ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಉಳಿಸಿ ಹೋದ ನೆನಪುಗಳು..

ಪಿಂಚಣಿ ಹಣವನ್ನೂ ಅಥ್ಲೆಟಿಕ್ಸ್‌ ಚಟುವಟಿಕೆಗಳಿಗೆ ಬಳಸುತ್ತಿದ್ದ ‘ಕೋಚ್‌ಗಳ ಕೋಚ್‌’ ಎಸ್‌.ಎಸ್‌. ಅಗಡಿ
Last Updated 26 ಆಗಸ್ಟ್ 2020, 8:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವರ್ಷಗಳ ಹಿಂದೆ ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಆಯೋಜನೆಯಾಗಿತ್ತು. ಆ ವಿಶ್ವವಿದ್ಯಾಲಯದ ಅಥ್ಲೀಟ್‌ಗಳಿಗೆ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಆಯೋಜಿಸಿದ್ದ ಮೊದಲ ಕ್ರೀಡಾಕೂಟ ಅದಾಗಿತ್ತು. ಇದರಿಂದ ಮಹಿಳಾ ಅಥ್ಲೀಟ್‌ಗಳು ಹೇಗೆ ಓಡುತ್ತಾರೆ ಎನ್ನುವ ಕುತೂಹಲ ಅನೇಕ ಜನರಲ್ಲಿತ್ತು.

ಹೀಗೆ ‌ಕುತೂಹಲದಿಂದ ಕಾಯುತ್ತಿದ್ದವರಲ್ಲಿ ಎಸ್‌.ಎಸ್‌. ಅಗಡಿ ಕೂಡ ಒಬ್ಬರಾಗಿದ್ದರು. ಆಗ ಅವರ ವಯಸ್ಸು 76! ಭಾರತ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಾಗಿದ್ದ ಅವರು ಜಿಲ್ಲೆಯಲ್ಲಿ ಎಲ್ಲಿಯೇ ಅಥ್ಲೆಟಿಕ್‌ ಕೂಟಗಳು ನಡೆದರೂ ಹಾಜರಾಗುತ್ತಿದ್ದರು. ಯುವ ಅಥ್ಲೀಟ್‌ಗಳ ಬೆನ್ನು ತಟ್ಟಿ ಹುರಿದುಂಬಿಸುತ್ತಿದ್ದರು. ಬಿದ್ದಾಗ ಸಮಾಧಾನ ಹೇಳಿ ಇನ್ನಷ್ಟು ಅಭ್ಯಾಸ ಮಾಡು ಎಂದು ಸ್ಫೂರ್ತಿ ತುಂಬುತ್ತಿದ್ದರು.

ವಿಜಯಪುರ, ಮೈಸೂರು, ಕಲಬುರ್ಗಿ ಮತ್ತು ಧಾರವಾಡದಲ್ಲಿ ಕೆಲಸ ಮಾಡಿರುವ ಅವರು ಕೆಲ ಕಾಲ ಪಾಂಡಿಚೇರಿಯಲ್ಲಿಯೂ ಅಥ್ಲೆಟಿಕ್‌ ಕೋಚ್‌ ಆಗಿದ್ದರು. ರಾಜ್ಯದಲ್ಲಿ ಎಲ್ಲ ಕಡೆಯೂ ಅವರಿಗೆ ದೊಡ್ಡ ಶಿಷ್ಯ ಬಳಗವೇ ಇದೆ. ಧಾರವಾಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಅಥ್ಲೀಟ್‌ ಕೋಚ್‌ಗಳೆಲ್ಲ ಅಗಡಿ ಅವರ ಗರಡಿಯಲ್ಲಿ ಪಳಗಿದ ಶಿಷ್ಯಂದಿರು. ಬುಧವಾರ ಬೆಳಿಗ್ಗೆ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಅವರು ಅನೇಕ ಸುಂದರ ನೆನಪುಗಳನ್ನು ಉಳಿಸಿ ಹೋಗಿದ್ದಾರೆ.

ಧಾರವಾಡದ ಸಾಯ್‌ ಕೇಂದ್ರದಲ್ಲಿ ಅಗಡಿ ಅವರ ಬಳಿ ತರಬೇತಿ ಪಡೆದಿರುವ ಅಂತರರಾಷ್ಟ್ರೀಯ ಅಥ್ಲೀಟ್‌ ಹುಬ್ಬಳ್ಳಿಯ ವಿಲಾಸ ನೀಲಗುಂದ್‌ ’ಅಗಡಿ ಸರ್‌ ಎಂದರೆ ಶಿಸ್ತು. ಅವರು ಶಿಸ್ತಿನ ಸಿಪಾಯಿಯಾಗಿದ್ದರಿಂದಲೇ ನಮ್ಮಲ್ಲೂ ಶಿಸ್ತು ಬೆಳೆಯಿತು. ತಮ್ಮ ಸುಪರ್ದಿಗೆ ಬಂದ ಕ್ರೀಡಾಪಟುಗಳಿಗೆ ಉತ್ತಮವಾಗಿ ಮಾರ್ಗದರ್ಶನ ಮಾಡಿ ಅವರಲ್ಲಿ ಕ್ರೀಡಾ ಬದ್ಧತೆ ಬೆಳಸುತ್ತಿದ್ದರು. 1998ರಿಂದ 2001ರ ಅವಧಿಯಲ್ಲಿ ಅವರ ಬಳಿ ಸಾಯ್‌ನಲ್ಲಿ ತರಬೇತಿ ಪಡೆಯುವಾಗ ರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತು. ಅವರ ಬಳಿ ತರಬೇತುಗೊಂಡವರಲ್ಲಿ ಶೇ 90ರಷ್ಟು ಕ್ರೀಡಾಪಟುಗಳು ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾರೆ’ ಎಂದು ನೆನಪಿಸಿಕೊಂಡರು.

ಅಂತರರಾಷ್ಟ್ರೀಯ ಅಥ್ಲೀಟ್‌ ಬೆಳಗಾವಿಯ ಬಿ.ಜಿ. ನಾಗರಾಜ 1999ರಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಾಖಲೆಯೊಂದಿಗೆ 100 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿ ತಮಿಳುನಾಡಿನ ಸೇಲಂನಲ್ಲಿ ಆಯೋಜನೆಯಾಗಿದ್ದ ರಾಷ್ಟ್ರೀಯ ಅಥ್ಲೆಟಿಕ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಇದೇ ಕ್ರೀಡಾಕೂಟಕ್ಕೆ ಕರ್ನಾಟಕ ತಂಡದ ಕೋಚ್‌ ಆಗಿದ್ದ ಎಸ್‌.ಎಸ್‌. ಅಗಡಿ ಅವರು ನಾಗರಾಜ ಓಟದ ಚುರುಕುತನ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಖುದ್ದು ಅಗಡಿ ಅವರೇ ಆಹ್ವಾನ ನೀಡಿ ಧಾರವಾಡದ ಸಾಯ್‌ ಕೇಂದ್ರಕ್ಕೆ ಬರುವಂತೆ ಹೇಳಿದ್ದರು. 2001ರಲ್ಲಿ ಧಾರವಾಡಕ್ಕೆ ಬಂದ ನಾಗರಾಜ ಎರಡೇ ವರ್ಷಗಳಲ್ಲಿ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದರು.

2003ರಲ್ಲಿ ಇರಾನ್‌ನಲ್ಲಿ ನಡೆದ ಒಳಾಂಗಣ ಅಥ್ಲೆಟಿಕ್‌ ಕೂಟ ಮತ್ತು 2004ರಲ್ಲಿ ಪಾಕಿಸ್ತಾನ ಇಸ್ಲಾಮಾಬಾದ್‌ನಲ್ಲಿ ಜರುಗಿದ ಸ್ಯಾಫ್‌ ಕ್ರೀಡಾಕೂಟದ 4X100 ಮೀ. ರಿಲೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದೆಲ್ಲವೂ ಸಾಧ್ಯವಾಗಿದ್ದು ಅಗಡಿ ಸರ್‌ ಮಾರ್ಗದರ್ಶನದಿಂದ ಎಂದು ನಾಗರಾಜ ನೆನಪಿಸಿಕೊಳ್ಳುತ್ತಾರೆ.

’ಕ್ರೀಡಾ ಬದುಕಿನಲ್ಲಿ ಸಾಧನೆ ಮಾಡಲು ಕಾರಣರಾಗಿದ್ದೇ ಅಗಡಿ ಸರ್‌. ಅವರು ನನ್ನಲ್ಲಿ ಸಾಧನೆಯ ಹುಮಸ್ಸು ತುಂಬಿದರು. ಬದುಕಿನಲ್ಲಿ ಬದ್ಧತೆ ಕಲಿಸಿಕೊಟ್ಟರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಅವರು ಹಾಕಿದ ಬುನಾದಿಯೇ ವೇದಿಕೆಯಾಯಿತು. ದಿಢೀರನೆ ಸಾವಿನ ಸುದ್ದಿ ಕೇಳಿ ಆಘಾತವಾಯಿತು’ ಎಂದು ಭಾವುಕರಾದರು.

ಅಗಡಿ ಅವರ ಗರಡಿಯಲ್ಲಿ ಪಳಗಿದ ಮಹಿಳಾ ಅಥ್ಲೀಟ್‌ ಮಹೇಶ್ವರಿ ಉದಗಟ್ಟಿ ’ಜಿಲ್ಲೆಯಲ್ಲಿ ಯಾವುದೇ ಅಥ್ಲೆಟಿಕ್ ಕ್ರೀಡಾಕೂಟ ನಡೆದರೂ ಅಗಡಿ ಸರ್‌ ಇದ್ದರೆ ಸಂಘಟಕರಿಗೆ ಆನೆಬಲ ಬಂದಂತಾಗುತ್ತಿತ್ತು. ಚಿಕ್ಕ ವಯಸ್ಸಿನಿಂದಲೇ ಅವರ ಬಳಿ ತರಬೇತಿ ಪಡೆದಿದ್ದೇನೆ. ಅವರು ಮನೆ ಮಗಳಂತೆ ನನ್ನನ್ನು ನೋಡಿಕೊಂಡಿದ್ದಾರೆ. ಅವರಿಲ್ಲ ಎನ್ನುವ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಕಣ್ಣೀರಾದರು.

ಕ್ರೀಡಾಂಗಣ ಉಳಿವಿಗೆ ಇಳಿ ವಯಸ್ಸಿನಲ್ಲಿಯೂ ಹೋರಾಟ

ಧಾರವಾಡ ಜಿಲ್ಲೆಯಲ್ಲಿರುವ ಏಕೈಕ ಸಿಂಥೆಟಿಕ್‌ ಟ್ರ್ಯಾಕ್‌ ಕ್ರೀಡಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ ಅಗಡಿ ಅವರು ಕೆಂಡಾಮಂಡಲವಾಗುತ್ತಿದ್ದರು.

ಜಿಲ್ಲಾಡಳಿತದವರು ಸಿಂಥೆಟಿಕ್‌ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆಗ ಎಲ್ಲೆಂದರಲ್ಲಿ ಶಾಮಿಯಾನಾ, ಕುರ್ಚಿಗಳನ್ನು ಹಾಕುತ್ತಾರೆ. ಸಾಕಷ್ಟು ಜನ ಟ್ರ್ಯಾಕ್‌ ಮೇಲೆ ಮನಬಂದಂತೆ ಓಡಾಡುತ್ತಾರೆ. ಇದೆಲ್ಲ ಹಾಳಾದರೆ ಕ್ರೀಡಾಪಟುಗಳು ಎಲ್ಲಿ ಅಭ್ಯಾಸ ಮಾಡಬೇಕು ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸುತ್ತಿದ್ದರು.

ಸಮಾನ ಮನಸ್ಕರ ಹಾಗೂ ಕ್ರೀಡಾಪಟುಗಳ ಜೊತೆ ಸೇರಿ ಧಾರವಾಡ ಜಿಲ್ಲೆಯ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಮಿನಿ ಒಲಿಂಪಿಕ್ಸ್‌ ಆಯೋಜಿಸುತ್ತಿದ್ದರು. ಈ ಕ್ರೀಡಾಕೂಟ ನಡೆಸಲು ತಮ್ಮ ಪಿಂಚಣಿ ಹಣ ವಿನಿಯೋಗಿಸುತ್ತಿದ್ದರು. ಇವರು ಸಾಯ್‌ ಕೇಂದ್ರದ ಕೋಚ್‌ ಆಗಿದ್ದ ಅವಧಿಯಲ್ಲಿ ಉದ್ಯಾನ ನಿರ್ಮಾಣಕ್ಕೆ ಒತ್ತು ಕೊಟ್ಟಿದ್ದರು. ಪರಿಸರದ ಬಗ್ಗೆ ಅಪಾರ ಪ್ರೀತಿಯನ್ನೂ ಹೊಂದಿದ್ದರು ಎಂದು ಅವರ ಶಿಷ್ಯರು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT