ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಎಂಟರ ಘಟ್ಟಕ್ಕೆ ಮೇರಿ, ಮಂಜು

ಸ್ವೀಟಿಗೆ ನಿರಾಸೆ
Last Updated 8 ಅಕ್ಟೋಬರ್ 2019, 14:02 IST
ಅಕ್ಷರ ಗಾತ್ರ

ಉಲನ್‌ ಉಡೆ(ರಷ್ಯಾ): ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ.ಮೇರಿ ಕೋಮ್‌ ಹಾಗೂ ಮಂಜು ರಾಣಿ ಅವರು ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಮಂಗಳವಾರ ನಡೆದ 51 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ 36ರ ಹರೆಯದ ಮೇರಿ 5–0 ಪಾಯಿಂಟ್ಸ್‌ನಿಂದ ಥಾಯ್ಲೆಂಡ್‌ನ ಜುಟಾಮಸ್‌ ಜಿಟ್‌ಪೊಂಗ್‌ ಅವರನ್ನು ಪರಾಭವಗೊಳಿಸಿದರು.

ಮೊದಲ ಸಲ 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿರುವ ಮೇರಿಗೆ ಆರಂಭಿಕ ಸುತ್ತಿನಲ್ಲಿ ‘ಬೈ’ ಲಭಿಸಿತ್ತು.

ಜಿಟ್‌ಪೊಂಗ್‌ ಅವರು ಮೊದಲ ಮೂರು ನಿಮಿಷಗಳಲ್ಲಿ ಆಕ್ರಮಣಕಾರಿಯಾಗಿ ಆಡಿದರು. ಹೀಗಾಗಿ ಭಾರತದ ಅನುಭವಿ ಬಾಕ್ಸರ್‌, ರಕ್ಷಣೆಗೆ ಒತ್ತು ನೀಡಿದರು.

ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಮೇರಿ, ಎರಡನೇ ಸುತ್ತಿನಲ್ಲಿ ಮೆರೆದರು.

ಎದುರಾಳಿಯ ತಂತ್ರಕ್ಕೆ ಪ್ರತಿ ತಂತ್ರ ಹೆಣೆದ ಮೇರಿ, ಜಿಟ್‌ಪೊಂಗ್‌ ಮೇಲೆ ಪ್ರಹಾರ ನಡೆಸಿದರು. ಎದುರಾಳಿಯ ಮುಖ ಮತ್ತು ದವಡೆಗೆ ಬಲವಾದ ಪಂಚ್‌ಗಳನ್ನು ಮಾಡಿ ಪಾಯಿಂಟ್ಸ್‌ ಕಲೆಹಾಕಿದರು.

ಎಂಟರ ಘಟ್ಟಕ್ಕೆ ಮಂಜು: 48 ಕೆ.ಜಿ. ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಮಂಜು ರಾಣಿ ಕೂಡ ಮಿಂಚಿದರು.

ಚಾಂಪಿಯನ್‌ಷಿಪ್‌ನಲ್ಲಿ ಆರನೇ ಶ್ರೇಯಾಂಕ ಹೊಂದಿರುವ ಮಂಜು, 16ರ ಘಟ್ಟದ ಪೈಪೋಟಿಯಲ್ಲಿ 5–0 ಪಾಯಿಂಟ್ಸ್‌ನಿಂದ ವೆನಿಜುವೆಲಾದ ರೋಜಸ್‌ ಟಯೊನಿಸ್‌ ಸೆಡೆನೊ ಅವರನ್ನು ಮಣಿಸಿದರು.

ಮಂಜು ಅವರು ಈ ವರ್ಷದ ಆರಂಭದಲ್ಲಿ ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು.

ಗುರುವಾರ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಮಂಜು, ದಕ್ಷಿಣ ಕೊರಿಯಾದ ಕಿಮ್‌ ಹಯಾಂಗ್‌ ಮಿ ವಿರುದ್ಧ ಸೆಣಸಲಿದ್ದಾರೆ. ಕಿಮ್‌ ಅವರು ಹಿಂದಿನ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಸಲ ಅವರು ಅಗ್ರಶ್ರೇಯಾಂಕ ಪಡೆದಿದ್ದಾರೆ.

64 ಕೆ.ಜಿ. ವಿಭಾಗದ ಹಣಾಹಣಿಯಲ್ಲಿ ಭಾರತದ ಮಂಜು ಬಂಬೋರಿಯಾ 1–4 ಪಾಯಿಂಟ್ಸ್‌ನಿಂದ ಇಟಲಿಯ ನಾಲ್ಕನೇ ಶ್ರೇಯಾಂಕದ ಬಾಕ್ಸರ್‌ ಏಂಜೆಲಾ ಕ್ಯಾರಿನಿ ಎದುರು ಸೋತರು.

75 ಕೆ.ಜಿ.ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವೀಟಿ ಬೂರಾ ನಿರಾಸೆ ಕಂಡರು.

ವೇಲ್ಸ್‌ನ ಲೌರೆನ್‌ ಪ್ರಿನ್ಸ್‌ 3–1 ಪಾಯಿಂಟ್ಸ್‌ನಿಂದ ಸ್ವೀಟಿ ಅವರನ್ನು ಸೋಲಿಸಿದರು. ಎರಡನೇ ಶ್ರೇಯಾಂಕದ ಲೌರೆನ್‌ಗೆ ಪ್ರಬಲ ಪೈಪೋಟಿ ಒಡ್ಡಿದ ಭಾರತದ ಬಾಕ್ಸರ್‌ ಸೋಲಿನ ನಡುವೆಯೂ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT