ಶನಿವಾರ, ಡಿಸೆಂಬರ್ 4, 2021
23 °C
ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಉತ್ತಮ ಸಾಮರ್ಥ್ಯದ ನಿರೀಕ್ಷೆಯಲ್ಲಿ ಭಾರತ

ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಶಿವ ಥಾಪಾ, ಸಂಜೀತ್‌ ಮೇಲೆ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಲ್‌ಗ್ರೇಡ್‌: ಬಹುತೇಕ ಹೊಸಬರನ್ನೇ ಒಳಗೊಂಡಿರುವ ಭಾರತ ಬಾಕ್ಸಿಂಗ್ ತಂಡವು ಉತ್ತಮ ಸಾಮರ್ಥ್ಯದ ನಿರೀಕ್ಷೆಯೊಂದಿಗೆ ಎಐಬಿಎ ವಿಶ್ವ ಚಾಂಪಿಯನ್‌ಷಿಪ್‌ ಕಣಕ್ಕಿಳಿಯಲು ಸಜ್ಜಾಗಿದೆ. ಸೋಮವಾರ ಇಲ್ಲಿ ಆರಂಭವಾಗುವ ಚಾಂಪಿಯನ್‌ಷಿಪ್‌ನಲ್ಲಿ ಹಿಂದಿನ ಸಾಧನೆ ಮೀರುವ ಛಲದಲ್ಲಿದೆ.

2019ರ ಆವೃತ್ತಿಯಲ್ಲಿ ದೇಶಕ್ಕೆ ಮೊದಲ ಬಾರಿ ಬೆಳ್ಳಿ ಪದಕವನ್ನು ಗೆದ್ದುಕೊಟ್ಟಿದ್ದ ವಿಶ್ವದ ಅಗ್ರಕ್ರಮಾಂಕದ ಬಾಕ್ಸರ್‌ ಅಮಿತ್ ಪಂಗಲ್ ಮತ್ತು ಅದೇ ವರ್ಷ ಕಂಚು ವಿಜೇತ ಮನೀಷ್‌ ಕೌಶಿಕ್ ಅವರು ಈ ಬಾರಿಯ ಕೂಟಕ್ಕೆ ಲಭ್ಯರಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಾಧಾರಣ ಸಾಮರ್ಥ್ಯ ತೋರಿದ್ದ ಇವರಿಬ್ಬರು ವಿರಾಮ ಬಯಸಿದ್ದು, ಕಣಕ್ಕಿಳಿಯುತ್ತಿಲ್ಲ.

ಏಷ್ಯನ್ ಪದಕ ವಿಜೇತ ದೀಪಕ್ ಕುಮಾರ್‌ (51 ಕೆಜಿ ವಿಭಾಗ), ಶಿವ ಥಾಪಾ (63.5 ಕೆಜಿ) ಮತ್ತು ಸಂಜೀತ್‌ (92 ಕೆಜಿ) ತಂಡದಲ್ಲಿರುವ ಅನುಭವಿಗಳಾಗಿದ್ದು ಇವರ ಮೇಲೆ ನಿರೀಕ್ಷೆಯ ಭಾರವಿದೆ. ಇದೇ 20ರಂದು ತಂಡವು ಸರ್ಬಿಯಾದ ರಾಜಧಾನಿಗೆ ಬಂದಿಳಿದಿದೆ.

ಸಂಜೀತ್ ಅವರು ಹಾಲಿ ಏಷ್ಯನ್ ಚಾಂಪಿಯನ್ ಆಗಿದ್ದರೆ, ದೀಪಕ್‌ ಈ ಹಿಂದೆ ಬೆಳ್ಳಿಪದಕ ಗೆದ್ದುಕೊಂಡಿದ್ದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಶಿವ ಥಾಪಾ ದಾಖಲೆಯ ಐದು ಬಾರಿ ‘ಪೋಡಿಯಂ ಫಿನಿಶ್‌‘ ಮಾಡಿದ್ದಾರೆ. ಇವರೆಲ್ಲರ ಪೈಕಿ ಶಿವ ಅವರಿಗೆ ಮಾತ್ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ ಅನುಭವವಿದೆ. 2015ರ ಆವೃತ್ತಿಯಲ್ಲಿ ಅವರಿಗೆ ಬೆಳ್ಳಿ ಪದಕ ಒಲಿದಿತ್ತು.

ತಂಡದಲ್ಲಿರುವ ಇನ್ನುಳಿದ 10 ಮಂದಿ ನೂತನ ರಾಷ್ಟ್ರೀಯ ಚಾಂಪಿಯನ್‌ಗಳು. ಇವರೊಂದಿಗೆ ತಂಡದ ಹೈಫರ್ಪಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನೀವಾ, ಮುಖ್ಯ ಕೋಚ್‌ ನರೇಂದ್ರ ರಾಣಾ ಮತ್ತು ಸಹಾಯಕ ಕೋಚ್‌ಗಳಲ್ಲಿ ಒಬ್ಬರಾದ, ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಎಲ್‌. ದೇವೇಂದ್ರೊ ಸಿಂಗ್ ಇದ್ದಾರೆ.

ವಿಶ್ವ ಕೂಟಕ್ಕೆ ಸಜ್ಜುಗೊಳ್ಳಲು ಬಾಕ್ಸರ್‌ಗಳಿಗೆ ಸಿಕ್ಕ ಸಮಯ ತುಂಬಾ ಕಡಿಮೆ. ರಾಷ್ಟ್ರೀಯ ಚಾಂಪಿಯನ್‌ಷಿಪ್ ಬಳಿಕ ಅವರು ಕೇವಲ 10 ದಿನಗಳ ಕಾಲ ಅಭ್ಯಾಸ ನಡೆಸಿದ್ದಾರೆ.

105 ರಾಷ್ಟ್ರಗಳ 600ಕ್ಕೂ ಹೆಚ್ಚು ಬಾಕ್ಸರ್‌ಗಳು ಚಾಂಪಿಯನ್‌ಷಿಪ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ವಿಶ್ವಚಾಂಪಿಯನ್‌ಗಳಾದ ಆ್ಯಂಡಿ ಕ್ರೂಜ್ ಗೋಮೆಜ್‌, ರೇನಿಯಲ್ ಇಗ್ಲೇಸಿಯಸ್‌, ಅರ್ಲೆನ್‌ ಲೋಪೆಜ್‌, ಜೂಲಿಯೊ ಲಾ ಕ್ರೂಜ್‌ ಮತ್ತು ಲಜಾರೊ ಅಲ್ವಾರೆಜ್‌ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರೆಲ್ಲರೂ ಕ್ಯೂಬಾವನ್ನು ಪ್ರತಿನಿಧಿಸಲಿದ್ದಾರೆ.

ಭಾರತ ಬಾಕ್ಸಿಂಗ್‌ ತಂಡ

ಗೋವಿಂದ್‌ ಸಾಹ್ನಿ (48 ಕೆಜಿ ವಿಭಾಗ), ದೀಪಕ್‌ಕುಮಾರ್‌ (51 ಕೆಜಿ), ಆಕಾಶ್‌ (54 ಕೆಜಿ), ರೋಹಿತ್ ಮೋರ್‌ (57 ಕೆಜಿ), ವೀರೇಂದ್ರ ಸಿಂಗ್‌ (60 ಕೆಜಿ), ಶಿವ ಥಾಪಾ (63.5 ಕೆಜಿ), ಆಕಾಶ್‌ (67 ಕೆಜಿ),  ನಿಶಾಂತ್ ದೇವ್‌ (71 ಕೆಜಿ), ಸುಮಿತ್‌ (75 ಕೆಜಿ), ಸಚಿನ್‌ ಕುಮಾರ್‌ (80 ಕೆಜಿ), ಲಕ್ಷ್ಯ (86 ಕೆಜಿ), ಸಂಜೀತ್‌ (92 ಕೆಜಿ) ಮತ್ತು ನರೇಂದ್ರ ಸಿಂಗ್‌ (+92 ಕೆಜಿ)

ಬಹುಮಾನ ಮೊತ್ತ

ಚಿನ್ನ ವಿಜೇತ: ₹ 75 ಲಕ್ಷ

ಬೆಳ್ಳಿ ವಿಜೇತ: ₹ 37.50 ಲಕ್ಷ

ಕಂಚು ವಿಜೇತ: ಇಬ್ಬರಿಗೆ ತಲಾ ₹ 18.75 ಲಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು