ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕನ್ ಓಪನ್ ಟೆನಿಸ್: ನಡಾಲ್‌ಗೆ ಮಣಿದ ಮೆಡ್ವೆಡೆವ್‌

ಫೈನಲ್‌ನಲ್ಲಿ ಕ್ಯಾಮರಾನ್ ನೋರಿ ಎದುರಾಳಿ; ಸಿಟ್ಸಿಪಾಸ್‌ಗೆ ನಿರಾಸೆ
Last Updated 26 ಫೆಬ್ರುವರಿ 2022, 11:10 IST
ಅಕ್ಷರ ಗಾತ್ರ

ಅಕಾಪಲ್ಕೊ, ಮೆಕ್ಸಿಕೊ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿರುವ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್‌ಗೆಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಆಘಾತವಾಗಿದೆ. ಸೆಮಿಫೈನಲ್‌ನಲ್ಲಿ ಅವರನ್ನು ಸ್ಪೇನ್‌ನ ರಫೆಲ್ ನಡಾಲ್ ಸೋಲಿಸಿದರು.

ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿರುವ ವಿಷಯ ಸೋಮವಾರ ಅಧಿಕೃತವಾಗಿ ಘೋಷಣೆಯಾಗಲಿದೆ. ಒಂದನೇ ಶ್ರೇಯಾಂಕದ ಮೆಡ್ವೆಡೆವ್ ಶನಿವಾರ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ನಡಾಲ್‌ಗೆ 3–6, 3–6ರಲ್ಲಿ ಮಣಿದರು.

ಫೈನಲ್‌ನಲ್ಲಿ ನಡಾಲ್ ಬ್ರಿಟನ್‌ನ ಕ್ಯಾಮರಾನ್ ನೋರಿ ವಿರುದ್ಧ ಸೆಣಸುವರು. ಮೂರನೇ ಶ್ರೇಯಾಂಕಿತ ಆಟಗಾರ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್ ಅವರನ್ನು ಆರನೇ ಶ್ರೇಯಾಂಕಿತ ನೋರಿ ನಾಲ್ಕರ ಘಟ್ಟದ ಪಂದ್ಯದಲ್ಲಿ 6–4, 6–4ರಲ್ಲಿ ಸೋಲಿಸಿದರು.

ಕಳೆದ ತಿಂಗಳಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಮೆಡ್ವೆಡೆವ್‌ ಅವರನ್ನು ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ನಡಾಲ್ ಮಣಿಸಿದ್ದರು. ಈ ಮೂಲಕ ದಾಖಲೆಯ 21ನೇ ಗ್ರ್ಯಾನ್‌ಸ್ಲಾಂ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಮೆಡ್ವೆಡೆವ್ ಇಲ್ಲಿ ನಿರಾಸೆಗೆ ಒಳಗಾದರು.

ಸರ್ಬಿಯಾದ ನೊವಾಕ್ ಜೊಕೊವಿಚ್ ಕೆಲವು ತಿಂಗಳಿಂದ ವಿಶ್ವ ರ‍್ಯಾಂಕಿಂಗ್‌ನ ಅಗ್ರಸ್ಥಾನದಲ್ಲಿದ್ದರು. ಆದರೆ ಲಸಿಕೆ ವಿವಾದದ ನಂತರ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡದೆ ವಾಪಸಾಗಿದ್ದರು. ಗುರುವಾರ ನಡೆದ ದುಬೈ ಓಪನ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲುವುದರೊಂದಿಗೆ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಳೆದುಕೊಳ್ಳುವುದು ಖಚಿತವಾಗಿತ್ತು.

ಸೆಮಿಫೈನಲ್‌ ಪಂದ್ಯವನ್ನು ಗೆಲ್ಲುವುದರೊಂದಿಗೆ ನಡಾಲ್ ಈ ವರ್ಷ ಆಡಿದ ಎಲ್ಲ 14 ಪಂದ್ಯಗಳನ್ನೂ ಗೆದ್ದ ಸಾಧನೆ ಮಾಡಿದರು. ಮೊದಲ ಸೆಟ್‌ನಲ್ಲಿ ಒಂದೇ ಒಂದು ಬ್ರೇಕ್ ಪಾಯಿಂಟ್ ಬಿಟ್ಟುಕೊಡದ ಅವರು ಎರಡನೇ ಸೆಟ್‌ನ ಮೊದಲ ಗೇಮ್‌ನಲ್ಲೇ ಮೆಡ್ವೆಡೆವ್ ಅವರ ಸರ್ವ್ ಮುರಿದರು. ಆದರೆ ನಾಲ್ಕನೇ ಗೇಮ್‌ನಲ್ಲಿ ಅವರನ್ನು ಮೆಡ್ವೆಡೆವ್ ಕಾಡಿದರು.

ಚೇತರಿಸಿಕೊಂಡ ನಡಾಲ್ 5–3ರ ಮುನ್ನಡೆ ಗಳಿಸಿದ್ದಾಗ ಮೆಡ್ವೆಡೆವ್ 40–0ಯಿಂದ ಮುನ್ನಡೆ ಸಾಧಿಸಿ ನಿರೀಕ್ಷೆ ಮೂಡಿಸಿದರು. ಆದರೆ ನಂತರ ಸ್ವಯಂ ತಪ್ಪುಗಳನ್ನು ಎಸಗಿ ಸೆಟ್ ಹಾಗೂ ಪಂದ್ಯವನ್ನು ಕಳೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT