ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಪ್ಪ ಆತ್ಮೀಯರ ಮನದ ಭಾವಬಿಂದು

Last Updated 23 ಜೂನ್ 2019, 19:45 IST
ಅಕ್ಷರ ಗಾತ್ರ

ಗ್ರಾಮೀಣ ಪ್ರತಿಭೆಗಳ ಹೊಸ ಬೆಳಕು

ನಾನು ಉತ್ತರ ಕನ್ನಡ ಜಿಲ್ಲೆಯ ಅಂಕೋಲದವನು. 1974ರಲ್ಲಿ ಬೆಂಗಳೂರಿಗೆ ಬಂದಾಗ ಅಥ್ಲೀಟ್‌ಗಳ ಭರವಸೆಯಾಗಿದ್ದ ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನಲ್ಲಿ ಕೋಚ್ ಆಗಿದ್ದವರು ಲಿಂಗಪ್ಪ. ಅವರು ಅಲ್ಲಿ 50ಕ್ಕೂ ಹೆಚ್ಚು ಅಥ್ಲೀಟ್‌ಗಳಿಗೆ ತರಬೇತಿ ನೀಡುತ್ತಿದ್ದರು. ಗ್ರಾಮೀಣ ಪ್ರದೇಶದಿಂದ ಬಂದ ನನ್ನಂಥವರಿಗೆ ಅವರು ಭರವಸೆಯ ಬೆಳಕಾಗಿದ್ದರು. ಓಡುವ ಸಾಮರ್ಥ್ಯವಿದ್ದರೂ ತಂತ್ರಗಳು ಮತ್ತು ಅಥ್ಲೆಟಿಕ್ಸ್‌ನ ವಿವಿಧ ಮಗ್ಗುಲುಗಳ ಬಗ್ಗೆ ತಿಳಿಯದೇ ಬೆಂಗಳೂರಿಗೆ ಬರುತ್ತಿದ್ದವರಿಗೆ ಅವರು ಮಾಹಿತಿಯ ಕಣಜವಾಗಿದ್ದರು. ನಾನು ಅವರ ಬಳಿ ತರಬೇತಿ ಪಡೆದದ್ದು ಕೇವಲ ಒಂದು ವರ್ಷ. ಆರಂಭದಲ್ಲಿ ಲಭಿಸಿದ ಆ ತರಬೇತಿ ವೃತ್ತಿ ಬದುಕಿಗೆ ಬಹಳ ಸಹಕಾರಿಯಾಯಿತು.

ಲಿಂಗಪ್ಪ ಅವರಿಗೆ ತರಬೇತಿಯಲ್ಲಿ ಅವರದೇ ಆದ ಶಿಸ್ತಿನ ಸೂತ್ರವೊಂದಿತ್ತು. ನಿಯಮಗಳ ಸೀಮೆ ದಾಟಿ ಆವರು ಏನನ್ನೂ ಮಾಡುತ್ತಿರಲಿಲ್ಲ; ಯಾರಿಗೂ ಮಣೆ ಹಾಕುತ್ತಿರಲಿಲ್ಲ. ಈ ಕಾರಣದಿಂದಲೇ ಕೆಲವೊಮ್ಮೆ ಭಾರತ ಅಥ್ಲೆಟಿಕ್ ಫೆಡರೇಷನ್ ಅಧಿಕಾರಿಗಳ ಜೊತೆ ಅವರಿಗೆ ಕಲಹವಾಗುತ್ತಿತ್ತು. ಅವರ ವಾದವೇ ಸರಿ ಎಂದು ಮನದಟ್ಟಾದ ನಂತರ ಅಧಿಕಾರಿಗಳೂ ಸುಮ್ಮನಾಗುತ್ತಿದ್ದರು. ಯಾರಿಗೂ ಯಾವುದರಲ್ಲೂ ತಾರತಮ್ಯ ಮಾಡದೇ ಇದ್ದದ್ದು ಅವರ ಮತ್ತೊಂದು ಗುಣ. ಅವರಿಗೆ ಕ್ರೀಡೆ ಎಂದರೆ ಕೇವಲ ಸಾಮರ್ಥ್ಯ ಪ್ರದರ್ಶನ ಮಾತ್ರವಾಗಿರಲಿಲ್ಲ. ಕ್ರೀಡೆಯನ್ನು ಅವರು ಸೇವೆ, ಶಿಸ್ತು ಎಂದು ಪರಿಗಣಿಸುತ್ತಿದ್ದರು.

ಒಳ್ಳೆಯ ಗೆಳೆಯ; ಉತ್ತಮ ಸಲಹೆಗಾರ

ಲಿಂಗಪ್ಪ ನನಗೆ ಒಳ್ಳೆಯ ಗೆಳೆಯ ಆಗಿದ್ದರು. ಅನೇಕ ಕೂಟಗಳಿಗೆ ಒಟ್ಟಾಗಿ ಹೋಗಿದ್ದೇವೆ. ಕಂಠೀರವ ಕ್ರೀಡಾಂಗಣದಲ್ಲಿ ಮೂರೂವರೆ ದಶಕಗಳ ಕಾಲ ಕಾಣಸಿಗುತ್ತಿದ್ದರು. ಈಗ ಅವರಿಲ್ಲ ಎಂದು ಊಹಿಸಿಕೊಳ್ಳಲಾಗುತ್ತಿಲ್ಲ. ವಯೋಸಹಜ ನಿಶ್ಶಕ್ತಿ ಕಾಣಿಸಿಕೊಂಡ ನಂತರ ನೇರವಾಗಿ ತರಬೇತಿಗೆ ಇಳಿಯುತ್ತಿರಲಿಲ್ಲ. ನನ್ನ ಬಳಿಗೆ ಬಂದು ನನ್ನ ಶಿಷ್ಯಂದಿರ ಪ್ರತಿಭೆಯನ್ನು ನೋಡುತ್ತಿದ್ದರು, ಪ್ರೋತ್ಸಾಹಿಸುತ್ತಿದ್ದರು. ನಾನು ಅಳವಡಿಸಿಕೊಂಡಿರುವ ಕೆಲವು ವಿಧಾನಗಳ ಬಗ್ಗೆ ಚರ್ಚಿಸಿ ಸಲಹೆ ನೀಡುತ್ತಿದ್ದರು. ಅವುಗಳಲ್ಲಿ ಉತ್ತಮವಾದುದನ್ನು ನಾನು ಸ್ವೀಕರಿಸುತ್ತಿದ್ದೆ. ಪ್ರತಿವರ್ಷ ಅವರ ಜನ್ಮದಿನ ಆಚರಿಸುವುದೆಂದರೆ ನಮಗೆಲ್ಲ ಸಂಭ್ರಮವೋ ಸಂಭ್ರಮ. ಆ ದಿನ ಕಂಠೀರವ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ. ಮಾಸ್ಟರ್ ಅಥ್ಲೀಟ್‌ಗಳಿಂದ ಹಿಡಿದು ಕಿರಿಯ ಕ್ರೀಡಾಪಟುಗಳ ವರೆಗಿನ ಎಲ್ಲ ವಯೋಮಾನದವರೂ ಅಲ್ಲಿ ಸೇರುತ್ತಿದ್ದರು. ಈ ವರ್ಷ ಕೊನೆಯ ಜನ್ಮದಿನ ಆಚರಿಸಿದೆವು. ಅನಾರೋಗ್ಯದ ನಡುವೆಯೂ ಬಂದು ಖುಷಿ ಪಟ್ಟಿದ್ದರು.

ನಿಷ್ಠುರ ಕೋಚ್; ಮೃದು ಹೃದಯಿ

ತರಬೇತಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದ್ದ ಲಿಂಗಪ್ಪ ಅವರು ಕೋಚಿಂಗ್‌ನ ಶಿಶ್ತಿನಲ್ಲಿ ತುಂಬ ನಿಷ್ಠುರರಾಗಿದ್ದರು. ಆದರೆ ಅವರದು ಮಾತೃ ಹೃದಯವಾಗಿತ್ತು. ಅಥ್ಲೀಟ್‌ಗಳಿಗೆ ಎಲ್ಲ ರೀತಿಯಲ್ಲೂ ನೆರವಾಗಲು ಅವರು ಸದಾ ಸಿದ್ದರಿರುತ್ತಿದ್ದರು. ನಾನು ಅವರ ನೇರ ಶಿಷ್ಯನಾಗಿರಲಿಲ್ಲ. ಆದರೆ 1962ರಲ್ಲಿ ನಡೆದ ಕುತೂಹಲಕಾರಿ ಪ್ರಸಂಗವೊಂದು ಇನ್ನೂ ನೆನಪಿದೆ. ಆಗ ನಾನು ದಕ್ಷಿಣ ವಲಯ ಕ್ರೀಡಾಕೂಟದ ತರಬೇತಿ ಶಿಬಿರದಲ್ಲಿದ್ದೆ. ಕಾಲು ಉಳುಕಿ ಸಂಕಷ್ಟದಲ್ಲಿದ್ದೆ. ಇದು ತಿಳಿದ ಲಿಂಗಪ್ಪ ಅವರು ನನ್ನನ್ನು ಬೆಂಗಳೂರಿನಲ್ಲಿರುವ ಪುತ್ತೂರಿನ ನಾಟಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಲಭಿಸಿದ ಚಿಕಿತ್ಸೆ ನನ್ನ ನೋವನ್ನು ಬೇಗನೇ ಗುಣಪಡಿಸಿತು. ಐದು ದಿನಗಳ ನಂತರ ನಾನು 400 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದೆ. ಅವರ ಶಿಸ್ತು, ತರಬೇತಿಯ ವಿಧಾನ ಎಲ್ಲವೂ ಅನುಕರಣೀಯವಾಗಿದ್ದವು.

ಸ್ಟಾರ್ಟರ್ ಆಗಿದ್ದರೆ ಎಲ್ಲಿಲ್ಲದ ಭಯ

ಅತ್ಯಂತ ಶಿಸ್ತಿನ ಕೋಚ್ ಆಗಿದ್ದ ಲಿಂಗಪ್ಪ ಅವರನ್ನು ಮೊದಲು ಭೇಟಿಯಾದಾಗ ನನಗೆ ಒಂಬತ್ತರ ಹರಯ. ಅವರ ಬಳಿ ನೇರವಾಗಿ ತರಬೇತಿ ಪಡೆದದ್ದು ಸ್ವಲ್ಪ ಕಾಲ ಮಾತ್ರ. ಅವರು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಓಟದ ಸ್ಪರ್ಧೆಯಲ್ಲಿಸ್ಟಾರ್ಟರ್ ಆಗಿದ್ದರಂತೂ ನಮಗೆಲ್ಲ ಎಲ್ಲಿಲ್ಲದ ಭಯ. ಸ್ವಲ್ಪ ತಪ್ಪಿದರೂ ಯಾವುದೇ ಮುಲಾಜಿಲ್ಲದೆ ಬೈಯುತ್ತಿದ್ದರು. ಓಟ ಶುರುವಾಗುವವರೆಗೂ ಆತಂಕದಲ್ಲೇ ಇರುತ್ತಿದ್ದೆವು.

ನನ್ನ ವೃತ್ತಿಜೀವನದ ಉದ್ದಕ್ಕೂ ಲಿಂಗಪ್ಪ ಅವರು ದಾರಿದೀಪ ಆಗಿದ್ದರು. ಅವರ ಬತ್ತದ ಉತ್ಸಾಹ ಬೆರಗು ಮೂಡಿಸುತ್ತಿತ್ತು. 90 ವರ್ಷ ದಾಟಿದ ನಂತರವೂ ಮೈದಾನದಲ್ಲಿ ನಿತ್ಯವೂ ಹಾಜರಾಗುತ್ತಿದ್ದ ಅವರು ಅರ್ಪಣಾ ಮನೋಭಾವಕ್ಕೆ ಆದರ್ಶವಾಗಿಸಿಕೊಳ್ಳಬಹುದಾದ ವ್ಯಕ್ತಿಯಾಗಿದ್ದರು.

ಅಥ್ಲೀಟ್‌ಗಳನ್ನು ಬೆಳೆಸಿದ ಮಹಾ ಗುರು

ಲಿಂಗಪ್ಪ ಅಸಾಮಾನ್ಯ ಕೋಚ್ ಆಗಿದ್ದರು. ಹೀಗಾಗಿ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತರಲು ಅವರಿಗೆ ಸಾಧ್ಯವಾಯಿತು. ಶ್ರಮ ಜೀವಿಯಾಗಿದ್ದ ಅವರು ತಮ್ಮ ನಿಷ್ಠೆಯನ್ನು ಉಳಿಸುವುದಕ್ಕಾಗಿ ಮೇರೆ ಮೀರಿ ಪ್ರಯತ್ನಿಸುತ್ತಿದ್ದರು. ದೈಹಿಕ ಕ್ಷಮತೆ ಮತ್ತು ವೇಗಕ್ಕೆ ಅತಿ ಹೆಚ್ಚು ಆದ್ಯತೆ ನೀಡುತ್ತಿದ್ದ ಲಿಂಗಪ್ಪ ಶಿಸ್ತಿನ ವ್ಯಕ್ತಿಯಾಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ಮನುಷ್ಯರಾಗಿದ್ದರು.

ದಣಿವಿರಲಿಲ್ಲ; ವಯಸ್ಸಿನ ಹಂಗೂ ಇರಲಿಲ್ಲ

ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ರಾಷ್ಟ್ರ –ರಾಜ್ಯದ ಹೆಸರು ಬೆಳಗಿದ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಬೆಳೆಸಿದವರು ಎನ್.ಲಿಂಗಪ್ಪ. ಮ್ಯಾರಥಾನ್ ಓಟಗಾರ ಡಿ.ವೈ.ಬಿರಾದಾರ, 400 ಮೀಟರ್ಸ್ ಓಟಗಾರರಾದ ಪಿ.ಸಿ.ಪೊನ್ನಪ್ಪ, ಉದಯ ಪ್ರಭು, ಡೇವಿಡ್ ಪ್ರೇಮನಾಥ್, ವಂದನಾ ರಾವ್, ಸ್ಪ್ರಿಂಟರ್ ಗಳಾದ ಅಶ್ವನಿ ನಾಚಪ್ಪ, ಕೆ.ಎನ್.ಸುಂದರರಾಜ ಶೆಟ್ಟಿ, ಎ.ಪಿ.ರಾಮಸ್ವಾಮಿ, ರಾಬಿನ್ ಪೌಲ್, ಲಾಂಗ್ ಜಂಪ್ ಪಟು ಸತೀಶ್ ಪಿಳ್ಳೆ, ಕೆ.ಸಿ.ಶಂಕರ್, ಉಮಾದೇವಿ ಮುಂತಾದ ಅನೇಕರು ನೇರವಾಗಿ ಅಥವಾ ಪರೋಕ್ಷವಾಗಿ ಲಿಂಗಪ್ಪ ಅವರ ತರಬೇತಿಯ ‘ಶಿಸ್ತಿ’ಗೆ ಒಳಗಾದವರು.

ಲಿಂಗಪ್ಪ ಅವರನ್ನು ಸ್ಮರಿಸುವಾಗ ಎಲ್ಲರೂ ಹೇಳುವ ಮೊದಲ ಮಾತು, ಅವರಿಗೆ ದಣಿವಿರಲಿಲ್ಲ ಮತ್ತು ವಯಸ್ಸಿನ ಹಂಗೂ ಇರಲಿಲ್ಲ ಎಂಬುದು. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಂಠೀರವ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಹಾಜರಾಗುತ್ತಿದ್ದ ಲಿಂಗಪ್ಪ ಅವರು ವಯಸ್ಸು 90 ದಾಟಿದ ನಂತರವೂ ಕಿಲೋಮೀಟರ್ ಗಟ್ಟಲೆ ದೂರದಿಂದ ಬೈಕ್ ನಲ್ಲೇ ಬರುತ್ತಿದ್ದರು. ಆರು ದಶಕಗಳ ಕಾಲ ಕೋಚ್ ಆಗಿದ್ದ ಅವರು ಸತತ ನಾಲ್ಕು ಬಾರಿ ಒಲಿಂಪಿಕ್ಸ್ ಮತ್ತು ಮೂರು ಬಾರಿ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ಅಥ್ಲೀಟ್ ಗಳನ್ನು ಸಿದ್ಧಗೊಳಿಸಿದ ಖ್ಯಾತಿ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT