ಗುರುವಾರ , ಆಗಸ್ಟ್ 18, 2022
25 °C
‘ಮೊದಲ’ ಸೆಮಿಫೈನಲ್‌ಗೆ ಮಾರ್ಟಿನಾ

ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿ: ಮೆಡ್ವೆಡೆವ್‌ಗೆ ಆಘಾತ ನೀಡಿದ ಸಿಲಿಚ್

ಪಿಟಿಐ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌: ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ರಷ್ಯಾದ ಡೇನಿಯಲ್ ಮೆಡ್ವೆಡೆವ್‌ ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಅಮೆರಿಕ ಓಪನ್ ಚಾಂಪಿಯನ್‌ ಮೆಡ್ವೆಡೆವ್‌, ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 2–6, 3–6, 2–6ರಿಂದ ಕ್ರೊವೇಷ್ಯಾದ ಮರಿನ್ ಸಿಲಿಚ್‌ ಎದುರು ಎಡವಿದರು. ಫಿಲಿಪ್‌ ಚಾಟ್ರಿಯರ್ ಅಂಗಣದಲ್ಲಿ ಸೋಮವಾರ ರಾತ್ರಿ 1 ತಾಸು 45 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗೆದ್ದ ಸಿಲಿಚ್‌ ಕ್ವಾರ್ಟರ್‌ಫೈನಲ್ ತಲುಪಿದರು.

ಪಂದ್ಯಕ್ಕೂ ಮೊದಲು ಟೂರ್ನಿಯಲ್ಲಿ ಒಂದೂ ಸೆಟ್‌ಅನ್ನು ಕೈಚೆಲ್ಲದ ಮೆಡ್ವೆಡೆವ್‌, 20ನೇ ಶ್ರೇಯಾಂಕದ ಕ್ರೊವೇಷ್ಯಾ ಆಟಗಾರನ ಎದುರು ನಿರಾಸೆಗೆ ಒಳಗಾದರು. ಸಿಲಿಚ್‌ ಐದು ಬಾರಿ ರಷ್ಯಾ ಆಟಗಾರನ ಸರ್ವ್ ಬ್ರೇಕ್ ಮಾಡಿದರು.

ಲೇಲಾಗೆ ಸೋಲುಣಿಸಿದ ಮಾರ್ಟಿನಾ: ಕೆನಡಾದ ಲೇಲಾ ಫರ್ನಾಂಡೀಸ್‌ ಅವರಿಗೆ ಆಘಾತ ನೀಡಿದ ಇಟಲಿಯ ಮಾರ್ಟಿನಾ ಟ್ರೆವಿಸನ್‌ ಟೂರ್ನಿಯ ಸೆಮಿಫೈನಲ್ ತಲುಪಿದರು.

ಟ್ರೆವಿಸನ್‌ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 59ನೇ ಸ್ಥಾನದಲ್ಲಿರುವ ಮಾರ್ಟಿನಾ, ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ 6-2, 6-7 (3/7), 6-3ರಿಂದ ಕೆನಡಾದ, 17ನೇ ಶ್ರೇಯಾಂಕದ ಆಟಗಾರ್ತಿಯನ್ನು ಮಣಿಸಿದರು.

ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲಿ ಮಾರ್ಟಿನಾ, ಲೇಲಾ ಅವರ ಸರ್ವ್ ಬ್ರೇಕ್ ಮಾಡಿದರು. ಅಮೆರಿಕ ಓಪನ್ ರನ್ನರ್ ಅಪ್ ಆಗಿರುವ ಕೆನಡಾ ಆಟಗಾರ್ತಿ ಐದನೇ ಗೇಮ್‌ ಬಳಿಕ ಬಲಪಾದದ ಗಾಯದಿಂದಾಗಿ ಚಿಕಿತ್ಸೆ ಪಡೆಯಬೇಕಾಯಿತು.

ಟೈಬ್ರೇಕ್‌ಗೆ ಸಾಗಿದ ಎರಡನೇ ಸೆಟ್‌ಅನ್ನು ಲೇಲಾ ತಮ್ಮದಾಗಿಸಿಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಬಲಶಾಲಿ ಸರ್ವ್‌ ಮತ್ತು ಮುಂಗೈ ಹೊಡೆತಗಳ ಮೂಲಕ ಇಟಲಿ ಆಟಗಾರ್ತಿ ಪಾರಮ್ಯ ಮೆರೆದರು. ಆರಂಭದಲ್ಲೇ 4–0ಯಿಂದ ಮುನ್ನಡೆದ ಅವರು ಸೆಟ್‌ ಮತ್ತು ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ, ಅಗ್ರ ಶ್ರೇಯಾಂಕದ ಪೋಲೆಂಡ್‌ನ ಇಗಾ ಸ್ವೆಟೆಕ್‌ ಸೋಲಿನ ಭೀತಿಯಿಂದ ಪಾರಾದರು. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅವರು 6-7 (5/7), 6-0, 6-2ರಿಂದ ಚೀನಾದ ಜೆಂಗ್ ಕಿನೆನ್ ಎದುರು ಪ್ರಯಾಸಕರ ಜಯ ಸಾಧಿಸಿ ಎಂಟರಘಟ್ಟ ತಲುಪಿದರು.

ಏಳು ವರ್ಷಗಳ ಬಳಿಕ ಗ್ರ್ಯಾಂಡ್‌ಸ್ಲಾಮ್ ಸೆಮಿಗೆ ಬೋಪಣ್ಣ: ಭಾರತದ ರೋಹನ್‌ ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ಮ್ಯಾಟ್‌ವೆ ಮಿಡಲ್‌ಕೂಪ್ ಜೋಡಿಯು ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಕನ್ನಡಿಗ ಬೋಪಣ್ಣ ಅವರು ಏಳು ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಸೆಮಿಫೈನಲ್ ತಲುಪಿದರು.

ಸೋಮವಾರ ರಾತ್ರಿ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ ಜಿದ್ದಾಜಿದ್ದಿನ ಪಂದ್ಯದಲ್ಲಿ ಬೋಪಣ್ಣ– ಮಿಡಲ್‌ಕೂಪ್‌ 4-6, 6-4, 7-6 (3)ರಿಂದ ಬ್ರಿಟನ್‌ನ ಲಾಯ್ಡ್‌ ಗ್ಲಾಸ್‌ಪೂಲ್ ಮತ್ತು ಹೆನ್ರಿ ಹೆಲಿವೊವಾರ ಅವರನ್ನು ಮಣಿಸಿದರು. 

2015ರ ವಿಂಬಲ್ಡನ್ ಟೂರ್ನಿಯಲ್ಲಿ ಬೋಪಣ್ಣ ಕೊನೆಯ ಬಾರಿ ಸೆಮಿಫೈನಲ್ ತಲುಪಿದ್ದರು. ಆಗ ಅವರು ರುಮೇನಿಯಾದ ಫ್ಲೊರಿನ್‌ ಮೆರ್ಗಿಯಾ ಅವರೊಂದಿಗೆ ಆಡಿದ್ದರು.

42 ವರ್ಷದ ಬೋಪಣ್ಣ ಮತ್ತು ಮಿಡಲ್‌ಕೂಪ್ ಮುಂದಿನ ಪಂದ್ಯದಲ್ಲಿ ಮಾರ್ಸೆಲೊ ಅರೆವಾಲೊ ಮತ್ತು ಜೀನ್ ಜೂಲಿಯನ್ ರೋಜರ್ ಅವರನ್ನು ಎದುರಿಸುವರು. ಗುರುವಾರ ಈ ಪಂದ್ಯ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು