ಬುಧವಾರ, ಡಿಸೆಂಬರ್ 11, 2019
22 °C
ಲೈಟ್ ಫ್ಲೈ ವೇಟ್ ವಿಭಾಗದಲ್ಲಿ 1700 ಪಾಯಿಂಟ್ಸ್‌

ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ರ‍್ಯಾಂಕಿಂಗ್‌: ಮೇರಿ ಕೋಮ್‌ಗೆ ಅಗ್ರ ಪಟ್ಟ

Published:
Updated:
Prajavani

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಆರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಕಳೆದ ವರ್ಷ ದಾಖಲೆ ಸೃಷ್ಟಿಸಿದ್ದ ಭಾರತದ ಬಾಕ್ಸರ್ ಮೇರಿ ಕೋಮ್‌ ರ‍್ಯಾಂಕಿಂಗ್‌ನಲ್ಲಿ ಗುರುವಾರ ಅಗ್ರ ಪಟ್ಟ ಅಲಂಕರಿಸಿದ್ದಾರೆ.

ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯ ಲೈಟ್ ಫ್ಲೈ (45ರಿಂದ 48 ಕೆಜಿ) ವಿಭಾಗದಲ್ಲಿ ಒಟ್ಟು 1700 ಪಾಯಿಂಟ್ ಮೇರಿ ಅವರ ಪಾಲಾಗಿವೆ.

36 ವರ್ಷ ವಯಸ್ಸಿನ ಮೇರಿ ಕೋಮ್‌ ಮೂವರು ಮಕ್ಕಳ ತಾಯಿ. ಕಳೆದ ವರ್ಷ ನವದೆಹಲಿಯಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಉಕ್ರೇನ್‌ನ ಅನಾ ಒಕೋಟ ಅವರನ್ನು 5–0ಯಿಂದ ಮಣಿಸಿ ಅವರು ಆರನೇ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಈ ಮೂಲಕ ಅತಿ ಹೆಚ್ಚು ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ಐರ್ಲೆಂಡ್‌ನ ಕಾತಿ ಟೇಲರ್ ಅವರನ್ನು ಹಿಂದಿಕ್ಕಿದ್ದರು. ಪುರುಷರ ವಿಭಾಗದ ದಾಖಲೆಯನ್ನು ಸರಿಗಟ್ಟಿದ್ದರು. ಕ್ಯೂಬಾದ ಫೆಲಿಕ್ಸ್‌ ಸ್ಯಾವೋನ್‌ ಕೂಡ ಆರು ಬಾರಿ ಚಾಂಪಿಯನ್ ಆಗಿದ್ದರು. ಒಕೋಟ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರಿಗೆ 1100 ಪಾಯಿಂಟ್ಸ್ ಸಂದಿವೆ.

2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಮೇರಿ ಅವರು ಪೋಲೆಂಡ್‌ನಲ್ಲಿ ನಡೆದಿದ್ದ ಸೆಲೆಸಿಯನ್ ಓಪನ್ ಟೂರ್ನಿಯಲ್ಲೂ ಚಿನ್ನಕ್ಕೆ ಮುತ್ತಿಕ್ಕಿದ್ದರು. ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನೂ ಕೊರಳಿಗೇರಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು