ಮಂಗಳವಾರ, ನವೆಂಬರ್ 12, 2019
26 °C
ಒಲಿಂಪಿಕ್ಸ್‌ಗೆ ಮುನ್ನ ಆಯ್ಕೆ ಟ್ರಯಲ್ಸ್ ನಡೆಸಲು ಕ್ರೀಡಾ ಸಚಿವರಿಗೆ ಪತ್ರ

ಮೇರಿಗೆ ನಿಖತ್‌ ಸವಾಲು

Published:
Updated:
Prajavani

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಬಾಕ್ಸರ್‌ಗಳನ್ನು ಆಯ್ಕೆ ಮಾಡುವ ಮುನ್ನ ಎಂ.ಸಿ. ಮೇರಿ ಕೋಮ್ ಅವರಿಗೆ ಟ್ರಯಲ್ಸ್ ನಡೆಸಬೇಕು ಎಂದು ಮಾಜಿ ಜೂನಿಯರ್ ವಿಶ್ವ ಚಾಂಪಿಯನ್‌ ನಿಖತ್ ಜರೀನ್ ಆಗ್ರಹಿಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರಿಗೆ ಪತ್ರ ಬರೆದಿರುವ ನಿಖತ್ ‘ವಿವಾದವಿಲ್ಲದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಕ್ರೀಡೆಯ ಮೂಲ ತತ್ವ. ಆದ್ದರಿಂದ ಪ್ರತಿಯೊಂದು ಕ್ರೀಡಾಕೂಟಕ್ಕೂ ಆಯಾ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರು ಕೂಡ ಮತ್ತೊಂದು ಬಾರಿ ಭಾಗವಹಿಸುವ ಮುನ್ನ ಅರ್ಹತೆಯನ್ನು ಸಾಬೀತು ಮಾಡಬೇಕಾಗುತ್ತದೆ. ಇದೇ ನಿಯಮವನ್ನು ಇಲ್ಲೂ ಪಾಲಿಸಬೇಕು’ ಎಂದು ಕೋರಿದ್ದಾರೆ.

‘ಸಣ್ಣ ವಯಸ್ಸಿನಲ್ಲೇ ಮೇರಿ ಕೋಮ್ ಅವರನ್ನು ನೋಡುತ್ತ ಬೆಳೆದಿದ್ದೆ. ಅವರಿಂದ ಗಳಿಸಿದ ಸ್ಫೂರ್ತಿಯೇ ನನ್ನ ಸಾಧನೆಗೆ ಕಾರಣ. ಮೇರಿ ಕೋಮ್‌ ಅವರಂಥ ದಿಗ್ಗಜರು ಅರ್ಹತೆಯನ್ನು ಸಾಬೀತು ಮಾಡಲು ಹಿಂಜರಿಯುವುದು ಸರಿಯಲ್ಲ. 23 ಚಿನ್ನ ಗಳಿಸಿರುವ ಮೈಕೆಲ್ ಫೆಲ್ಪ್ಸ್‌ ಅವರಂಥ ಈಜುಪಟು ಕೂಡ ಪ್ರತಿ ಬಾರಿ ಒಲಿಂಪಿಕ್ಸ್‌ಗೆ ಮುನ್ನ ಅರ್ಹತಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಒಲಿಂಪಿಕ್ಸ್‌ಗೆ ಟ್ರಯಲ್ಸ್ ಮೂಲಕ ಬಾಕ್ಸರ್‌ಗಳನ್ನು ಆಯ್ಕೆ ಮಾಡಿದರೆ, ನಾವೆಲ್ಲ ತೃಪ್ತಿಯಿಂದ ನಿದ್ದೆ ಮಾಡಬಹುದು’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಸತತ 6 ಬಾರಿ ಸೇರಿದಂತೆ 7 ಸಲ ವಿಶ್ವ ಚಾಂಪಿಯನ್ ಆಗಿದ್ದ ಮೇರಿ ಕೋಮ್ ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಒಟ್ಟು 8 ಪದಕಗಳನ್ನು ಗಳಿಸಿದ ಬಾಕ್ಸರ್ ಎಂಬ ದಾಖಲೆ ಬರೆದಿದ್ದರು. ಈ ಬಾರಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೇರಿ ಅವರನ್ನು ನಿಖತ್ ಬದಲಿಗೆ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಲಾಗಿತ್ತು. ನಿಖತ್‌ಗೆ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಫೆಡರೇಷನ್ ಅವಕಾಶ ನೀಡಿರಲಿಲ್ಲ. ಕಂಚು ಗಳಿಸಿದ ಕಾರಣ ಮೇರಿ ಕೋಮ್ ಅವರನ್ನು ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಲು ಭಾರತ ಬಾಕ್ಸಿಂಗ್ ಫೆಡರೇಷನ್ ಮುಂದಾಗಿದೆ. ಈ ಟೂರ್ನಿ ಫೆಬ್ರುವರಿಯಲ್ಲಿ ಚೀನಾದಲ್ಲಿ ನಡೆಯಲಿದೆ.

ಮೇ ತಿಂಗಳಲ್ಲಿ ನಡೆದಿದ್ದ ಇಂಡಿಯಾ ಓಪನ್ ಚಾಂಪಿಯನ್‌ಷಿಪ್‌ ನಲ್ಲಿ ನಿಖತ್‌,ಮೇರಿಗೆ ಮಣಿದಿದ್ದರು.

ಬಿಂದ್ರಾ ಬೆಂಬಲ
ಒಲಿಂಪಿಕ್ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರು ನಿಖತ್ ಜರೀನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

'ಮೇರಿ ಕೋಮ್ ಮೇಲೆ ನನಗೆ ಅಭಿಮಾನವಿದೆ. ಆದರೆ ಕ್ರೀಡಾಪಟು ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಾದದ್ದು ಮುಖ್ಯ. ಕ್ರೀಡೆಯಲ್ಲಿ ಪ್ರತಿದಿನವೂ ವಿಶೇಷವಾಗಿರುವುದರಿಂದ ಆಯಾ ಸಂದರ್ಭಗಳಲ್ಲಿ ತಾನು ಫಿಟ್ ಎಂಬುದನ್ನು ತೋರಿಸಬೇಕಾಗುತ್ತದೆ’ ಎಂದು ಬಿಂದ್ರಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)