ಶುಕ್ರವಾರ, ಮಾರ್ಚ್ 31, 2023
33 °C

Tokyo Olympics: ಮೇರಿ ಗೆಲುವಿನ ‘ಪಂಚ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭಾರತದ ಅನುಭವಿ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌ ಗೆಲುವಿನೊಂದಿಗೆ ಒಲಿಂಪಿಕ್ಸ್‌ ಅಭಿಯಾನ ಆರಂಭಿಸಿದ್ದಾರೆ.

ಮಹಿಳೆಯರ 51 ಕೆ.ಜಿ.ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಮೇರಿ 4–1 ಪಾಯಿಂಟ್ಸ್‌ನಿಂದ ಡೊಮಿನಿಕನ್‌ ಗಣರಾಜ್ಯದ ಮಿಗುಲಿನಾ ಹರ್ನಾಂಡೆಜ್‌ ಗಾರ್ಸಿಯಾ ಅವರನ್ನು ಸೋಲಿಸಿ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು.

38 ವರ್ಷ ವಯಸ್ಸಿನ ಮೇರಿ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದಾರೆ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಹಿರಿಮೆಯೂ ಅವರದ್ದಾಗಿದೆ.

ವಯಸ್ಸಿನಲ್ಲಿ ತಮಗಿಂತ 15 ವರ್ಷ ಚಿಕ್ಕವರಾಗಿರುವ ಗಾರ್ಸಿಯಾ ಎದುರು ಮೇರಿ ಅಮೋಘ ಸಾಮರ್ಥ್ಯ ತೋರಿದರು. ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. 

ಮೊದಲ ಸುತ್ತಿನಲ್ಲಿ ಆಕ್ರಮಣಕಾರಿ ತಂತ್ರ ಅನುಸರಿಸಿದ ಮೇರಿಗೆ ಐದು ಮಂದಿ ರೆಫರಿಗಳ ಪೈಕಿ ಮೂವರು ತಲಾ 10 ಪಾಯಿಂಟ್ಸ್‌ ನೀಡಿದರು. ಎರಡನೇ ಸುತ್ತಿನಲ್ಲಿ ಗಾರ್ಸಿಯಾ ಆಕ್ರಮಣಕಾರಿಯಾದರು. ಕೊನೆಯ ಮೂರು ನಿಮಿಷಗಳಲ್ಲಿ ಪ್ರಾಬಲ್ಯ ಮೆರೆದ ಮೇರಿ ಸಂಭ್ರಮಿಸಿದರು. ಭಾರತದ ಬಾಕ್ಸರ್‌, ಎದುರಾಳಿಯ ತಲೆ ಹಾಗೂ ಪಕ್ಕೆಗೆ ನಿರಂತರವಾಗಿ ಪಂಚ್‌ಗಳನ್ನು ಮಾಡಿ ಪಾಯಿಂಟ್ಸ್‌ ಕಲೆಹಾಕಿದರು.  

ನಾಲ್ಕು ಮಕ್ಕಳ ತಾಯಿಯಾಗಿರುವ ಮೇರಿ, ಮುಂದಿನ ಸುತ್ತಿನಲ್ಲಿ ಕೊಲಂಬಿಯಾದ ಇಂಗ್ರಿಟ್‌ ವಲೆನ್ಸಿಯಾ ಎದುರು ಆಡಲಿದ್ದಾರೆ.

ಮನೀಷ್‌ಗೆ ನಿರಾಸೆ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ಮನೀಷ್‌ ಕೌಶಿಕ್‌, ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು.

ಪುರುಷರ 63 ಕೆ.ಜಿ.ವಿಭಾಗದ ಹಣಾಹಣಿಯಲ್ಲಿ ಮನೀಷ್‌ 1–4ರಿಂದ ಬ್ರಿಟನ್‌ನ ಲೂಕ್‌ ಮೆಕ್‌ಕಾರ್ಮಕ್‌ ವಿರುದ್ಧ ಸೋತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು