ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ತಂದೆಯ ಹಾದಿಯಲ್ಲಿ ಮಿಕ್ ಶುಮಾಕರ್ ದಾಪುಗಾಲು

Last Updated 13 ಡಿಸೆಂಬರ್ 2020, 12:12 IST
ಅಕ್ಷರ ಗಾತ್ರ

ಕೆಂಚುಗೂದಲಿನ, ಕುಡಿಮೀಸೆಯ ಯುವಕ ಮಿಕ್ ಶುಮಾಕರ್ ಡಿಸೆಂಬರ್ ತಿಂಗಳ ಮೊದಲ ವಾರ ಮನಾಮದಲ್ಲಿ ನಡೆದ ಬಹರೇನ್ ಗ್ರ್ಯಾನ್‌ಪ್ರಿಯಲ್ಲಿ ಪ್ರಶಸ್ತಿ ಎತ್ತಿಹಿಡಿದಾಗ ಅಭಿಮಾನಿಗಳು ಮತ್ತು ಕಾರು ರೇಸಿಂಗ್‌ ಪ್ರಿಯರು ಕುಣಿದು ಕುಪ್ಪಳಿಸಿದರು. ಆದರೆ ಅಂತಿಮ ಗೆರೆ ದಾಟಿದ ಸಂದರ್ಭದಲ್ಲಿ ಮತ್ತು ಪ್ರಶಸ್ತಿ ಎತ್ತಿ ಹಿಡಿದಾಗ ಭಾವುಕರಾದರು. ಆಗ ಅವರಲ್ಲಿ ಆನಂದ ಹಾಗೂ ದುಃಖದ ಭಾವ ಮಡುಗಟ್ಟಿತ್ತು. ಫಾರ್ಮುಲಾ–2 ರೇಸ್‌ನಲ್ಲಿ ಪ್ರಶಸ್ತಿ ಗೆದ್ದದ್ದಕ್ಕೆ ಅವರು ಖುಷಿಪಿಟ್ಟಿದ್ದರು. ಆದರೆ ವರ್ಷಗಳಿಂದ ಹಾಸಿಗೆ ಹಿಡಿದಿರುವ, ಬಾಹ್ಯ ಪ್ರಪಂಚದ ಆಗು–ಹೋಗುಗಳ ಪ್ರಜ್ಞೆಯೇ ಇಲ್ಲದಿರುವ ತಂದೆಯನ್ನು ನೆನೆದುಕೊಂಡು ಬೇಸರಪಟ್ಟಿದ್ದರು.

ಏಳು ವರ್ಷಗಳಿಂದ ಮಲಗಿದಲ್ಲೇ ಇರುವ ಆ ಮಹಾನ್ ವ್ಯಕ್ತಿ ಬೇರೆ ಯಾರೂ ಅಲ್ಲ; ಫಾರ್ಮುಲಾ ಒನ್ ರೇಸ್‌ನಲ್ಲಿ ವಿಶ್ವದಾಖಲೆಯ ಒಡೆಯರಾಗಿರುವಜರ್ಮನಿಯ ಮೈಕೆಲ್ ಶುಮಾಕರ್. ಸ್ಕೀಯಿಂಗ್ ಮಾಡುವ ಸಂದರ್ಭದಲ್ಲಿ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ಮೈಕೆಲ್2013ರಿಂದ ಪ್ರಜ್ಞಾಹೀನರಾಗಿದ್ದಾರೆ. ದಾಖಲೆವೀರ ತಂದೆಯ ಹಾದಿಯಲ್ಲಿ ಹೆಜ್ಜೆ ಹಾಕಿರುವ ಮಿಕ್ ಭರವಸೆ ಮೂಡಿಸಿದ್ದಾರೆ. ತಂದೆ ಸಾಧನೆ ಮಾಡಿದ ಎಫ್‌–1 ವಾಹನದ ಆಸನದಲ್ಲಿ ಕುಳಿತುಕೊಳ್ಳಲು ತಾನು ಸಮರ್ಥ ಎಂಬುದನ್ನು ಈಗಾಗಲೇ ಸಾಬೀತು ಮಾಡಿರುವ ಅವರು ಮೋಟರ್ ರೇಸಿಂಗ್‌ನಲ್ಲಿ ಹೊಸ ಅಲೆ ಸೃಷ್ಟಿಸುವತ್ತ ಹೆಜ್ಜೆ ಹಾಕಿದ್ದಾರೆ. ಮುಂದಿನ ವರ್ಷದ ಫಾರ್ಮುಲಾ–1 ರೇಸಿಂಗ್‌ನಲ್ಲಿ ಹ್ಯಾಸ್ ಫೆರಾರಿ ತಂಡಕ್ಕಾಗಿ ಸ್ಪರ್ಧಿಸಲು ಈಗಾಗಲೇ ಒ‍ಪ್ಪಂದ ಮಾಡಿಕೊಂಡಿದ್ದಾರೆ.

ಒಂದೇ ಕುಟುಂಬದ ಮೂರನೇ ಎಫ್‌–1 ರೇಸಿಂಗ್ ಪಟು ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲು ಮಿಕ್‌ ಇನ್ನು ಹೆಚ್ಚು ಕಾಲ ಕಾಯಬೇಕಾದ ಅಗತ್ಯವಿಲ್ಲ. ಅವರ ತಂದೆ ಮೈಕೆಲ್ ಶುಮಾಕರ್ ಒಟ್ಟು 17 ವರ್ಷ ರೇಸಿಂಗ್ ಸರ್ಕೀಟ್‌ನಲ್ಲಿ ಮಿಂಚಿದ್ದರೆ, ತಂದೆಯ ಸಹೋದರ ರಾಲ್ಫ್ ಶುಮಾಕರ್ ಕೂಡ ಎಫ್‌–1 ರೇಸಿಂಗ್ ಪಟು ಆಗಿದ್ದರು.

2019ರಲ್ಲಿ ವೃತ್ತಿಪರ ರೇಸಿಂಗ್‌ ಕ್ಷೇತ್ರ ಪ್ರವೇಶಿಸಿದ ಮಿಕ್ ಜನಿಸಿದ್ದು ಸ್ವಿಟ್ಜರ್ಲೆಂಡ್‌ನಲ್ಲಿ. 2008ರ ವರೆಗೆ ವುಫ್ಲೆನ್ಸ್‌ನಲ್ಲಿನೆಲೆಸಿದ ನಂತರ ಗ್ಲ್ಯಾಂಡ್‌ಗೆ ಸ್ಥಳಾಂತರಗೊಂಡರು. ಇದೇ ಸಂದರ್ಭದಲ್ಲಿ ರೇಸಿಂಗ್‌ ಕ್ಷೇತ್ರದ ಕಡೆಗೆ ವಾಲಿದರು. ತಂದೆಯ ಖ್ಯಾತಿಯು ತನ್ನ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಆರಂಭದಲ್ಲಿ ಅವರು ತಾಯಿಯ ಬಾಲ್ಯದ ಹೆಸರಿನ ಒಂದು ಭಾಗವನ್ನು ಬಳಸಿಕೊಂಡು ಮಿಕ್ ಬೆಶ್ ಎಂಬ ಹೆಸರು ಇರಿಸಿಕೊಂಡಿದ್ದರು.

ಫೆರಾರಿ ಡ್ರೈವಿಂಗ್ ಅಕಾಡೆಮಿಯ ಜೊತೆ ಸಂಯೋಜನೆ ಹೊಂದಿರುವ ಪ್ರೀಮಾ ಪವರ್ ಟೀಮ್‌ಗಾಗಿ ಸ್ಪರ್ಧಿಸುತ್ತಿರುವ ಮಿಕ್ 2008ರಲ್ಲಿ ಕಾರ್ಟಿಂಗ್‌ ಸ್ಪರ್ಧೆಯ ಮೂಲಕ ಮೋಟರ್ ರೇಸಿಂಗ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು.2011 ಮತ್ತು 2012ರಲ್ಲಿ ಅಡಾಕ್ ಕಾರ್ಟ್ ಮಾಸ್ಟರ್ಸ್‌ನ ಕೆಎಫ್‌–3 ಕ್ಲಾಸ್ ವಾಹನದಲ್ಲಿ ಸ್ಪರ್ಧಿಸಿದ ಅವರು ಕ್ರಮವಾಗಿ ಒಂಬತ್ತು ಮತ್ತು ಏಳನೇ ಸ್ಥಾನ ಗಳಿಸಿದ್ದರು. 2013ರಲ್ಲಿ ಜರ್ಮನ್ ಜೂನಿಯರ್ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದರು. ಮುಂದಿನ ವರ್ಷ ಹೆಸರನ್ನು ಮಿಕ್ ಜೂನಿಯರ್ ಎಂದು ಬದಲಾಯಿಸಿಕೊಂಡರು. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು.

2014ರಲ್ಲಿ ಫಾರ್ಮುಲಾ ವಾಹನಗಳ ಟೆಸ್ಟ್ ಡ್ರೈವ್ ಪೂರ್ಣಗೊಳಿಸಿದ ಮಿಕ್ 2015ರಲ್ಲಿ ಫಾರ್ಮುಲಾ ಕಾರುಗಳನ್ನು ಚಲಾಯಿಸಲು ಆರಂಭಿಸಿದರು. ಹೆಸರಿನೊಂದಿಗೆ ಶುಮಾಕರ್ ಎಂದು ಬಳಸಲು ಆರಂಭಿಸಿದ್ದು ಕೂಡ ಇದೇ ಸಂದರ್ಭದಲ್ಲಿ. 2016ರಲ್ಲಿ ಎಫ್‌–4 ಕಾರುಗಳಲ್ಲಿ ಸ್ಪರ್ಧೆಗೆ ಇಳಿದು ಇಟಾಲಿಯನ್ ಚಾಂಪಿಯನ್‌ಷಿಪ್‌ಗಳಲ್ಲಿ ರನ್ನರ್ ಅಪ್ ಆದರು. 2017ರ ಏಪ್ರಿಲ್‌ನಲ್ಲಿ ಫಾರ್ಮುಲಾ–3 ಚಾಂಪಿಯನ್‌ಷಿಪ್‌ ಕಡೆಗೂ ಹೊರಳಿದರು. ಮೋಂಜಾ ಚಾಂಪಿಯನ್‌ಷಿಪ್‌ನಲ್ಲಿ ತೃತೀಯ ಸ್ಥಾನ ಗಳಿಸಿದ್ದು ಅವರ ಶ್ರೇಷ್ಠ ಸಾಧನೆಯಾಗಿತ್ತು.

ಫಾರ್ಮುಲಾ–2 ಚಾಂಪಿಯನ್‌ಷಿಪ್‌ಗಳಲ್ಲಿ ಮಿಕ್‌ ಪಾಲ್ಗೊಳ್ಳಲು ಶುರು ಮಾಡಿದ್ದು ಕಳೆದ ವರ್ಷವಷ್ಟೇ. ಬಹರೇನ್‌ನಲ್ಲಿ ನಡೆದ ಮೊದಲ ಚಾಂಪಿಯನ್‌ಷಿಪ್‌ನಲ್ಲಿ ಎಂಟನೇ ಸ್ಥಾನ ಗಳಿಸಿ ಗಮನ ಸೆಳೆದರು. ನಂತರ ಬಾಕುವಿನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ತೊಂದರೆಗೆ ಸಿಲುಕಿದರೂ ಐದನೇ ಸ್ಥಾನದಲ್ಲಿ ಸ್ಪರ್ಧೆ ಪೂರ್ತಿಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಏಳು–ಬೀಳುಗಳ ಹಾದಿಯಲ್ಲಿ ಸಾಗಿದ ಮಿಕ್ ಈ ವರ್ಷ ಇನ್ನಷ್ಟು ಚಾಣಾಕ್ಷ ಚಾಲನೆಯೊಂದಿಗೆ ಮುನ್ನುಗ್ಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT