆ. ಭಾರತದಲ್ಲಿ ಯುಟಿಎಂಬಿ ಮ್ಯಾರಥಾನ್‌ ಅಥವಾ ಪರ್ವತ ಪ್ರದೇಶದ ಓಟದ ಬಗ್ಗೆ ಹೆಚ್ಚು ಜನರಿಗೆ ಪರಿಚಯವಿಲ್ಲ. ಇದರ ಬಗ್ಗೆ ಎಲ್ಲರಿಗೂ ತಿಳಿಯಬೇಕು ಎಂಬುದು ನಾನು ಭಾಗವಹಿಸುತ್ತಿರುವ ಉದ್ದೇಶಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT