ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇರಿ ಕೋಮ್‌ ಚಿನ್ನದ ‘ಪಂಚ್‌’

ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ದಾಖಲೆ ಬರೆದ ಭಾರತದ ಬಾಕ್ಸರ್‌
Last Updated 24 ನವೆಂಬರ್ 2018, 17:23 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಎಂ.ಸಿ.ಮೇರಿ ಕೋಮ್‌, ಶನಿವಾರ ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾರೆ.

ಕೆ.ಡಿ.ಜಾಧವ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 48 ಕೆ.ಜಿ.ವಿಭಾಗದ ಫೈನಲ್‌ನಲ್ಲಿ ಮಣಿಪುರದ ಮೇರಿ 5–0 ಪಾಯಿಂಟ್ಸ್‌ನಿಂದ ಉಕ್ರೇನ್‌ನ ಹನಾ ಒಖೋಟಾ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಚಿನ್ನದ ಪದಕ ಕೊರಳಿಗೇರಿಸಿಕೊಂಡು ದಾಖಲೆ ನಿರ್ಮಿಸಿರುವ ಮೇರಿ, ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್‌ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.

ಜೊತೆಗೆ ವಿಶ್ವ ಚಾಂಪಿಯನ್‌ಷಿ‍ಪ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಕ್ಯೂಬಾದ ಫೆಲಿಕ್ಸ್‌ ಸೇವನ್‌ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ.

ಫೆಲಿಕ್ಸ್‌ ಅವರು 1986 ರಿಂದ 1989ರ ಅವಧಿಯಲ್ಲಿ ಪುರುಷರ ಹೆವಿವೇಟ್‌ ವಿಭಾಗದಲ್ಲಿ ಒಟ್ಟು ಆರು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಜಯಿಸಿದ್ದರು.

ಈ ವರ್ಷದ ಆರಂಭದಲ್ಲಿ ಪೋಲೆಂಡ್‌ನಲ್ಲಿ ನಡೆದಿದ್ದ ಸಿಲೇಸಿಯನ್‌ ಇಂಟರ್‌ನ್ಯಾಷನಲ್‌ ಚಾಂಪಿಯನ್‌ಷಿಪ್‌ನಲ್ಲಿ 22 ವರ್ಷ ವಯಸ್ಸಿನ ಒಖೋಟಾ ಎದುರು ಗೆದ್ದಿದ್ದ ಮೇರಿ, ಫೈನಲ್‌ನಲ್ಲಿ ಪಾರಮ್ಯ ಮೆರೆದರು.

ಭಾರತದ ಬಾಕ್ಸರ್‌ ‘ರಿಂಗ್‌’ಗೆ ಬಂದಾಗ ಕ್ರೀಡಾಂಗಣದಲ್ಲಿ ಸಂಭ್ರಮದ ಅಲೆ ಎದ್ದಿತು. ಮೂರು ಮಕ್ಕಳ ತಾಯಿ ಮೇರಿ, ಮೊದಲ ಸುತ್ತಿನ ಆರಂಭದಿಂದಲೇ ಎದುರಾಳಿಯ ಮೇಲೆ ಪ್ರಹಾರ ನಡೆಸಿದರು. ಒಖೋಟಾ ಅವರ ದವಡೆಗೆ ಬಲವಾದ ಪಂಚ್‌ಗಳನ್ನು ಮಾಡಿ ತವರಿನ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ಎರಡನೇ ಸುತ್ತಿನಲ್ಲೂ ಭಾರತದ ಬಾಕ್ಸರ್‌ ಛಲದಿಂದ ಹೋರಾಡಿದರು. ಶಕ್ತಿಯುತ ‘ಹುಕ್‌’ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ 35 ವರ್ಷ ವಯಸ್ಸಿನ ಮೇರಿ, ಎರಡು ಬಾರಿ ಒಖೋಟಾ ಅವರ ಬಲ ದವಡೆಗೆ ಶಕ್ತಿಯುತ ಪಂಚ್‌ ಮಾಡಿದರು. ಇದರಿಂದ ಉಕ್ರೇನ್‌ನ ಬಾಕ್ಸರ್‌ ಅಕ್ಷರಶಃ ನಲುಗಿದರು.

ಮೂರನೇ ಸುತ್ತಿನಲ್ಲೂ ಮೇರಿ ಗರ್ಜಿಸಿದರು. ಎದುರಾಳಿ ಪಂಚ್‌ ಮಾಡಲು ‍ಪ್ರಯತ್ನಿಸಿದಾಗ ಹಿಂದಕ್ಕೆ ಬಾಗಿ ಅದರಿಂದ ತಪ್ಪಿಸಿಕೊಳ್ಳುತ್ತಿದ್ದ ಮೇರಿ, ಅವಕಾಶ ಸಿಕ್ಕಾಗಲೆಲ್ಲಾ ಒಖೋಟಾ ಅವರ ಮುಖಕ್ಕೆ ಪಂಚ್‌ ಮಾಡುತ್ತಿದ್ದರು. ಈ ಮೂಲಕ ಸುಲಭವಾಗಿ ಪಾಯಿಂಟ್ಸ್‌ ಕಲೆಹಾಕಿ ಗೆಲುವಿನ ತೋರಣ ಕಟ್ಟಿದರು. ಪಂದ್ಯ ಜಯಿಸಿದ ನಂತರ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ ಮೇರಿ, ಖುಷಿಯಿಂದ ಕಣ್ಣೀರಿಟ್ಟರು. ವಿಜಯ ವೇದಿಕೆಯಲ್ಲೂ ಅವರು ಭಾವುಕರಾದರು.

ಸೋನಿಯಾಗೆ ಬೆಳ್ಳಿ: 57 ಕೆ.ಜಿ. ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಸೋನಿಯಾ ಚಾಹಲ್‌ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು.

ಫೈನಲ್‌ನಲ್ಲಿ 21 ವರ್ಷ ವಯಸ್ಸಿನ ಸೋನಿಯಾ 1–4 ಪಾಯಿಂಟ್ಸ್‌ನಿಂದ ಜರ್ಮನಿಯ ಒರ್ನೆಲ್ಲಾ ಗೇಬ್ರಿಯಲ್‌ ವಾಹನರ್‌ ವಿರುದ್ಧ ಪರಾಭವಗೊಂಡರು.

ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ತಲಾ ಒಂದು ಚಿನ್ನ ಮತ್ತು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿತು.

ಈ ಹಿಂದೆ ತವರಿನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ತಂಡ ಎಂಟು ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು. ಇದರಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿದ್ದವು.

ಮೋದಿ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೇರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘35ರ ಹರೆಯದಲ್ಲೂ ನೀವು ಅಮೋಘ ಸಾಮರ್ಥ್ಯ ತೋರಿ ಚಿನ್ನದ ಪದಕ ಗೆದ್ದಿದ್ದೀರಿ. ಇದು ಹೆಮ್ಮೆಯ ವಿಷಯ. ನಿಮ್ಮ ಸಾಧನೆ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಚಿನ್ನದ ಪದಕ ಗೆದ್ದು ದಾಖಲೆ ಬರೆದ ನಿಮಗೆ ಅಭಿನಂದನೆಗಳು. ನಿಮ್ಮ ಸಾಧನೆಯಿಂದ ನಾವೆಲ್ಲ ಹೆಮ್ಮೆಯಿಂದ ಬೀಗುವಂತಾಗಿದೆ’ ಎಂದು ಮಮತಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT